ಮುಂದಿನ ತಲೆಮಾರಿಗೆ ಕನ್ನಡ ಉಳಿಸಿ: ಡಾ. ಸಿದ್ದಲಿಂಗಯ್ಯ
ಕೆ. ಸಣ್ಣೇಗೌಡ ವೇದಿಕೆ: ಕನ್ನಡ ಪರಂಪರೆ, ಶರಣರ ವಚನಗಳು ಮತ್ತು ದಾಸರ ಕೀರ್ತನೆಗಳ ಮಹತ್ವವನ್ನು ಮುಂದಿನ ತಲೆಮಾರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕನ್ನಡ ಉಳಿಸಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕವಿ ಡಾ. ಸಿದ್ದಲಿಂಗಯ್ಯ ಹೇಳಿದ್ದಾರೆ.
ಹಾಸನ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ಕರ್ನಾಟಕ ನರ್ಮದಾ ನದಿಯವರೆಗೂ ಪಸರಿಸಿತ್ತು. ತರುವಾಯ ಕರ್ನಾಟಕ ವಿಶಾಲತೆ ಕಡಿಮೆಯಾಯಿತು. ಕವಿರಾಜ ಮಾರ್ಗ ಕೃತಿಯಲ್ಲಿ ಕನ್ನಡ ಮತ್ತು ಕನ್ನಡಿಗರ ಮಹತ್ವವನ್ನು ಎತ್ತಿ ಹಿಡಿಯಲಾಗಿದೆ. ಇದು ಕನ್ನಡ ಭಾಷೆಯ ಭವ್ಯತೆ, ಮೇಲಿರಿಮೆಗೆ ಸಾಕ್ಷಿಯಾಗಿದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಪರ ಹೋರಾಟಗಳು ಪ್ರಾಮಾಣಿಕತೆ ನೆಲೆಗಟ್ಟಿನಲ್ಲಿ ನಡೆಯಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕನ್ನಡ ಸಂಸ್ಕೃತಿಯ ಕಣ್ಣು: ಜಾಗತಿಕರಣದ ಸಂದರ್ಭದಲ್ಲಿ ಇಂಗ್ಲೀಷ್ ಅನಿವಾರ್ಯ ಇರಬಹುದು. ಆದರೆ ಪ್ರಾದೇಶಿಕತೆ ಸಂಸ್ಕೃತಿ, ಪರಂಪರೆಯನ್ನು ಸಾರುವ ಭಾಷೆಯನ್ನು ಉಳಿಸಿಕೊಳ್ಳುವುದು ಅಗತ್ಯ. ಕನ್ನಡ ಎಂಬುದು ಕೇವಲ ಭಾಷೆಯಲ್ಲ, ಬೇರು. ಹಾಸನ ಜಿಲ್ಲೆ ನಡೆದಾಡುವ ಜಂಗಮ, ಜನಪದ ವಿದ್ವಾಂಸ ಡಾ. ಎಸ್.ಕೆ. ಕರೀಂಖಾನ್, ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ರೀತಿಯ ಕೊಡುಗೆ ನೀಡಿದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಂಥಹ ಮಹಾನ್ ಸಾಹಿತಿಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಂ.ಎಸ್. ಶೇಖರ್ ಮಾತನಾಡಿ, ನಿಸರ್ಗವೇ ಸತ್ಯ. ನಿಸರ್ಗವಲ್ಲದ್ದು ಮಿಥ್ಯ ಎಂಬುದನ್ನು ಅರಿಯಬೇಕು. ಪ್ರಾಮಾಣಿಕ ನಾಯಕರ ಕೊರತೆಯಿದೆ. ಪ್ರಾಮಾಣಿಕರು ಸಿಕ್ಕರೆ ಜನರು ಅಪ್ಪಿಕೊಳ್ಳುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಜನಪ್ರತಿನಿಧಿಗಳು ಚಕ್ಕರ್: ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣನರನ್ನು ಬಿಟ್ಟರೇ ಆಹ್ವಾನ ಪತ್ರಿಕೆಯಲ್ಲಿ ಹೆಸರಿಸಿದ್ದ ಶಾಸಕರು ಮತ್ತಿತರ ಜನಪ್ರತಿನಿಧಿಗಳು ಯಾರು ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಶೇಖರ್, ಹಿಂದೆ 13ನೇ ಸಮ್ಮೇಳನ ನಡೆದ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಇತ್ತು. ಅದಕ್ಕಾಗಿ ಯಾರು ಬಂದಿರಲಿಲ್ಲ. ಈಗ ಅದ್ಯಾವ ಸಂಹಿತೆಯೂ ಇಲ್ಲ. ಇದು ಸರಿಯಲ್ಲ ಎಂದು ವಿಷಾದಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ: ಸಮ್ಮೇಳನದ ಅಂಗವಾಗಿ ಹೊರ ತಂದ ಹೊಯ್ಸಳ ಸಿರಿ ಸ್ಮರಣ ಸಂಚಿಕೆಯನ್ನು ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ಬಸವರಾಜು ಬಿಡುಗಡೆ ಮಾಡಿದರು. ಸ್ಮರಣ ಸಂಚಿಕೆ ಗೌರವ ಸಂಪಾದಕ ಡಾ. ಎಚ್.ಎಲ್. ಮಲ್ಲೇಶ್ ಗೌಡ, ಸಂಪಾದಕ ಅರಕಲಗೂಡು ಜಯಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚಿದಾನಂದ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ದನ್ ಪ್ರಸ್ತಾವಿಕ ಭಾಷಣ ಮಾಡಿದರು. ಮೆರವಣಿಗೆ ಸಮಿತಿ ಅಧ್ಯಕ್ಷ ಡಾ. ವೈ.ಎಸ್. ವೀರಭದ್ರಪ್ಪ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಗೊರೂರು ಶಿವೇಶ್, ಸಿ.ಕೆ. ಹರೀಶ್, ಖಚಾಂಚಿ ಎಸ್.ಡಿ. ರಮೇಶ್, ಹಾಸನ ತಾಲೂಕು ಘಟಕದ ಅಧ್ಯಕ್ಷ ಕೆ.ಆರ್. ಮಮತೇಶ್, ಅರಕಲೂಡು ಘಟಕದ ಸಿ.ಕೆ. ಶೈಲಶ್ರೀ, ಚನ್ನರಾಯಪಟ್ಟಣದ ಎಚ್.ಎನ್. ಲೋಕೇಶ್, ಸಕಲೇಶಪುರ ಘಟಕದ ಮಂಜುನಾಥ್, ಮೇಲೇಗೌಡ, ಆಲೂರು ತಾ.ನ ಪಿ.ಗುಲಾಂ ಸತ್ತಾರ, ಪುಟ್ಟ ಸೋಮಪ್ಪ ಮತ್ತು ಬಿ.ಎನ್. ಆನಂದ್ ಕುಮಾರ್, ಬೆಂಗಳೂರು ಘಟಕದ ಅಧ್ಯಕ್ಷ ತಿಮ್ಮೇಶ ಪ್ರಭು ಇದ್ದರು.
ವಿಚಾರಗೋಷ್ಠಿ: ನಂತರ ವಿಶ್ರಾಂತ ಕುಲಪತಿ ಪ್ರೊ. ಚಿದಾನಂದ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಭಾಷೆ, ಸಾಹಿತ್ಯ, ತಂತ್ರಜ್ಞಾನ ಕುರಿತ ವಿಚಾರಗೋಷ್ಠಿಯಲ್ಲಿ ಸಾಹಿತಿ ಚಂದ್ರಕಾಂತ ಪಡೆಸೂರ್, ಲೇಖಕಿ ಚ.ಸರ್ವಮಂಗಳ, ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ಮಾತನಾಡಿದರು. ವಿಸ್ಮಯ ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಮಾರ್ಗದರ್ಶನದಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಪಡಿಸಿದ ಎಸ್.ಡಿ. ಆನಂದ್, ಮಂಜಾಚಾರಿ ಮತ್ತು ಸುಧೀರ್ರನ್ನು ಸನ್ಮಾನಿಸಿಲಾಯಿತು. ಸಂಜೆ ಮುರುಳಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

