ಹಾಸನ

ಮದ್ಯದಂಗಡಿ ಸ್ಥಳಾಂತರಿಸದಿದ್ದರೆ ಬೇಲೂರು ಬಂದ್

Published On :

ಬೇಲೂರು: ನೆಹರು ನಗರದ ಮದೀನ ಮಸೀದಿ ಸಮೀಪ ತೆರೆದಿರುವ ಮದ್ಯದಂಗಡಿಯನ್ನು ಸ್ಥಳಾಂತರಿಸದಿದ್ದಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳೊಂದಿಗೆ ಸೇರಿ ಬೇಲೂರು ಬಂದ್ ಮಾಡಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಠಾವಧಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನೆಹರು ನಗರ ಮದೀನ ಮಸೀದಿಯ ಸದಸ್ಯ ಎಚ್.ಆರ್. ಅಹಮದ್ ಆಲೀಕಾನ್ ತಿಳಿಸಿದರು.
ಇಲ್ಲಿನ ಅಬಕಾರಿ ಇಲಾಖೆಗೆ ಭೇಟಿ ನೀಡಿದ ಅವರು, ನೆಹರು ನಗರದಲ್ಲಿನ ಮದೀನ ಮಸೀದಿ ಸಮೀಪ ತೆರೆದಿರುವ ಮಧ್ಯದಂಗಡಿಯನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಅಬಕಾರಿ ನಿರೀಕ್ಷಕ ಕೃಷ್ಣಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂಗಡಿಗೆ ಅವಕಾಶ ಬೇಡ: ಮದ್ಯದಂಗಡಿಯನ್ನು ಮಸೀದಿ, ದೇವಸ್ಥಾನ, ಶಾಲಾ ಕಾಲೇಜುಗಳಿಂದ ನೂರು ಮೀಟರ್‌ಗಳಿಗಿಂತ ದೂರದಲ್ಲಿರಬೇಕು. ಆದರೆ, ಮಸೀದಿಯಿಂದ ಅಳತೆ ಮಾಡಿದರೆ ಕೇವಲ 90 ಮೀಟರ್ ಮಾತ್ರ ಬರುತ್ತಿದೆ. ನಾವುಗಳು ಎಷ್ಟೇ ಹೇಳಿದರೂ ಸಹ ಅಬಕಾರಿ ಇಲಾಖೆ ಅಧಿಕಾರಿಗಳು ಮಸೀದಿ ಸಮೀಪವೆ ಮದ್ಯದಂಗಡಿ ತೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮದ್ಯದಂಗಡಿಯ ಸುತ್ತಮುತ್ತ, ಮುಸ್ಲಿಂ ಸಮೂದಾಯ ಮತ್ತು ಬಡವರೇ ವಾಸ ಮಾಡುತ್ತಿರುವುದರಿಂದ ನೆಹರು ನಗರದ ಮದೀನ ಮಸೀದಿ ಸಮೀಪ ಯಾವುದೇ ಕಾರಣಕ್ಕೂ ಮದ್ಯದಂಗಡಿಗೆ ಅವಕಾಶ ಮಾಡಿಕೊಡ ಬಾರದು ಎಂದು ತಿಳಿಸಿದರು.
ಅವಕಾಶ ನೀಡಿದ್ದು ಸರಿಯಲ್ಲ: ನಂತರ ಮಾತನಾಡಿದ ಪುರಸಭಾ ಸದಸ್ಯ ಬಿ.ಎಸ್. ಮಂಜುನಾಥ್, ಅಬಕಾರಿ ಇಲಾಖೆ ಸಿಬ್ಬಂದಿ, ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡದೆ ಅಳತೆ ಮಾಡಿ ಮಧ್ಯದಂಗಡಿ ತೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ.  ಮಸೀದಿ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಮತ್ತೊಮ್ಮೆ ಅಳತೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ ಅವರು, ಮದ್ಯದಂಗಡಿಯನ್ನು ಶೀಘ್ರ ತೆರೆವುಗೊಳಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.  ಈ ಸಂದರ್ಭದಲ್ಲಿ ನೆಹರು ನಗರದ ಮದೀನ ಮಸೀದಿಯ ಅಧ್ಯಕ್ಷ ಅಹಮದ್ ಆಲಿ, ಮಸೀದಿಯ ಸಯ್ಯದ್ ಅರ್ಷದ್, ಸಯ್ಯದ್ ಇಲಿಯಾಸ್, ಖಲೀಂ, ಮಹಮದ್ ಅಜಾಂ ಇನ್ನಿತರರಿದ್ದರು.
ನಿರೀಕ್ಷಕರು ಏನಂತಾರೆ?
ನೆಹರು ನಗರದಲ್ಲಿನ ಮದೀನ ಮಸೀದಿ ಸಮೀಪ ತೆರೆದಿರುವ ಮದ್ಯದಂಗಡಿಯನ್ನು ಸ್ಥಳಾಂತರಿಸ ಬೇಕೆಂದು ಒತ್ತಾಯಿಸಿ ಮಸೀದಿ ಸದಸ್ಯರು ಕೊಟ್ಟ ಮನವಿಯನ್ನು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ನಿರೀಕ್ಷಕ ಕೃಷ್ಣಮೂರ್ತಿ, ಈ ವಿಚಾರವಾಗಿ ಈಗಾಗಲೇ ನಮ್ಮ ಇಲಾಖೆಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಮತ್ತು ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.