ರಸ್ತೆ ದುರಸ್ತಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಅರಕಲಗೂಡು ಫೆ.24
ರಸ್ತೆ ದುರಸ್ತಿ ನಮ್ಮ ಆಸಕ್ತಿ, ತಾರತಮ್ಯ ಬೇಡ ಹಾಸನ ಜಿಲ್ಲೆಯ ಮೇಲೆ, ಹಾಸನ ಜಿಲ್ಲೆ ಪುಣ್ಯಭೂಮಿ ಹೀಗೆ ಮಧುರ ಹಾಡಿನೊಂದಿಗೆ, ಆಲಾಪನೆಗಳೊಂದಿಗೆ ಖ್ಯಾತ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ ಅವರು ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಸೋಮವಾರ ತಮ್ಮ ವಿನೂತನ ಪ್ರತಿಭಟನೆ ಆರಂಭಿಸಿದರು.
ಹಲವು ಜನ ಸಂಗೀತ ವಿದ್ವಾಂಸರುಗಳೊಂದಿಗೆ ಬೆಂಗಳೂರಿನಿಂದ ಬಂದಿದ್ದ ಅವರು ಇಲ್ಲಿನ ಪ್ರವಾಸಿ ಮಂದಿರದಿಂದ ಮೊದಲು ಅ.ನ.ಕೃ ವೃತ್ತ, ದೊಡ್ಡಮ್ಮ ವೃತ್ತ, ಎಚ್.ಎನ್. ನಂಜೇಗೌಡ ವೃತ್ತಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ವೇದಿಕೆ ಏರಿದರು. ಈ ವೇಳೆ ಪಟ್ಟಣದ ಹಲವು ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಪದ್ಮನಾಭ ಅವರನ್ನು ಸ್ವಾಗತಿಸಿದರು.
ಮೂಲ ಉದ್ದೇಶ ಸರ್ಕಾರದ ಗಮನ: ನಂತರ ಮಾತನಾಡಿ, ತಮಗೆ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ ಕುರಿತ ರಾಗ ದ್ವೇಷಗಳಿಂದ ತಾವು ಪ್ರತಿಭಟನೆಗೆ ಮುಂದಾಗಿಲ್ಲ, ನಮಗೆ ಎಲ್ಲರೂ ಒಂದೇ, ನಮ್ಮವರೇ. ನಮ್ಮ ಮೂಲ ಉದ್ದೇಶ ಸರ್ಕಾರದ ಗಮನ ಸೆಳೆಯುವುದು ಮಾತ್ರವಾಗಿದೆ ಎಂದ ಅವರು, ತಾಲೂಕು ಮತ್ತು ಜಿಲ್ಲೆಯನ್ನು ಕಳೆದ ಮೂವತ್ತು ವರ್ಷಗಳಿಂದಲೂ ನಿರ್ಲಕ್ಷಿಸಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ರಸ್ತೆ ದುರವಸ್ಥೆ ಈ ತಾಲೂಕಿನ ಘನತೆಗೆ ಧಕ್ಕೆ ತರುವಂತಿದೆ. ಹೊರ ಊರುಗಳಿಂದ ಬರುವ ನೆಂಟರಿಷ್ಟರು ನಮ್ಮನ್ನು ಅಣಕಿಸುವ ರೀತಿಯಲ್ಲಿದೆ. ಇಲ್ಲಿನ ಸ್ಥಿತಿಗತಿ ರಸ್ತೆಗೆ ಮೊದಲ ಆದ್ಯತೆ ನೀಡಿ ದುರಸ್ಥಿಗೊಳಿಸಿ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ, ಮಾಜಿ ಪಟ್ಟಣ ಪಂಚಾಯ್ತಿ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಚುನಾಯಿತ ಶಾಸಕರ ನಿರ್ಲಕ್ಷವೂ ರಸ್ತೆಗಳ ಇಂದಿನ ದುರವಸ್ಥೆಗೆ ಕಾರಣ ಎಂದು ನೇರವಾಗಿ ಟೀಕಿಸಿದ ಅವರು, ಪ್ರತಿಭಟನೆ ನಡೆಯುವ ವೇಳೆ ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕೆಲವರು ಕಾಮಗಾರಿಗೆ ಮಂಜೂರಾತಿ ದೊರೆತಿರುವುದಾಗಿ ಹೇಳುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಆಗದಿದ್ದುದು ನಿನ್ನೆಯಿಂದ ಸಾಧ್ಯವಾದುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಮತದಾರರ ತಪ್ಪು: ನಾಗರಿಕ ವೇದಿಕೆ ಹಾಗೂ ಪೊಟ್ಯಾಟೋ ಕ್ಲಬ್ನ ಅಧ್ಯಕ್ಷ ಎಚ್. ಯೋಗಾರವುಶ್ ಮಾತನಾಡಿ, ಮತದಾರರು ಮಾಡಿದ ತಪ್ಪಿನಿಂದಲೂ ತಾಲೂಕು ಇಂತಹ ದುಸ್ಥಿತಿ ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮತದಾರರು ಕೇಳುವ ಮನೋಭಾವ ಬೆಳೆಸಿಕೊಳ್ಳುವವರೆಗೂ ಈ ತಾಲೂಕಿನ ಅಭಿವೃದ್ಧಿ ಕಷ್ಟ ಸಾಧ್ಯ ಎಂದು ನುಡಿದ ಅವರು, ಶಾಸಕರು ತಾಲೂಕನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ, ಕೂಡಲೇ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಉಗ್ರವಾದ ಹೋರಾಟಗಳನ್ನು ಮುಂದುವರೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಎಸ್.ಎನ್. ನಾಗೇಂದ್ರ, ಆಟೋ ಚಾಲಕರ ಸಂಘದ ಅಧ್ಯಕ್ಷ ಪುಟ್ಟರಾಜ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ್, ಪ್ರವೀಣ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಯೋಗೇಶ್, ಮಂಜು, ಮ್ಯಾಕ್ಸಿ ಕ್ಯಾಬ್ ಚಾಲಕರು ಮತ್ತು ಮಾಲೀಕರ ಸಂಂಘದ ಅಧ್ಯಕ್ಷ ಪಿ.ಎನ್. ರಮೇಶ್, ವಾಟಾಳ್ ರಮೇಶ್, ಶಶಿಕುಮಾರ್, ಶಶಿಕುಮಾರ್, ವಿಸ್ಮಯ ಶಿವು, ಕುಮಾರಸ್ವಾಮಿ, ಮಾದೇಶ್ ಇತರರು ವಹಿಸಿದ್ದರು.
ಉಪ ವಿಭಾಗಾಧಿಕಾರಿ ಡಾ. ಮಧುಕೇಶ್ವರ್ ಮತ್ತು ತಹಸೀಲ್ದಾರ್ ಚಿದಾನಂದ ಅವರುಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ ಆರ್.ಕೆ. ಪದ್ಮನಾಭ ಮತ್ತು ಯೋಗಾರವುಶ್ ಅವರಿಂದ ಮನವಿ ಪತ್ರ ಸ್ವೀಕರಿಸಿದರು.
ಬಂದ್ ಯಶಸ್ವಿ: ನಾಗರಿಕ ವೇದಿಕೆ ಮತ್ತು ನಾನಾ ಸಂಘಟನೆಗಳು ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅರಕಲಗೂಡು ಬಂದ್ ಮಾಡುವಂತೆ ಮಾಡಿದ್ದ ಮನವಿಗೆ ಬೆಂಬಲಿಸಿ ಸೋಮವಾರ ಬೆಳಗಿನಿಂದಲೇ ಸಂಪೂರ್ಣ ಬಂದ್ ಆಚರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

