ಹಾಸನ

ಸಕಲೇಶಪುರ ಪುರಸಭೆ ಅಧ್ಯಕ್ಷರ ಪದಚ್ಯುತಿ

Published On :

ಆಡಳಿತ ಪಕ್ಷ ಜೆಡಿಎಸ್ನಿಂದಲೇ ಅವಿಶ್ವಾಸ ನಿರ್ಣಯ  ಕಾಂಗ್ರೆಸ್, ಕೆಜೆಪಿ ಬೆಂಬಲ



ಸಕಲೇಶಪುರ: ಪುರಸಭೆ ಅಧ್ಯಕ್ಷ ಎಸ್.ಎನ್.ಸತೀಶ್ ಅವರನ್ನು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅಧಿಕಾರದಿಂದ ಪದಚ್ಯುತಿಗೊಳಿಸಿದ ಘಟನೆ ಗುರುವಾರ ಪುರಸಭೆಯಲ್ಲಿ ನಡೆಯಿತು.
23 ಸದಸ್ಯ ಬಲದ ಪುರಸಭೆಯಲ್ಲಿ 13 ಸದಸ್ಯ ಬಲ ಹೊಂದಿದ ಜೆಡಿಎಸ್ ಅಧಿಕಾರ ಹಿಡಿದು ಆ ಪಕ್ಷದಿಂದ ಗೆದ್ದಿದ್ದ ಎಸ್.ಎನ್.ಸತೀಶ್ 10  ತಿಂಗಳಿನಿಂದ ಅಧ್ಯಕ್ಷರಾಗಿದ್ದರು. ಆದರೆ ಅವರ ಕಾರ್ಯಶೈಲಿಯಿಂದ ಬೇಸತಿದ್ದ ಇತರೆ ಜೆಡಿಎಸ್ ಸದಸ್ಯರು ಅವಿಶ್ವಾಸ ಮಂಡಿಸಿದರು.
 ಇದಕ್ಕೆ ಸಭೆಯಲ್ಲಿದ್ದ ಶಾಸಕ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ 6 ಹಾಗೂ ಕೆಜೆಪಿ 2 ಹಾಗೂ ಬಿಜೆಪಿಯ ಒಬ್ಬ ಸದಸ್ಯೆ ಬೆಂಬಲ ವ್ಯಕ್ತಪಡಿಸಿದರು. ಆದ್ದರಿಂದ ಅವಿಶ್ವಾಸ ನಿರ್ಣಯದ ಪರವಾಗಿ 22 ಮತ ಬಿದ್ದರೆ ಬಿಜೆಪಿ ಸದಸ್ಯ ಮಹೇಶ್ ಮಾತ್ರ ತಟಸ್ಥವಾಗಿ ಉಳಿದರು.
ಮುರಿದ ಒಳ ಒಪ್ಪಂದ: ಈ ಸಂದರ್ಭದಲ್ಲಿ ಮಾತನಾಡಿದ  ಶಾಸಕ ಎಚ್.ಕೆ.ಕುಮಾರಸ್ವಾಮಿ ರಾಜಕೀಯವೆಂದರೆ ನಂಬಿಕೆ. ಆದರೆ ಪಕ್ಷದ ಅಂತರಿಕ ಒಪ್ಪಂದವನ್ನು ಮುರಿದು ನಾಲ್ಕು ತಿಂಗಳ ನಂತರವೂ ಅಧ್ಯಕ್ಷರಾಗಿ ಮುಂದುವರೆದಿದ್ದರಿಂದ ಅನಿವಾರ್ಯವಾಗಿ ಇತರ ಬೆಂಬಲ ಪಡೆದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾಯಿತು ಎಂದರು.  ಅಭಿವೃದ್ದಿ ವಿರೋಧಿ ಪುರಸಭ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಕಾಂಗ್ರೆಸ್ ಸದಸ್ಯರು ವಿಷಾಯಧಾರಿತ ಬೆಂಬಲ ನೀಡಿದ್ದಾರೆಂದು ಕಾಂಗ್ರೆಸ್ ಮುಖಂಡ ಶಬೀರ್ ಜಾನ್ ಹೇಳಿದರು.
ಸದಸ್ಯರಲ್ಲಿ ಅತೃಪ್ತಿ: ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಾಂಗೆಸ್ ಸದಸ್ಯರೆ ಗೆದ್ದಿರುವ ಕುಶಾಲನಗರ ಬಡಾವಣೆಯ 5 ವಾರ್ಡ್ಗಳನ್ನು ಕಳೆದ ಒಂದು ವರ್ಷದಿಂದ ನಿರ್ಲಕ್ಷಿಸಿದ ಪರಿಣಾಮ ಯಾವುದೆ ಅಭಿವೃದ್ಧಿಯಾಗಿಲ್ಲ. ಇದರಿಂದಾಗಿ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಸದಸ್ಯರಲ್ಲಿ ಅತೃಪ್ತಿ ಕಾಣಿಸಿಕೊಂಡಿತ್ತು. ಇದನ್ನು ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸುವ ಮೂಲಕ ತಿರಿಸಿಕೊಂಡಿದ್ದಾರೆಂದು ಸಮಜಾಯಿಷಿ ನೀಡಿದರು.
 ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿಗೊಳಿಸಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಶಿವರಾಂ ಅವರಿಗೆ ಪುರಸಭೆಯ ಸಂಪೂರ್ಣ ತಿಳುವಳಿಕೆ ಇಲ್ಲದಾಗಿದ್ದು ಇವರಿಗೆ ತಾಲೂಕು ಕಾಂಗ್ರೆಸ್ ನಾಯಕರಾದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್ ಹಾಗೂ ಪುರಸಭ ಮಾಜಿ ಅಧ್ಯಕ್ಷ ಬಾಸ್ಕರ್ ಶೆಟ್ಟಿ ಜಿಲ್ಲಾಧ್ಯಕ್ಷರ ದಾರಿತಪ್ಪಿಸಿದ್ದಾರೆಂದು ದೂರಿದರು.
ಅಧ್ಯಕ್ಷಗಾದಿಗೆ ಹಣ ಭದ್ರತೆ: ಶಬೀರ್ ಜಾನ್ ಮಾತನಾಡಿ, 6 ಪುರಸಭೆ ಸದಸ್ಯರಿರುವ ಕಾಂಗ್ರೆಸ್ಗೆ ಪುರಸಭೆ ಅಧ್ಯಕ್ಷ ಸ್ಥಾನವನ್ನು ಮೊದಲ 10 ತಿಂಗಳ ಅವಧಿಗೆ ಬಿಟ್ಟುಕೊಡುವಂತೆ ಕೇಳಿದ್ದು, ಇದಕ್ಕಾಗಿ 50 ಲಕ್ಷ ಭದ್ರತಾ ಠೇವಣಿಯನ್ನು ಜೆಡಿಎಸ್ ನಾಯಕರಿಗೆ ನೀಡುವುದಾಗಿ ತಿಳಿಸಿದ್ದೆವು. ಆದರೆ, ಬೇಡಿಕೆಯನ್ನು ಜೆಡಿಎಸ್ ನಾಯಕರು ಪರಿಗಣಿಸಲಿಲ್ಲ ಎಂದರು. ಗೋಷ್ಠಿಯಲ್ಲಿ ಸದಸ್ಯರಾದ ಸಯ್ಯದ್ ಮಫೀಜ್, ಕಾಳಿಂಗಪ್ಪ, ಶೋಬಾ, ಸುಮಿತ್ರಾ, ಡಿಸೋಜಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.