ಹಾಸನ

ಕೊಲೆ ಪ್ರಕರಣ: ಇಬ್ಬರು ಯುವಕರ ಬಂಧನ

Published On :

ಹೊಳೆನರಸೀಪುರ: ಕಳೆದ ಐದು ದಿನಗಳ ಹಿಂದಷ್ಟೇ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ನಡೆದಿದ್ದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣವನ್ನು ಭೇದಿಸಿರುವ ಇಲ್ಲಿನ ಪೊಲೀಸರು ಯಶಸ್ಸಿಯಾಗಿದ್ದು, ಭಾಗಿಯಾಗಿದ್ದ ಯುವಕರ ಗುಂಪಿನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪಟ್ಟಣದ ಸ್ಲಂಬೋರ್ಡ್ ಬಡಾವಣೆಯ ಸಮೀಪದ ನಿರ್ಜನ ಪ್ರದೇಶದಲ್ಲಿ ಫೆ.22 ರಂದು ವ್ಯಕ್ತಿಯೊಬ್ಬನನ್ನು ಕೊಲೆಗೈದು ಹಳ್ಳಕ್ಕೆ ಎಸೆಯಲಾಗಿತ್ತು. ಈ ಕುರಿತಂತೆ ಫೆ.23 ರಂದು ಸ್ಥಳಕ್ಕೆ ಭೇಟಿ ನೀಡಿದ ನಗರ ಠಾಣೆ ಪೊಲೀಸರು ಕೊಲೆಯಾದ ವ್ಯಕ್ತಿಯು ಈ ಹಿಂದೆ ಮನೆಗಳ್ಳತನವೂ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಕ್ಕು ಬಿದ್ದು ಶಿಕ್ಷೆ ಅನುಭವಿಸಿದ್ದ ಪಟ್ಟಣದ ಸಾದಿಕ್ ಪಾಷ (30) ಎಂಬುದಾಗಿ ಪೊಲೀಸರು ಗುರುತಿಸಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಈ ಕುರಿತಂತೆ ಮಾಹಿತಿ ಕಲೆಹಾಕಿದಾಗ, ಪಟ್ಟಣದಲ್ಲಿ ಅಲ್ಲಲ್ಲಿ ಹಲವು ಅಪರಾಧಗಳನ್ನು ಮಾಡುತ್ತಾ, ಕೆಲವು ಹುಡುಗರ ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದ ಒಂದು ಯುವಕರ ಗುಂಪಿನಿಂದ ಈ ಕೃತ್ಯ ನಡೆದಿದೆ ಎನ್ನುವ ಮಾಹಿತಿ ಆಧರಿಸಿ ಕೊಲೆ ಮಾಡಿರುವ ದುಷ್ಕರ್ಮಿ ಯುವಕರನ್ನು ಹಿಡಿಯಲು ಸಂಚು ಹಾಕಿದ ಪೊಲೀಸರಿಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಇಬ್ಬರು ಯುವಕರು ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿ ಬಿದ್ದಿರುವ ಯುವಕರನ್ನು ಸ್ಲಂಬೋರ್ಡ್ ಬಡಾವಣೆಯ ಸುನೀಲ್ ಕುಮಾರ್ (22), ನಟರಾಜ್(21) ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ನಡೆಸಲಾದ ತನಿಖೆಯಲ್ಲಿ ಈ ಕೃತ್ಯದಲ್ಲಿ ಇನ್ನೂ ಕೆಲವರು ಸ್ಥಳೀಯ ಯುವಕರು ಭಾಗಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದು, ಉಳಿದ ಆರೋಪಿಗಳನ್ನೂ ಶೀಘ್ರದಲ್ಲಿಯೇ ಬಂಧಿಸುವುದಾಗಿ ತಿಳಿಸಿದ್ದಾರೆ. ಕೊಲೆ ಕೃತ್ಯದ ಸಂದರ್ಭದಲ್ಲಿ ಬಳಸಲಾದ ಎರಡು ಆಟೋಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪುಂಡು ಯುವಕರ ಗುಂಪು ಮಾಡುತ್ತಿದ್ದ ಕೃತ್ಯಗಳನ್ನು ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆನ್ನಲಾದ ಸಾದಿಕ್‌ಪಾಷನನ್ನು, ಉಳಿಸಿದರೆ ಮುಂದೆ ತಮಗೆ ಈತ ತಲೆ ನೋವಾಗುತ್ತಾನೆ ಎಂದು ನಿರ್ಧರಿಸಿದ ಯುವಕರ ಗುಂಪು ಏಕಾಏಕಿ ಸಾದಿಕ್‌ಪಾಷನನ್ನು ಪಟ್ಟಣದಲ್ಲಿನ ಸ್ಲಂಬೋರ್ಡ್ ಬಡಾವಣೆಯ ಆಚೆಗಿನ ನಿರ್ಜನ ಪ್ರದೇಶಕ್ಕೆ ಉಪಾಯವಾಗಿ ಕರೆದೊಯ್ದು ಕೊಲೆ ಮಾಡಿದ್ದಾಗಿ ಬಂಧಿತರಾಗಿರುವ ಆರೋಪಿಗಳು ಪೊಲೀಸರಲ್ಲಿ ಬಾಯಿಬಿಟ್ಟಿರುವುದಾಗಿ ತಿಳಿದುಬಂದಿದೆ.
ಈ ಕೊಲೆ ಪ್ರಕರಣದ ಪತ್ತೆಗಾಗಿ ಆರಕ್ಷಕ ವೃತ್ತ ನಿರೀಕ್ಷಕರಾದ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ಸೈ ಶಿವಕುಮಾರ್ ಹಾಗೂ ಗ್ರಾಮಾಂತರ ಠಾಣೆ ಪಿಎಸ್ಸೈ ಸವಿ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ಇದರಲ್ಲಿ ಪಿಎಸ್ಸೈ ಶಿವಕುಮಾರ್ ಅವರ ತಂಡವು ಕೊಲೆ ಕೃತ್ಯ ನಡೆಸಿದ ಆರೋಪಿಗಳನ್ನು ಅತೀ ಶೀಘ್ರದಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.