ದೇವರ ಕೃಪೆಯಿದ್ದರೆ ಅಧಿಕಾರ ಹೋಗದು: ದೇವೇಗೌಡ
ಕನ್ನಡಪ್ರಭ ವಾರ್ತೆ ಅರಸೀಕೆರೆ ಫೆ 24
ರಾಜಕೀಯ ಕ್ಷೇತ್ರದಲ್ಲಿ ಸುಳ್ಳು, ವಂಚನೆ, ಮೋಸ ಅಪಾರ ಕಾಲ ಶಾಶ್ವತವಾಗಿ ನಿಲ್ಲಲು ಸಾಧ್ಯವಿಲ್ಲ. ಪ್ರಕೃತಿಯ ನಿಯಮದಂತೆ ಅಧಿಕಾರದ ಚಕ್ರ ನಿರಂತರವಾಗಿ ಹರಿಯುವ ನೀರಿನಂತೆ ಇರಬೇಕು. ತಮ್ಮ ಮೇಲೆ ಭಗವಂತನ ಕೃಪೆಯಿದ್ದರೇ ಯಾರಿಂದಲೂ ಅಧಿಕಾರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಗೀಜಿಹಳ್ಳಿ ಗ್ರಾಮದ ಸಮೀಪದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿರ್ಮಿಸಿರುವ ನೂತನ ಶೀತಲೀಕರಣ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರೈತ ಸಮುದಾಯದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ತಾವು ದೇಶದ ಪ್ರಧಾನಿ ಸ್ಥಾನಕ್ಕೆ ಹೋಗುತ್ತೇವೆ ಎಂದು ಯಾರು ಭಾವಿಸಿರಲ್ಲಿಲ್ಲ. ದೇವರ ಕೃಪೆಯಿಂದ ತಾವು ಛಲಬಿಡದ ತ್ರಿವಿಕ್ರಮನಂತೆ ಜನತೆಯ ಪರವಾಗಿ ಹೋರಾಡಿ ಫಲವಾಗಿ ನಾಡಿನ ಜನತೆ ಆರ್ಶೀವಾದ ಮಾಡಿ ಪ್ರಧಾನಿ ಸ್ಥಾನಕ್ಕೆ ಕೂರಿಸಿದರು. ತಮ್ಮ 10 ತಿಂಗಳ ಅಧಿಕಾರದಲ್ಲಿ ದೇಶದ ಭವಿಷ್ಯದ ಚಿಂತನೆಯಲ್ಲಿ ಎಲ್ಲಾ ಜಾತಿ, ಧರ್ಮಗಳ ಸಮುದಾಯದ ಬಡವರ ಶ್ರೇಯಸ್ಸು ಬಯಸಿ ಕೆಲಸ ಮಾಡಿದ್ದೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಪರಿಹಾರ: ತಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹಾಸನ ಜಿಲ್ಲೆಯೂ ಸೇರಿದಂತೆ ರಾಜ್ಯದ ಪ್ರತಿಯೊಂದು ಗ್ರಾಮಗಳ ಕುಡಿವ ನೀರಿನ ಸಮಸ್ಯೆ ಬಗೆಹರಿಸುವುದು. ಅಲ್ಲದೆ ಕೆರೆಕಟ್ಟೆಗಳಿಗೆ ನೀರು ಹರಿಸುವ ಸಂಕಲ್ಪ ತಮ್ಮದಾಗಿದೆ ಎಂದ ಅವರು, ಬಿಜಾಪುರದಲ್ಲಿ ತಮ್ಮ ಪ್ರತಿಮೆಯನ್ನೇ ಅಲ್ಲಿನ ಜನತೆ ನಿಲ್ಲಿಸಿದ್ದಾರೆ. ಅದರೆ ಪಕ್ಕದ ಗ್ರಾಮದಲ್ಲಿ ಜನರಿಗೆ ಕುಡಿವ ನೀರಿಲ್ಲದೆ ಪರದಾಡುವ ಸಂಕಷ್ಟವನ್ನು ತಾವು ಕಣ್ಣಾರೆ ಕಂಡಿದ್ದೇನೆ ಎಂದು ನೊಂದು ನುಡಿದರು.
ಶೀರ್ಘದಲ್ಲಿಯೇ ತಕ್ಕ ಪಾಠ: ರಾಜಕಾರಣಿಗಳಿಗೆ ಅಧಿಕಾರ ಎಂದು ಶಾಶ್ವತ ಅಲ್ಲ ಎಂಬ ಸತ್ಯವನ್ನು ಕಂಡುಕೊಂಡಿದ್ದು, ವಿನಾಕಾರಣ ತಮ್ಮ ಮೇಲೆ ಸುಳ್ಳು, ಮೋಸ, ವಂಚನೆಗಳ ಅಪಾದನೆಗಳನ್ನ ಮಾಡುವ ಮೂಲಕವೇ ರಾಜಕಾರಣ ಮಾಡುತ್ತೇವೆ ಎಂಬ ಜನನಾಯಕರಿಗೆ ಜಿಲ್ಲೆಯ ಜನತೆ ತಕ್ಕ ಪಾಠವನ್ನು ಕಲಿಸುವ ಸಂದರ್ಭ ಶೀರ್ಘದಲ್ಲಿಯೇ ಬರಲಿದೆ ಎಂದು ಎಚ್ಚರಿಸಿದರು.
ಗ್ರಾಮೀಣಾ ಪ್ರದೇಶದ ರೈತರು ಕೃಷಿ ಕ್ಷೇತ್ರಕ್ಕೆ ಪೂರಕವಾದ ಪಶುಪಾಲನೆ ಮಾಡುವ ಮೂಲಕ ತಮ್ಮ ಆರ್ಥಿಕ ಸುಧಾರಣೆ ಕಂಡು ಕೊಳ್ಳಬಹುದಾಗಿದ್ದು, ಹಾಲು ಉತ್ಪಾದನೆಗೆ ಪ್ರತಿಯೊಂದು ಗ್ರಾಮದಲ್ಲಿ ಮಹಿಳಾ ಸಂಘಗಳನ್ನು ಸ್ಥಾಪನೆ ಮಾಡುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬಹುದೆಂದು ತಿಳಿಹೇಳಿದರು.
ಪ್ರಶಂಸೆ: ಮಾಜಿ ಪ್ರಧಾನಿ ಅಟಲ್ಜೀ ಅವರ ವ್ಯಕ್ತಿತ್ವವನ್ನು ಕೊಂಡಾಡಿದ ಅವರು ಅಂತಹ ವಿಶಾಲ ಸದ್ಭಾವನೆಯುಳ್ಳ ಆದರ್ಶ ವ್ಯಕ್ತಿಗಳು ರಾಜಕಾರಣದಲ್ಲಿ ಇಂದು ವಿರಳವಾಗಿರುವ ಕಾರಣ ಸಮಸ್ಯೆಗಳು ನೂರಾರು ಬೆಳೆಯುತ್ತಿವೆ. ಪ್ರಧಾನಿ ಅಭ್ಯರ್ಥಿಯಾಗಿದ್ದ ಎಲ್.ಕೆ. ಅಡ್ವಾಣಿರನ್ನು ತೆರೆಯ ಮರೆಗೆ ಸರಿಸಿದವರು ಈಗ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಹೊರಟಿದ್ದಾರೆ. ಅಂತೆಯೇ ಇಂದಿನ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಸಜ್ಜನರಾಗಿದ್ದು, ಸಂಕಷ್ಟದ ಸ್ಥಿತಿಯಲ್ಲಿ ಅಧಿಕಾರವನ್ನು ನಡೆಸುತ್ತಿದ್ದಾರೆ. ಅಂತ ಧೀಮಂತ ವ್ಯಕ್ತಿಗಳ ವಿರುದ್ಧ ವೈಯಕ್ತಿಕ ಟೀಕೆ ಯಾರು ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕೆಡದಂತೆ ಶೀಥಲೀಕಣ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಮಾತನಾಡಿ, ಸುಮಾರು 9 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಇಲ್ಲಿನ ಶೀಥಲೀಕರಣ ಕೇಂದ್ರದಲ್ಲಿ ಪ್ರತಿನಿತ್ಯ 1.5 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಿ ಅದರ ಗುಣಮಟ್ಟ ಕೆಡದಂತೆ ಶೀಥಲೀಕರಿಸಿ ಪ್ರಮುಖ ಕೇಂದ್ರಗಳಿಗೆ ಕಳುಹಿಸಲಾಗುವುದು. ರಾಜ್ಯದಲ್ಲಿಯೇ ಪ್ರಥಮವಾಗಿ 2 ಲೈನ್ ಸ್ವೀಕರಣೆ ಮತ್ತು ಶೀಥಲೀಕರಣ ವ್ಯವಸ್ಥೆ ಇಲ್ಲಿ ಮಾಡಲಾಗಿದ್ದು, ಆತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಂಧನ ಉಳಿತಾಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಹೇಳಿದರು.
ಸಹಕಾರ ನೀಡಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಅರಸೀಕೆರೆ ತಾಲೂಕಿನಲ್ಲಿ ಈ ಹಾಲಿನ ಶೀತಲೀಕರಣ ಕೇಂದ್ರ ಸ್ಥಾಪನೆ ಮಾಡಲು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ಉತ್ತಮ ಸಹಕಾರ ನೀಡಿದ್ದಾರೆ. ಅಂತೆಯೇ ಈ ಕೇಂದ್ರವನ್ನು ಉತ್ತಮ ಶ್ರೇಣಿಯ ಡೈರಿಯಾಗಿ ಅಭಿವೃದ್ಧಿ ಪಡಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ನೂರಾರು ಮಂದಿಗೆ ಸರ್ಕಾರಿ ಉದ್ಯೋಗ ಕೊಡಿಸಿರುವ ತಾವುಗಳು ಈ ಕೇಂದ್ರ ಸ್ಥಾಪನೆಗೆ ನಿಸ್ವಾರ್ಥವಾಗಿ ಮುಂದೆ ಬಂದು ಜಮೀನು ನೀಡಿರುವ ಎಲ್ಲಾ ರೈತ ಕುಟುಂಬಕ್ಕೆ ಹೆಚ್ಚಿನ ಪ್ರೋತ್ಸಾಹಧನ ಹಾಗೂ ಉದ್ಯೋಗ ಕೊಡಿಸುವ ವಾಗ್ದಾನ ನೀಡಬೇಕೆಂದು ವಿನಂತಿಸಿದರು.
ಸಮಾರಂಭದ ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ಸದಸ್ಯ ಬಿ.ವಿ. ಕರಿಗೌಡ, ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಪಂ ಸದಸ್ಯರಾದ ಹುಚ್ಚೇಗೌಡ, ಪಾರ್ವತಮ್ಮ, ರತ್ನಮ್ಮ, ತಾಪಂ ಮಾಜಿ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹಾಗೂ ಇತರರು ಇದ್ದರು.
ರೈತಗೀತೆಗೆ ಅವಮಾನ
ಸಭೆ ಆರಂಭದಲ್ಲಿ ರೈತಗೀತೆ ಹಾಡುವ ವೇಳೆಯಲ್ಲಿ ಸಭೆಯಲ್ಲಿದ್ದ ಗಣ್ಯರು ಎದ್ದು ನಿಂತು ಗೌರವ ಸೂಚಿಸುವ ಕಾಳಜಿ ತೋರಲಿಲ್ಲ. ಸಭೆಯಲ್ಲಿದ್ದ ಯಾಮೊಬ್ಬ ಮುಖಂಡರೂ ಎದ್ದು ನಿಂತು ಗೌರವ ಸೂಚಿಸದೆ ಅಪಮಾನ ವೆಸಗಿದ ಪ್ರಸಂಗ ಕಾರ್ಯಕ್ರಮದಲ್ಲಿ ಜರುಗಿತು. ಯಥಾರಾಜಾ ತಥಾಪ್ರಜಾ ಎಂಬಂತೆ ಸಭೀಕರು ಎದ್ದು ನಿಂತು ಗೌರವ ನೀಡದೆ ತಮ್ಮ ಮುಖಂಡರನ್ನು ಅನುಸರಿಸಿದರೆ ಬೆರಳೆಣಿಕೆಯಷ್ಟು ಪತ್ರಕರ್ತರು ಎದ್ದುನಿಂತು ಗೌರವ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

