ಬಂದ್ ಬಿಸಿಗೆ ತಲ್ಲಣಿಸಿದ ಅರಸೀಕೆರೆ
ಅರಸೀಕೆರೆ: ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ಕೆರೆ ಕೆರೆಗಳಿಗೆ ನೀರು ಒದಗಿಸಬೇಕು ಹಾಗೂ ತಮ್ಮ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರೂ ಜಿಲ್ಲಾಧಿಕಾರಿಗಳಾಗಲಿ, ಸರ್ಕಾರವಾಗಲಿ ಸ್ಪಂದಿಸದ ಕಾರಣ ಶನಿವಾರ ತಾಲ್ಲೂಕು ರೈತ ಸಂಘ, ಹಸಿರುಸೇನೆ ವತಿಯಿಂದ ಕರೆ ನೀಡಲಾಗಿದ್ದ ಅರಸೀಕೆರೆ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ಬಂದ್ನಿಂದಾಗಿ ಜನರು ಪರದಾಡಬೇಕಾಯಿತು.
ಎಲ್ಲವೂ ಸ್ತಬ್ದ: ಬಂದ್ ಕರೆಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಪಟ್ಟಣದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ತರಕಾರಿ ಮಾರುಕಟ್ಟೆ, ಕೃಷಿ ಉತ್ಪನ್ನ ಮಾರುಕಟ್ಟೆ, ಚಿತ್ರಮಂದಿರಗಳು, ಬ್ಯಾಂಕ್, ಸರ್ಕಾರಿ ಕಚೇರಿಗಳು ಬಂದ್ ಮಾಡುವ ಮೂಲಕ ಬೆಂಬಲಿಸಿದವು.
ಕೆಲವೆಡೆ ವಿನಾಯ್ತಿ: ಅಲ್ಲದೇ ಪರೀಕ್ಷೆ ನಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಬಸ್ ಸಂಚಾರಕ್ಕೆ ಬಂದ್ನಿಂದ ವಿನಾಯ್ತಿ ನೀಡಲಾಗಿತ್ತು. ತಾಲ್ಲೂಕು ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ಮಲತಾಯಿ ಧೋರಣೆಯ ಮೂಲಕ ಘೋಷಣೆಗಳನ್ನು ಕೂಗಿದರು. ರೈತ ಮುಖಂಡ ಮೇಳೇನಹಳ್ಳಿ ನಾಗರಾಜ್, ಕರವೇ ತಾಲ್ಲೂಕು ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ತಾಲ್ಲೂಕಿನ ಜನರು ದಶಕಗಳ ಕಾಲದಿಂದಲೂ ಬರದ ಸನ್ನಿವೇಶವನ್ನು ಎದುರಿಸುವಂತಾಗಿದೆ. ಸ್ವಾತಂತ್ರ್ಯಾನಂತರ ನಮ್ಮನ್ನಾಳುತ್ತಿರುವ ಸರ್ಕಾರಗಳು ರೈತಪರ ಬದ್ಧತೆ ಪ್ರದರ್ಶಿಸಲು ಸಂಪೂರ್ಣ ವಿಫಲವಾಗಿವೆ. ಜಿಲ್ಲೆಯ ಅತ್ಯಂತ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಈ ಭಾಗದ ಜನತೆ ಸಂಕಷ್ಟದ ಪರಿಸ್ಥಿತಿಯನ್ನು ಅರಿಯದ ಜನಪ್ರತಿನಿಧಿಗಳು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರಬರಬೇಕೆಂದು ಆಗ್ರಹಿಸಿದರು.
ಜನರ ಪರದಾಟ
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಸಾಗಿದ್ದರಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತ ಮುಖಂಡರು ಕೆಲ ಕಾಲ ಧರಣಿ ನಡೆಸಿದ್ದರಿಂದ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಅಗತ್ಯ ವಸ್ತುಗಳ ಖರೀದಿಗಾಗಿ ಪಟ್ಟಣಕ್ಕೆ ಆಗಮಿಸಿದ್ದ ಜನರು ಪರದಾಡುವಂತಾಗಿತ್ತು. ಆಟೋ ಚಾಲಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವರ್ತಕರ ಸಂಘ, ವಕೀಲರ ಸಂಘ, ವಿದ್ಯಾರ್ಥಿ ಸಂಘಟನೆಗಳು ಬಂದ್ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದವು.
ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ
ಪ್ರತಿಭಟನೆ ಆರಂಭಗೊಂಡು ವಾರ ಕಳೆಯುತ್ತಾ ಬಂದರೂ ಜಿಲ್ಲಾಧಿಕಾರಿಗಳು ಸೌಜನ್ಯಕ್ಕಾದರೂ ರೈತ ಮುಖಂಡರನ್ನು ಮಾತನಾಡಿಸುವ ಪ್ರಯತ್ನ ನಡೆಸಿಲ್ಲ. ಇಂತಹ ಉದ್ಧಟತನದ ಜಿಲ್ಲಾಧಿಕಾರಿಗಳಿಂದ ರೈತ ಸಮುದಾಯ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೂಡಲೇ ಇವರನ್ನು ವರ್ಗಾಯಿಸಬೇಕು. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಈಡೇರಿಸಲು ಉಸ್ತುವಾರಿ ಸಚಿವರು ಆಗಮಿಸಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

