ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ
ಹಾಸನ: ಸರ್ಕಾರಗಳಿಗೆ ಯೋಜನೆಗಳನ್ನು ಘೋಷಣೆ ಮಾಡುವಾಗ ಇರುವ ಉತ್ಸಾಹ, ಶ್ರದ್ಧೆ ಜಾರಿಯಲ್ಲಿ ಇರುವುದಿಲ್ಲ ಎಂಬುದಕ್ಕೆ ಇದು ಜೀವಂತ ಸಾಕ್ಷಿಯಾಗುತ್ತದೆ.
ಹಾಸನ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿಗಳ ಕೊರತೆ ಸಿಕ್ಕಾಪಟ್ಟೆ ಇದೆ. ಇದರಿಂದ ರೋಗಿಗಳಿಗೆ ಆರೈಕೆ ನೀಡುವುದು ಹಾಗೂ ವಿವಿಧ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರವಲ್ಲೂ ತೊಂದರೆಯಾಗುತ್ತಿದೆ.
ಆಲ್-ಇನ್-ಒನ್ ವೈದ್ಯರು: ಜಿಲ್ಲೆಯಲ್ಲಿ 135 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 15 ಸಮುದಾಯ ಆರೋಗ್ಯ ಕೇಂದ್ರಗಳು, 7 ತಾಲೂಕು ಕೇಂದ್ರಗಳ ಆಸ್ಪತ್ರೆಗಳಿವೆ. ಸಮುದಾಯ ಆಸ್ಪತ್ರೆಯಲ್ಲಿ 5 ವೈದ್ಯರು, ಓರ್ವ ತಜ್ಞ ವೈದ್ಯರು ಇರಬೇಕು. ಆದರೆ ತಜ್ಞ ವೈದ್ಯರಿಲ್ಲ. ಇಬ್ಬರಿಗಿಂತ ಹೆಚ್ಚು ಸಾಮಾನ್ಯ ವೈದ್ಯರಿಲ್ಲ. 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರು ವೈದ್ಯರು ಇಲ್ಲ. 12 ಕೇಂದ್ರಗಳಲ್ಲಿ ವೈದ್ಯರೇ ಔಷಧಿಗಳು ಕೊಡಬೇಕು. ವೈದ್ಯರೇ ಆಸ್ಪತ್ರೆ ಬೀಗ ತೆಗಿಯಬೇಕು. ಮುಚ್ಚಬೇಕು. ಹೀಗೆ ಆಲ್-ಇನ್-ಒನ್ ಎಂಬಂತೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೂಕ್ತ ರೀತಿ ನಿರ್ವಹಣೆ ಇಲ್ಲ: ಎಲ್ಲಾ ರೀತಿಯ ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯೇತರ ಸಿಬ್ಬಂದಿಗಳು ಒಟ್ಟು 2934 ಇರಬೇಕು. ಆದರೆ, ಈಗಿರುವುದು 1662 ಮಾತ್ರ. ಇನ್ನೂ 1272 ನಾನಾ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಪ್ರಮುಖವಾಗಿ ಬೇಕಾದ ವೈದ್ಯರು, ನರ್ಸ್ಗಳು ಆರೋಗ್ಯ ಸಹಾಯಕರ ಹುದ್ದೆಗಳು ಹೆಚ್ಚು ಖಾಲಿ ಇವೆ. ಇದರಿಂದ ಸೂಕ್ತ ರೀತಿಯಲ್ಲಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಹುದ್ದೆಗಳು ಖಾಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಫಲಾನುಭವಿಗಳನ್ನು ತಲುಪಿಸುವ ಮಹತ್ವ ಕಾರ್ಯ ನಿರ್ವಹಿಸುವ ಕ್ಷೇತ್ರ ಕಿರಿಯ ಮಹಿಳಾ ಆರೋಗ್ಯ ಸರ್ಕಾರಿಯರ 117 ಹುದ್ದೆಗಳು (ಒಟ್ಟು ಹುದ್ದೆಗಳು 478) ಖಾಲಿ ಇದ್ದರೇ, ಪುರುಷ ಆರೋಗ್ಯ ಸಹಾಯಕರ 122 ಹುದ್ದೆಗಳು (ಒಟ್ಟು ಹುದ್ದೆಗಳು 239) ಖಾಲಿ ಇವೆ. ಹಿರಿಯು ಪುರುಷ ಆರೋಗ್ಯ ಸಹಾಯಕರ 32 ಹುದ್ದೆಗಳು ಖಾಲಿ ಇವೆ. ಇರಬೇಕಾಗಿದ್ದು 52, ಇರುವುದು 20. ತಜ್ಞ ವೈದ್ಯರು 164 ಇರಬೇಕು. ಇರುವುದು 77 ಮಂದಿ ಮಾತ್ರ. 87 ಹುದ್ದೆಗಳ ಖಾಲಿ. ಸಾಮಾನ್ಯ ಕರ್ತವ್ಯ ನಿರತ ವೈದ್ಯರ ಇರಬೇಕಾಗಿದ್ದು 134. ಇರುವುದು 114, 20 ಹುದ್ದೆಗಳು ಖಾಲಿ ಇವೆ.
ದಂತ ವೈದ್ಯರು 21 ಇರಬೇಕಾಗಿದ್ದು, 11 ಮಂದಿ ಮಾತ್ರ ಇದ್ದಾರೆ. 10 ಹುದ್ದೆಗಳು ಭರ್ತಿ ಆಗಿಲ್ಲ. ಗ್ರೂಪ್ ಡಿ ನೌಕರರು ಇರಬೇಕಾಗಿದ್ದು 783, ಇರುವುದು 292, ಖಾಲಿ ಇರುವ ಹುದ್ದೆಗಳ ಸಂಖ್ಯೆ 491. 295 ನರ್ಸ್ಗಳು ಇರಬೇಕಾದ ಕಡೆ 197 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 98 ಹುದ್ದೆಗಳು ಖಾಲಿ ಇವೆ. ಹೀಗೆ ಶೇ. 43 ರಷ್ಟು ಹುದ್ದೆಗಳು ಖಾಲಿ ಇವೆ.
ಯೋಜನೆಗಳ ಜಾರಿಗೆ ಅಡಚಣೆ: ರಾಷ್ಟ್ರೀಯ ಗ್ರಾಮಾಂತರ ಆರೋಗ್ಯ ಯೋಜನೆಯಡಿ ಗರ್ಭಿಣಿ ಸ್ತ್ರೀಯರಿಗೆ 6 ತಿಂಗಳಿಗೆ ರು. ಸಾವಿರ ನೀಡಬೇಕು. ಇದನ್ನು ಕಾಲ ಕಾಲಕ್ಕೆ ನೀಡಲು ಕಷ್ಟವಾಗಿದೆ. ರಾಜ್ಯದ ಜನನಿ ಸುರಕ್ಷಾ ಯೋಜನೆಯಡಿ (ಜೆಎಸ್ವೈ) ಯೋಜನೆಯಡಿ ಪ್ರಸೂತಿ ಆರೈಕೆಗೆ 1000 ರು. ನೀಡಬೇಕು. ಇದನ್ನು ನೀಡಲಾಗುತ್ತಿಲ್ಲ. ಮಡಿಲು ಕಿಟ್ ಯೋಜನೆಯಡಿ ಬಾಣಂತಿಯರಿಗೆ 19 ವಸ್ತುಗಳನ್ನು ಕಿಟ್ ನೀಡಬೇಕು. ಅದು ಸರಿಯಾಗಿ ನೀಡುತ್ತಿಲ್ಲ. ತಾಯಿ- ಭಾಗ್ಯ ಯೋಜನೆಯಡಿ ಗರ್ಭಿಣಿ ಸ್ತ್ರೀಯರ ಆರೋಗ್ಯದ ಮೇಲುಸ್ತುವಾರಿ ಮಾಡಬೇಕು. ಇದನ್ನು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಕಿರಿಯ ಮತ್ತು ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಸಂಖ್ಯೆ ಕಡಿಮೆ ಇರುವುದು.
ಪತ್ರ ಬರೆಯಲಾಗಿದೆ: ಖಾಲಿ ಇವೆ. ಶೀಘ್ರ ಭರ್ತಿ ಮಾಡಬೇಕು ಎಂದು ಪತ್ರ ಬರೆಯಲಾಗಿದ್ದು ಸರ್ಕಾರ ಸದ್ಯದಲ್ಲೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ಗ್ರಾಮಾಂತರ ಪ್ರದೇಶದ ಬಡರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ರೀತಿಯ ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕಾಗಿದೆ.
ಇಲ್ಲೇ ವೈದ್ಯರಿಲ್ಲ!
ಅಚ್ಚರಿ ಸಂಗತಿಯೆಂದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಅವರು ಹಾಲಿ ವಾಸ ಮಾಡುತ್ತಿರುವ ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಒಬ್ಬರೇ ಒಬ್ಬರು ವೈದ್ಯರಿಲ್ಲ.
ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

