ಹಾಸನ

ಜಾತ್ಯತೀತತೆ ಭಾರತದ ಜೀವಾಳ: ಮಂಜುನಾಥ ಮೂರ್ತಿ

Published On :

ಹೊಳೆನರಸೀಪುರ: ಜಾತ್ಯತೀತತೆಯು ಭಾರತದ ಜೀವಾಳವಾಗಿದೆ. ಎಲ್ಲಾ ಭಾರತೀಯರು ಇದಕ್ಕೆ ಬದ್ಧರಾಗಿರಲೇಬೇಕು ಎಂದು ಲಯನ್ಸ್ ಕ್ಲಬ್‌ನ ಪ್ರಮುಖ ಎಚ್.ಎಸ್.ಮಂಜುನಾಥ ಮೂರ್ತಿ ತಿಳಿಸಿದರು.
ತಾಲೂಕಿನ ಪಡುವಲಹಿಪ್ಪೆಯ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಮೊದಲ ದಿನದ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಕೋಮು ಸೌಹಾರ್ದತೆ ಎಂಬ ವಿಷಯ ಕುರಿತು ನಾನಾ ರಾಜ್ಯಗಳಿಂದ ಆಗಮಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸಮಾನ ಸ್ಥಾನ: ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ. ಇಲ್ಲಿ ಎಲ್ಲಾ ಜಾತಿ, ಧರ್ಮ, ಭಾಷೆ, ಜನಾಂಗ ಮತ್ತು ಸಂಸ್ಕೃತಿಗಳಿಗೆ ಸಮಾನ ಸ್ಥಾನ ಇದೆ. ಆದ್ದರಿಂದ ಯಾವುದೇ ವ್ಯಕ್ತಿ ನಿರ್ದಿಷ್ಟ ಅಂಶವನ್ನು ಕುರಿತು ವೈಭವೀಕರಿಸುತ್ತಾ ಇನ್ನೊಂದು ಅಂಶವನ್ನು ದ್ವೇಷಿಸುವಂತಿಲ್ಲ. ಯುವ ಜನಾಂಗ ಇತ್ತೀಚಿನ ದಿನಗಳಲ್ಲಿ ಕೋಮುಭಾವನೆಗಳಿಗೆ ಬಲಿಯಾಗುತ್ತಿದೆ. ಧರ್ಮ ಯಾವುದೇ ವ್ಯಕ್ತಿಯ ಕೇವಲ ಭಕ್ತಿ ಮತ್ತು ಭಾವನೆಗಳಿಗಾಗಿ ಅಲ್ಲ. ಅದು ಎಲ್ಲರ ಉತ್ತಮ ಬದುಕಿಗಾಗಿ. ಆದ್ದರಿಂದ ಪ್ರತಿಯೊಬ್ಬರೂ, ಎಲ್ಲಾ ಧರ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಗೌರವಿಸಿದಾಗ ಮಾತ್ರ ಎಲ್ಲರ ಬಾಳು ಶಾಂತಿಯುತವಾಗಿರುತ್ತದೆ ಎಂದರು.
ಉದಾಹರಣೆ: ಪ್ರತಿಯೊಬ್ಬರೂ ಸಹೋದರತೆ ಭಾವನೆ ಹೊಂದಬೇಕಾದುದರ ಅಗತ್ಯತೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ಸಂದರ್ಭಗಳಲ್ಲಿ ನಡೆದ ಕೋಮುಗಲಭೆಗಳನ್ನು ಉದಾಹರಣೆಯಾಗಿ ವಿವರಿಸಿದರು.
ಬಾಬರಿ ಮಸೀದಿಯ ಧ್ವಂಸ ಪ್ರಕರಣಗಳು, ಗುಜರಾತ್‌ನ ಗೊದ್ರಾ ಹತ್ಯಾ ಪ್ರಕರಣಗಳು ಭಾರತ ರಾಷ್ಟ್ರ ಬೇರೆ ರಾಷ್ಟ್ರಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿವೆ. ಇಂತಹ ಪ್ರಕರಣಗಳಿಂದ ಎಲ್ಲರೂ ದೂರ ಉಳಿಯಬೇಕು ಎಂದರು. ಪ್ರೀತಿ ಮತ್ತು ಶಾಂತಿ ಮಂತ್ರಗಳು ಮಾತ್ರ ಭಾರತವನ್ನು ಕಾಯಬಲ್ಲವು. ಆದ್ದರಿಂದ ಯುವ ಜನಾಂಗ ಮತ್ತು ಜನತೆ ಪ್ರೀತಿ ಮತ್ತು ಶಾಂತಿ ಮಂತ್ರಗಳನ್ನು ರೂಡಿಸಿಕೊಳ್ಳುವುದರ ಮೂಲಕ ಕೋಮು ಭಾವನೆಗಳಿಂದ ದೂರ ಇರಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವಶಾಂತಿಯನ್ನು ಕಾಪಾಡುವ ಪ್ರತಿಜ್ಞೆಯನ್ನು ಎಲ್ಲರೂ ಸ್ವೀಕರಿಸಿದರು.
ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಕುಮಾರ್, ಹೊಳೆನರಸೀಪುರ ಕ್ಲಬ್‌ನ ಅಧ್ಯಕ್ಷ ಮುಕುಂದೇಗೌಡ, ಶಿಬಿರದ ಸಂಯೋಜಕ ಕೆ.ವಿ. ಪಾರ್ಥೇಶ್ ಮತ್ತು ಪ್ರಾಂಶುಪಾಲ  ಡಾ.ಜಿ.ಡಿ. ನಾರಾಯಣ ಇದ್ದರು. ಹೊಳೆನರಸೀಪುರದ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ರಾಷ್ಟ್ರೀಯ ಸ್ವಯಂ ಸೇವಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಆಂಧ್ರಪ್ರದೇಶದ ರಾಷ್ಟ್ರೀಯ ಸ್ವಯಂ ಸೇವಕಿ ಪ್ರಾರ್ಥಿಸಿದರು. ಉತ್ತರಪ್ರದೇಶದ ರಾಷ್ಟ್ರೀಯ ಸ್ವಯಂ ಸೇವಕಿ ಸ್ವಾಗತಿಸಿದರು. ಬಿಹಾರದ ರಾಷ್ಟ್ರೀಯ ಸ್ವಯಂ ಸೇವಕಿ ವಂದಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.