ಕೇಂದ್ರ ಕಾರಾಗೃಹಕ್ಕೆ ಮಂಜುಳಾ ಮಾನಸ ಭೇಟಿ
ಮೈಸೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಶನಿವಾರ ಭೇಟಿ ನೀಡಿ, ಮಹಿಳಾ ಬಂಧಿಗಳ ಸಮಸ್ಯೆ ಆಲಿಸಿದರು.
ಮಹಿಳಾ ಕೈದಿಗಳ ವಿಭಾಗಕ್ಕೆ ತೆರಳಿದ ಅವರು, ಸುಮಾರು 1 ಗಂಟೆ ಕಾಲ ಬಂಧಿಗಳ ಸಮಸ್ಯೆ ಆಲಿಸಿ, ಪರಿಹರಿಸುವ ಭರವಸೆ ನೀಡಿದರು.
ಕೊಲೆ ಪ್ರಕರಣದಲ್ಲಿ ಇಡಿ ಕುಟುಂಬವನ್ನೇ ಜೈಲಿಗೆ ಹಾಕಿದ್ದು, ನಮ್ಮ ಅಣ್ಣ ಮಾತ್ರ ಎಲ್ಲಿದ್ದಾನೆ ಗೊತ್ತಿಲ್ಲ ಎಂದು ಹುಣಸೂರು ಶಂಕರಪುರ ಬಡಾವಣೆಯ ನಿವಾಸಿ ಜಯಶ್ರೀ ಹೇಳಿದರು.
ಬಿಳಿಕೆರೆ ಬಳಿ ನಡೆದ ಕೊಲೆಗೂ ನಮಗೂ ಸಂಬಂಧವಿಲ್ಲ. ಹೀಗಿದ್ದರೂ ಪೊಲೀಸರು ನಮ್ಮೆಲ್ಲರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ನಮ್ಮಣ್ಣ ಎಸ್. ಗುಂಡ ಎಂಬವರು ಎಲ್ಲಿದ್ದಾರೋ ಗೊತ್ತಿಲ್ಲ. ಬದುಕಿದ್ದಾರೋ, ಇಲ್ಲವೋ ತಿಳಿಯದು. ಹೀಗಾಗಿ, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಹೈಕೋರ್ಟ್ನಿಂದ ಹೇಬಿಯಸ್ ಕಾರ್ಪಸ್ ಬಗ್ಗೆ ನೋಟಿಸ್ ಬಂದಿದೆ. ಇದಕ್ಕೆ ಪೊಲೀಸರು ಮಾಹಿತಿ ಕೊಡಬೇಕು. ತನಿಖೆ ನಡೆಯುತ್ತಿದೆ ಎಂದು ಮುಖ್ಯ ಅಧೀಕ್ಷಕ ಪಿ.ಎನ್. ಜಯಸಿಂಹ ಆಯೋಗದ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಂಬಳ್ಳಿ ಗ್ರಾಮದ ತೋಳಸಮ್ಮ, ಅನಾರೋಗ್ಯದ ಸಮಸ್ಯೆ ಹೇಳಿ ಭಾವುಕರಾದರು. ನನ್ನ ಮೊಮ್ಮಗಳನ್ನೇ ಮಗನಿಗೆ ಮದುವೆ ಮಾಡಿಸಿದೆ. ಆದರೆ, ಅವರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ಈ ಇಳಿ ವಯಸ್ಸಿನಲ್ಲಿ ಜೈಲಲ್ಲಿ ಇರುವಂತೆ ಮಾಡಿದ್ದಾರೆ ಎಂದರು.
ಮನೆಯೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದೆ. ಸರಗಳ್ಳತನ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ನನ್ನ ಗಂಡ ನಿಧನರಾದ ಮೇಲೆ ಕೂಲಿ ಮಾಡಿ ಬದುಕುತ್ತಿದ್ದರೂ ಪೊಲೀಸರು ಈ ರೀತಿ ಮಾಡಿರುವುದಾಗಿ ಮಹಿಳೆಯೊಬ್ಬರು ಕಣ್ಣೀರಿಟ್ಟರು. ನನ್ನ ಪರವಾಗಿ ವಕೀಲರು ಇಲ್ಲ. ನಾನು ಮಾಡದ ತಪ್ಪಿಗೆ ಜೈಲಿಗೆ ಬಂದಿದ್ದೇನೆ. ಸಹಾಯ ಮಾಡುವಂತೆ ಅವರು ಕೋರಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ವಕೀಲರನ್ನು ನೇಮಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಲಿಗೆ ಯಂತ್ರದ ವಿಭಾಗ, ಗಂದಧ ಕಡ್ಡಿ ಫ್ಯಾಕ್ಟರಿಗೆ ತೆರಳಿ ಮಹಿಳೆಯರು ಉತ್ಪಾದಿಸುತ್ತಿದ್ದ ವಸ್ತುಗಳನ್ನು ಮಂಜುಳಾ ಮಾನಸ ವೀಕ್ಷಿಸಿದರು. ಜೈಲಿನ ಅಧೀಕ್ಷಕಿ ಕೆ.ಸಿ. ಜಯಶ್ರೀ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

