ಕಾರ್ಯ ನಿರ್ವಹಣಾಧಿಕಾರಿ ಕಾರ್ಯವೈಖರಿಗೆ ತರಾಟೆ
ಹೊಳೆನರಸೀಪುರ: ಇಲ್ಲಿನ ತಾಲೂಕು ಪಂಚಾಯ್ತಿಯಲ್ಲಿ ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಕಾರಿಯ ನಡುವೆ ಸಾಮರಸ್ಯ ಮತ್ತು ಸಮನ್ವಯದ ಕೊರತೆಯಿರುವುದು ಕುಸುಮಸಣ್ಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಪ್ರಮುಖ ಅಂಶವಾಗಿ ಕಂಡುಬಂದರೆ, ಸಾಮಾನ್ಯ ಸಭೆಯು ಪ್ರತಿಯೊಂದು ಹಂತದಲ್ಲೂ ಕಾರ್ಯನಿರ್ವಹಣಾಧಿಕಾರಿಯ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಳ್ಳುವ ಸಭೆಯಾಗಿ ಮಾರ್ಪಾಡಾಯಿತು.
ತಾಪಂ ನೂತನ ಅಧ್ಯಕ್ಷೆ ಕುಸುಮ ಸಣ್ಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆ ಹಾಗೂ 2013-14ನೇ ಸಾಲಿನ ಆರ್ಥಿಕ ವರ್ಷದ ಕಡೆ ಸಭೆ ಇದಾಗಿದ್ದು, ಸಭೆಯ ಆರಂಭದಿಂದಲೂ ಇಲ್ಲಿನ ತಾಪಂ ಕಾರ್ಯನಿರ್ವಾಹಣಾಧಿಕಾರಿ ತಮ್ಮಣ್ಣಗೌಡ ಕಾರ್ಯವೈಖರಿಯ ಕುರಿತಂತೆ ಬಹುತೇಕ ಸದಸ್ಯರು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳ ಸಮ್ಮುಖದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು.
ಸಭೆಯ ಆರಂಭದಲ್ಲಿಯೇ ಭಾರತ ಸರ್ಕಾರದ ನಿರ್ಮಲ ಭಾರತ್ ಅಭಿಯಾನ ಯೋಜನೆಯ ಅನುಷ್ಠಾನದ ಸಾಂಪ್ರದಾಯಿಕ ಅನುಷ್ಠಾನವನ್ನು ತಾಪಂ ಅಧ್ಯಕ್ಷೆ ಕುಸುಮಸಣ್ಣಸ್ವಾಮಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಚೇರಿಯಲ್ಲೇ ಸ್ವಚ್ಛತೆ ಕೊರತೆ: ಈ ಸಂದರ್ಭದಲ್ಲಿ ತಾಲೂಕಿನಲ್ಲಿ ನಿರ್ಮಲ ಭಾರತ್ ಅಭಿಯಾನವನ್ನು ಆರಂಭಿಸುತ್ತಿದ್ದೀರಿ, ಆದರೆ ತಾಪಂ ಕಚೇರಿಯ ಆವರಣವೇ ಸ್ವಚ್ಛತೆಯಿಲ್ಲದೇ, ಹಾವು ಚೇಳುಗಳ ವಾಸಸ್ಥಾನವಾಗಿದೆ. ಹೀಗಾದರೆ ನಾವು ಯಾರಿಗೆ ಯೋಜನೆ ತಲುಪಿಸಬೇಕು, ನಾವು ಯಾರಿಗೆ ಮಾದರಿಯಾಗಿದ್ದೀವಿ ಎಂದು ಕಾರ್ಯನಿರ್ವಹಣಾಧಿಕಾರಿಯನ್ನು ಸದಸ್ಯೆ ಕೆ.ಎಂ. ಚಂದ್ರಮತಿ ತರಾಟೆಗೆ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ಸಭೆಗೆ ಬಂದ ಸದಸ್ಯ ಸಿ.ಆರ್. ಮಂಜುನಾಥ್ ಬರುತ್ತಲೇ ಈ ಯೋಜನೆಯನ್ನು ಗ್ರಾಮೀಣ ಭಾಗಗಳಲ್ಲಿ ನಿಮ್ಮ ಕಾರ್ಯದರ್ಶಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ಸಮರ್ಪಕವಾಗಿ ಜಾಗೃತಿ ಮೂಡಿಸಿಲ್ಲ, ಅಲ್ಲದೇ ಸರ್ಕಾರದ ಈ ಯೋಜನೆಯಲ್ಲಿನ ಅನುದಾನವನ್ನು ಪಡೆಯಲು ಪಂಚಾಯ್ತಿಯಲ್ಲಿನ ಅಧಿಕಾರಿಗಳಿಗೆ ಪರ್ಸೆಂಟೇಜ್ ನೀಡಬೇಕು. ಇದನ್ನು ನಿಮ್ಮ ಕೈಯಲ್ಲಿ ತಪ್ಪಿಸಲು ಆಗಿಲ್ಲ ಎಂದು ಆರೋಪಿಸಿದರು.
ನೀಡದ ಯೋಜನೆಯ ಹಣ: ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ಕೆ.ಎಂ. ಪುಷ್ಪಾಗೌಡೇಗೌಡ ಅವರು ಈ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡು ವರ್ಷವಾದರೂ ಯೋಜನೆಯ ಹಣವನ್ನೇ ನೀಡಿಲ್ಲ, ಹೀಗಾದ್ರೆ ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಸರ್ಕಾರದ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ತಾಪಂ ಹಾಗೂ ಗ್ರಾಪಂ ಹಂತದಲ್ಲಿ ಎಲ್ಲರ ಸಹಕಾರ, ಒಗ್ಗಟ್ಟು ಮುಖ್ಯವಾಗುತ್ತದೆ. ಆದರೆ ತಾಲೂಕಿನಲ್ಲಿ ಪ್ರತಿ ಗ್ರಾಪಂ ಕಾರ್ಯದರ್ಶಿ ಹಾಗೂ ಪಿಡಿಒಗಳ ಮೇಲೆ ಕಾರ್ಯನಿರ್ವಾಹಣಾಧಿಕಾರಿಗಳಿಗೆ ನಿಯಂತ್ರಣ ಇಲ್ಲ. ಹೀಗಾದರೆ ಯೋಜನೆಯ ಅನುಷ್ಠಾನ ಹೇಗೆ ಎಂದು ಮಾಜಿ ಉಪಾಧ್ಯಕ್ಷ ನಂಜುಂಡಪ್ಪ ದೂರಿದರು.
ಇದೇನು ಸಭೆನಾ...?: ತಾಪಂ ಸದಸ್ಯರಾದ ನಾವು ಕೆಲವು ಇಲಾಖೆಗಳ ಸಮಸ್ಯೆಗಳ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿದರೆ ಎತ್ತುವುದಿಲ್ಲ, ಹೀಗಾದ್ರೆ ಹೇಗೆ ಸದಸ್ಯರಾದ ನಾವುಗಳು ಕೇವಲ ಸಭೆಗೆ ಬಂದು ಕೂತಿದ್ದು, ಎದ್ದುಹೋದರೆ ಸಾಕೇ, ಹೋಗಲಿ ಸಭೆಯಲ್ಲಿ ಕೇಳೋಣವೆಂದರೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಸಭೆಗೆ ಬರದೇ, ಕೆಳಹಂತದ ಸಿಬ್ಬಂದಿಯನ್ನು ಕಳಿಸುತ್ತಾರೆ. ಇದೇನು ಸಭೆನಾ ಎಂದು ಎಚ್.ಬಿ. ನಂಜುಂಡಪ್ಪ ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭದಲ್ಲಿ ಬಹುತೇಕ ಸದಸ್ಯರು ದನಿಗೂಡಿಸಿದರು. ಸಾಮಾನ್ಯ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಇಲಾಖೆಯ ಅಧಿಕಾರಿಗಳು ಬಂದಿದ್ದೂ ಅಲ್ಲದೇ, ಅವರಲ್ಲಿಯೂ ಸಂಬಂಧಿಸಿದ ಅಧಿಕಾರಿಗಳು ಹಾಜರಿರದೇ, ಅವರ ಇಲಾಖೆಯ ಸಿಬ್ಬಂದಿಯನ್ನು ಸಭೆಗೆ ಕಳಿಸಿದ್ದು ಸಭೆಯಲ್ಲಿದ್ದ ಸದಸ್ಯರನ್ನು ಕೆರಳಿಸಿತು.
ಅಧಿಕಾರಿಗಳಿಗೆ ದೂರವಾಣಿ ಕರೆ: ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಜರಾತಿಯನ್ನು ಕೂಗುವಂತೆ ಸಭೆಯಲ್ಲಿ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳ ಹಾಜರಾತಿಯನ್ನು ಕೂಗಿದ ಪ್ರಸಂಗ ನಡೆದರೆ, ಇದೇ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಣಾಧಿಕಾರಿಯು ಸಭೆಗೆ ಬಾರದಿರುವ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಭೆಗೆ ಬರುವಂತೆ ಸೂಚಿಸುತ್ತಿದ್ದ ಘಟನೆ ತಾಲೂಕಿನ ಇಲಾಖೆಗಳ ಮೇಲೆ ತಾಪಂ ಆಡಳಿತಕ್ಕಿರುವ ಹಿಡಿತ ಹಾಗೂ ಕಾರ್ಯಧ್ಯಕ್ಷತೆಯನ್ನು ಅನುಮಾನಿಸುವಂತಿತ್ತು.
ಅಂತೂ ಪ್ರತೀ ಸಭೆಗಳಲ್ಲೂ ತಾಪಂ ಹಾಗೂ ಸದಸ್ಯರುಗಳ ದೂರು ಹಾಗೂ ಸೂಚನೆಗಳನ್ನು ಚಾಚೂ ತಪ್ಪದೇ ಕೇಳುವ ಮತ್ತು ಪಾಲಿಸಲು ಒದ್ದಾಡುವ ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ, ಕಾರ್ಮಿಕ ಇಲಾಖೆ ಮೊದಲಾದ ಬೆರಳೆಣಿಕೆಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಸಲ್ಲಿಸಿದರೆ, ಇನ್ನು ಕೆಲವು ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ವರದಿಯನ್ನು ಓದಿದ ಕೂಡಲೇ ತುರ್ತು ಕೆಲಸವಿರುವ ಕಾರಣ ನೀಡಿ ಸಭೆಯಿಂದ ಒಬ್ಬೊಬ್ಬರಾಗಿ ಹೊರಟ ಪ್ರಸಂಗ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷ ಡಿ. ಕೃಷ್ಣಪ್ಪ, ಸದಸ್ಯರಾದ ಹುಚ್ಚೇಗೌಡ, ನಂಜುಂಡಪ್ಪ, ಕೆ.ಕೆ. ಲೋಕೇಶ್, ಶಶಿಕಲ, ಭಾಗ್ಯವತಿ, ಲತ, ಎನ್.ಆರ್. ಅನಂತಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

