ಹಾಸನ

ದಾನ, ಧರ್ಮಗಳಿಂದ ಉನ್ನತಿ ಸಾಧ್ಯ: ಶಾಸಕ

Published On :

ಕನ್ನಡಪ್ರಭ ವಾರ್ತೆ    ಅರಸೀಕೆರೆ    ಫೆ 24
ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಸಮಾಜಕ್ಕೆ ಮಾಡಿದ ದಾನ, ಧರ್ಮಗಳ ಆಧಾರದ ಜನಮಾನಸದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗಿದ್ದು, ಅಂತಹ ಮಹನೀಯರು ಇಂದು ನಮ್ಮೆಲ್ಲರಿಗೂ ಪರಮ ಪೂಜ್ಯರು ಹಾಗೂ ಪ್ರಾತ- ಸ್ಮರಣಿಯರು ಆಗಿದ್ದಾರೆಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ಕೆಂಪೇಗೌಡ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅನೇಕ ಜಾತಿ, ಧರ್ಮ, ಪಂಥಗಳ ವೈವಿದ್ಯತೆಯ ನಮ್ಮ ಕನ್ನಡನಾಡನ್ನು ಸಮೃದ್ಧವಾಗಿ ಕಟ್ಟಿ ಬೆಳೆಸುವಲ್ಲಿ ಅನೇಕ ಮಹನೀಯರ ಪರಿಶ್ರಮವಿದ್ದು, ಅಂತಹ ಎಲ್ಲಾ ಮಹನೀಯರ ಬಗ್ಗೆ ಗೌರವ ಸೂಚಿಸಿ ವಿಶೇಷ ಸ್ಥಳಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ ಎಂದರು.
ಪಕ್ಷಾತೀತವಾಗಿ ಬೆಂಬಲ: ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲು ರಾಜ್ಯದ ಎಲ್ಲಾ ಶಾಸಕರು ಪಕ್ಷಾತೀತವಾಗಿ ಬೆಂಬಲಿಸಿದ್ದು, ಸ್ವಾಗತರ್ಹ ಸಂಗತಿ ಎಂದರು. ಅಂತೆಯೇ ಅನೇಕ ಮಹನೀಯರ ಜನ್ಮಾದಿನಾಚರಣೆಗೆ ರಜಾ ಘೋಷಣೆ ಮಾಡಿರುವ ಸರ್ಕಾರ ಕೆಂಪೇಗೌಡರ ಜನ್ಮ ದಿನಾಚರಣೆಗೆ ಸರ್ಕಾರಿ ರಜಾ ಘೋಷಣೆ ಮಾಡಲು ತಾವು ಎಲ್ಲಾ ಶಾಸಕರ ವಿಶ್ವಾಸವನ್ನು ಪಡೆದು ಸದನದ ಒಳಗೆ ಪ್ರಸ್ತಾವನೆ ಮಾಡುವುದಾಗಿ ಭರವಸೆ ನೀಡಿದರು.
ಅನೇಕರ ಪ್ರಾಣ ಬಲಿದಾನ: ಬೆಂಗಳೂರಿನ ಕೆಂಪೇಗೌಡ ಅಭಿವೃದ್ಧಿ ಬಳಗದ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಮಾತನಾಡಿ, ಸನಾತನ ಸಂಸ್ಕೃತಿ ಹೊಂದಿರುವ ಕನ್ನಡನಾಡಿನ ನೆಲೆ, ಜಲ, ಸಂರಕ್ಷಣೆಗಾಗಿ ಅನೇಕರ ಪ್ರಾಣ ಬಲಿದಾನ ಮಾಡಿದ್ದಾರೆ.    ಅಂತಹ ಮಹನೀಯರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕಬುಕ್ಕರು, ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ಅಗ್ರಪಂಥಿಯಲ್ಲಿದ್ದು, ಬೆಂಗಳೂರಿನಲ್ಲಿ 130ಕ್ಕೂ ಹೆಚ್ಚಿನ ಕೆರೆಗಳು ಮತ್ತು 116 ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಈ ಮನುಕುಲದ ಶ್ರೇಯಸ್ಸಿಗಾಗಿ ಅವರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು ಎಂದರು.
ಕೀರ್ತಿಗೆ ಪಾತ್ರ: ಉದ್ಯಮಿ ಜೆಪಿಎನ್ ಜಯಣ್ಣ ಮಾತನಾಡಿದರು.
ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ ಪ್ರಸ್ತಾವಿಕ ಮಾತನಾಡಿದರು. ಚಲನಚಿತ್ರ ನಟ ಧನಂಜಯ, ಅಣ್ಣಾನಾಯಕನಹಳ್ಳಿ ವಿಜಯಕುಮಾರ್, ಹುಲ್ಲೇಕೆರೆ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಟರಾಜು, ಕೋಡಿಹಳ್ಳಿ ವಾಸು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ಸಾನಿಧ್ಯ ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ವಹಿಸಿದ್ದರು.
 ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸರ್ಕಾರಿ ಜೆ.ಸಿ. ಆಸ್ಪತ್ರೆ ವೈದ್ಯರಾದ ಡಾ.ಪ್ರದೀಪ್, ಹಾಲಿ ಸೈನಿಕರಾದ ಬೊರನಕೊಪ್ಪಲಿನ ಮಾಂತೇಶ್, ಪ್ರಾಂಶುಪಾಲ ಚಂದ್ರಶೇಖರ್, ವೃತ್ತ ನಿರೀಕ್ಷಕ ಗಂಗಾಧರಪ್ಪ, ವಕೀಲಮೂರ್ತಿ, ನಾಟ್ಯರಾಣಿ ಶೋಭ, ಡೋಲ್ವಾದಕ ವಿಜಯಕುಮಾರ್, ಹೇರ್ ಡ್ರೆಸಸ್ ತಿಮ್ಮಯ್ಯ, ಆಟೋ ಚಾಲಕ ಬಾಬು, ಪ್ರಗತಿಪರ ರೈತ ಚಗಚಗೆರೆ ಶಂಕರೇಗೌಡ, ಚಿಟ್ಟೆ ಮೇಳದ ಕುಮಾರಯ್ಯ, ಸಂಕೋಡನಹಳ್ಳಿ ಎಸ್.ಟಿ. ಮಹಾಲಿಂಗಪ್ಪರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.