ಹಾಸನ

ರೈತರ ಸಂಘಟನೆಗಳ ಅಹೋರಾತ್ರಿ ಧರಣಿ ಹಿಂದಕ್ಕೆ

Published On :

ಅರಸೀಕೆರೆ: ರಾಜ್ಯ ಸರ್ಕಾರ 6 ತಿಂಗಳೊಳಗೆ ಎತ್ತಿನ ಹೊಳೆ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಚಾಲನೆ ದೊರಕಿಸಲು ಶ್ರಮ ವಹಿಸುವುದಾಗಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಶನಿವಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ, ತಾಲೂಕು ರೈತ ಸಂಘ, ಹಸಿರುಸೇನೆ ಕಳೆದ 5 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ರೈತರು ಹಿಂಪಡೆದಿದ್ದಾರೆ.
ತಾಲೂಕು ಕಚೇರಿ ಆವರಣದಲ್ಲಿ ಕಳೆದ 6 ದಿನಗಳಿಂದ ತಾಲೂಕು ರೈತಸಂಘ ಮತ್ತು ನಾನಾ ಸಂಘಟನೆಗಳು ನಡೆಸುತ್ತಿದ್ದ ಆಹೋರಾತ್ರಿ ಹೋರಾಟದ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಶಾಸಕರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಿವಲಿಂಗೇಗೌಡ, ಕಾವೇರಿ ಮತ್ತು ಕೃಷ್ಣ ನದಿ ಜಲವಿವಾದ ಕಾರಣ ಅರಸೀಕೆರೆ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಾಧ್ಯವಿರಲ್ಲಿಲ್ಲ. ಈ ಸತ್ಯಾಂಶ ಮರೆಮಾಚಿಸಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ವಿಷಾದಿಸಿದರು.
ಸರ್ಕಾರಕ್ಕೆ ಒತ್ತಾಯ: ಜಿಲ್ಲೆಯಲ್ಲಿನ ಪ್ರಾಕೃತಿಕ ವೈಪಲ್ಯದ ಕಾರಣ ಮಳೆಯ ಅಭಾವದಿಂದ ತೀವ್ರವಾದ ಬರಗಾಲದ ಸಮಸ್ಯೆ ಎದುರಿಸುತ್ತಿರುವ ಅರಸೀಕೆರೆ ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದಕಾರಣ ತಾಲೂಕಿನ ಕೆರೆ ಕೆರೆಗೆ ನೀರನ್ನು ತುಂಬಿಸಲು ಎತ್ತಿನ ಹೊಳೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮಂಜುರಾತಿ ನೀಡಿದ್ದು ಟೆಂಡರ್ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್ ಅವರು ಶಂಕುಸ್ಥಾಪನೆ ಕಾರ್ಯವನ್ನು ಶೀಘ್ರನೆರವೇರಿಸಬೇಕೆಂದು ತಾವು ಒತ್ತಾಯಿಸುವುದಾಗಿ ಹೇಳಿದರು.
ಏತ ನೀರಾವರಿ ಯೋಜನೆಗೆ ಅನುಷ್‌ಠಾನಕ್ಕೆ ರಾಜ್ಯ ಸರ್ಕಾರ ಇನ್ನೂ 6 ತಿಂಗಳಲ್ಲಿ ಮುಂದಾಗದಿದ್ದರೇ ಪಕ್ಷಾತೀತವಾಗಿ ತಾವು ಕೂಡ ಬೀದಿಗಿಳಿದು ಹೋರಾಟ ಭಾಗವಹಿಸುವುದು ನಿಶ್ಚಿತ ಎಂದು ಪ್ರತಿಭಟನಾಕಾರರಿಗೆ ಭರವಸೆಯನ್ನು ಅವರು ನೀಡಿದರು.
ಪಿಎಲ್‌ಡಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಹುಲ್ಲೇಕೆರೆ ಕುಮಾರ್ ಮಾತನಾಡಿ, ಪೊಳ್ಳು ಭರವಸೆ ನೀಡಿ ಮತ ಪಡೆಯುವ ರಾಜಕಾರಣಿಗಳನ್ನು ಜನ ಅಟ್ಟಾಡಿಸಿ ಹೊಡೆಯುವ ದಿನಗಳು ಸಮೀಪಿಸುತ್ತಿವೆ. ಇನ್ನಾದರೂ ಮತಭಿಕ್ಷೆ ಬೇಡುವವರು ತಾಲ್ಲೂಕಿನ ರೈತ ಸಮುದಾಯದ ನೆರವಿಗೆ ನಿಲ್ಲಲಿ ಎಂದು ಗುಡುಗಿದರು.
ಇದಕ್ಕೂ ಮುನ್ನ ತಾಲೂಕಿನ ಕೊಳಗುಂದ ಕೇದಿಗೆ ಮಠದ ಶ್ರೀಜಯಚಂದ್ರಶೇಖರ ಸ್ವಾಮೀಜಿ ಮತ್ತು ಮಾಡಾಳು ಗ್ರಾಮದ ನಿರಂಜನ ಪೀಠದ ಶ್ರೀರುದ್ರಮುನಿ ಸ್ವಾಮೀಜಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ತಾಲೂಕಿನ ಮೂಲಭೂತ ಸಮಸ್ಯೆಗಳು ಸೇರಿದಂತೆ ರೈತರ ಅನೇಕ ಸಮಸ್ಯೆಗಳ ನಿವಾರಣೆ ಬಗ್ಗೆ ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಉಪವಿಭಾಗಾಧಿಕಾರಿ ಶರತ್ ಅವರಿಗೆ ಪ್ರತಿಭಟನಾಕಾರರು ಮನವಿಪತ್ರ ನೀಡಿದರು. ಹೆಚ್ಚುವರಿ ಎಸ್ಪಿ ಜೆ.ಕೆ. ರಶ್ಮಿ, ತಹಸೀಲ್ದಾರ್ ಕೇಶವಮೂರ್ತಿ ಉಪಸ್ಥಿತರಿದ್ದರು. ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು, ಗೌರವಾಧ್ಯಕ್ಷ ಜವನಹಳ್ಳಿ ನಿಂಗಪ್ಪ, ಅಣ್ಣಾಯಕನಹಳ್ಳಿ ಶಿವಮೂರ್ತಿ, ರವೀಶ್ ಬಾಬು, ಬಿ.ಬಿ. ಶಿವಕುಮಾರ್, ಬಿಸಲೇಹಳ್ಳಿ ನಾಗರಾಜು, ಗಂಗಾಧರ್, ಶಿವಲಿಂಗಪ್ಪ, ಕುಮಾರ್, ಮಂಜುನಾಥ್, ಸಿದ್ದೇಶ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.