ಆಲೂರಲ್ಲಿ ಶ್ರದ್ಧೆಯ ಮಹಾಶಿವರಾತ್ರಿ
ಆಲೂರು: ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಹಬ್ಬವನ್ನು ಗುರುವಾರ ಆಚರಿಸಲಾಯಿತು.
ತಾಲೂಕಿನ ಸಂಗಮೇಶ್ವರ ದೇವಸ್ಥಾನ, ಅಯ್ಯಪ್ಪ ದೇವಸ್ಥಾನ, ಶನೇಶ್ವರ ದೇವಸ್ಥಾನ, ಭರತೂರಿನ ರಂಗನಾಥಸ್ವಾಮಿ ದೇವಸ್ಥಾನ, ಅರಸಮ್ಮ ದೇವಸ್ಥಾನ, ಸಿಂಗಾಪುರ ಶನೇಶ್ವರಸ್ವಾಮಿ ದೇವಸ್ಥಾನ, ಹಳೇ ಆಲೂರು ತಿರುಮಲ ರಂಗನಾಥಸ್ವಾಮಿ ದೇವಸ್ಥಾನ, ಅಡಿಬಯಲು ರಂಗನಾಥ ದೇವಸ್ಥಾನಗಳು ಸೇರಿದಂತೆ ತಾಲೂಕಿನ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಹೋಮ-ಹವನಾದಿಗಳನ್ನು ಕೈಗೊಂಡಿದ್ದರು.
ಪುಷ್ಪಗಳಿಂದ ಅಲಂಕಾರ: ಪಟ್ಟಣದ ಸಂಗಮೇಶ್ವರ ದೇವಾಲಯದಲ್ಲಿ ಶಿವನ ಲಿಂಗಕ್ಕೆ ಬಿಲ್ವಪತ್ರೆ, ತುಳಸಿ ಸೇರಿದಂತೆ ನಾನಾ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ರಾತ್ರಿ ಮಹಾಪೂಜೆ, ರುದ್ರಾಭಿಷೇಕ, ಧನ್ವಂತರಿ ರುದ್ರ ಹೋಮಗಳು ಪೂರ್ಣಾಹುತಿ, ಅಜ್ಜಾವಲೋಕನ ಹಾಗೂ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಪೂಜಾ ವಿಧಿವಿಧಾನಗಳು: ಮಾವನೂರು ಜಗದೀಶ ಶಾಸ್ತ್ರಿ ಹಾಗೂ ತಂಡದವರು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ತಾಲೂಕು ವೀರಶೈವ ಸಂಘದ ವತಿಯಿಂದ ಪ್ರಸಾದ ವಿನಿಯೋಗವನ್ನು ನೆರವೇರಿಸಿದರು. ಮರಸು ಗ್ರಾಮದಲ್ಲಿ ಇರುವ ವಿಜಯದುರ್ಗಾ ಕ್ಷೇತ್ರದ ಅರಸಮ್ಮ ದೇವಾಲಯದಲ್ಲಿ ವಿಶೇಷ ಶಿವಲಿಂಗ ದರ್ಶನ, ರುದ್ರಾಭಿಷೇಕ ಮೃತ್ಯುಂಜಯ ಜಪ, ಹೂವಿನ ಸೇವೆ, ಬಿಲ್ವಪತ್ರೆ ಅರ್ಚನೆ, ಪ್ರಸಾದ ಸೇವೆ ಹಾಗೂ ಮುಂತಾದವು ನಡೆದವು. ಸಂಜೆ ನೂತನವಾಗಿ ಪ್ರತಿಷ್ಠಾಪನೆಯಾಗಿರುವ ಶ್ರೀಲಿಂಗಕ್ಕೆ ನಾನಾ ಪೂಜೆ ನಡೆದವು. ರಾತ್ರಿ 8ಕ್ಕೆ ಚಿಕ್ಕಮಗಳೂರಿನ ಸಿಟ್ಟೂರಿನ ವಿದಾಯ ಯಕ್ಷಮಂಡಳಿಯಿಂದ ಭಸ್ಮಾಸುರ ಮಹಿಮೆ ಎಂಬ ಯಕ್ಷಗಾನವನ್ನು ಪ್ರದರ್ಶಿಸಲಾಯಿತು.
ಅಲ್ಲದೆ ವಿಜಯದುರ್ಗ ಶಿವನ ಮಹಿಮೆಗಳ ಲೇಜರ್ ಶೋ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಖಂಡಸಾಯಿ ಭಜನಾ ಮಂಡಳಿಯವರು ರಾತ್ರಿ12 ರಿಂದ ಬೆಳಗ್ಗೆವರೆಗೂ ಭಜನೆ ಮಾಡುವ ಮೂಲಕ ಜಾಗರಣೆ ಮಾಡಿದರು. ವಿಶೇಷವಾಗಿ ತಾಲೂಕಿನಲ್ಲಿ ಭಕ್ತಾಧಿಗಳು ಉಪವಾಸ ವ್ರತಕೈಗೊಂಡು ಸಂಜೆಯ ನಂತರ ನಾನಾ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

