ಹಾಸನ

ಅಕ್ರಮ ಮದ್ಯ ಮಾರಾಟ ಖಂಡಿಸಿ ಮಹಿಳೆಯರ ಧರಣಿ

Published On :

ಬೇಲೂರು: ತಾಲೂಕಿನ ಹಳೆಬೀಡು ಹೋಬಳಿಯ ಅಪ್ಪಗೋಡನಹಳ್ಳಿ, ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಎರಡು ಗ್ರಾಮಗಳ ಮಹಿಳೆಯರು ಬುಧವಾರ ಪಟ್ಟಣದ ಅಬಕಾರಿ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪಗೋಡನಹಳ್ಳಿಯ ಮಮತ, ನಮ್ಮ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದರಿಂದ ಗ್ರಾಮದಲ್ಲಿ ಶಾಂತಿ ಇಲ್ಲವಾಗಿದೆ. ದಿನನಿತ್ಯ ಗಂಡಸರು ಕುಡಿದು ಬಂದು ಗಲಾಟೆ ಮಾಡುತ್ತಾರೆ. ಬರಗಾಲದಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ನಮಗೆ ಮದ್ಯ ಮಾರಾಟ ಹಾಗೂ ಕುಡಿತದಿಂದ ಸಮಸ್ಯೆ ಎದುರಾಗಿದೆ.
ಹೆಚ್ಚು ಬೆಲೆಗೆ ಮಾರಾಟ: ಅಪ್ಪಗೋಡನಹಳ್ಳಿಯ ಹನುಮಂತಯ್ಯ, ಧರ್ಮ, ಮಂಜು, ಗೋಪಾಲ ಹಾಗೂ ಕಲ್ಲುಶೆಟ್ಟಿಹಳ್ಳಿಯ ರಾಜು, ಶಾಂತಮ್ಮ, ಶಿವಣ್ಣಯ್ಯ ಎಂಬವರು ಮದ್ಯವನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ಮನೆಯಲ್ಲಿ ಹಾಗೂ ಅಂಗಡಿಯಲ್ಲಿ  ಮಾರಾಟ ಮಾಡುತ್ತಿದ್ದಾರೆ. ಹಗಲೆಲ್ಲಾ ದುಡಿದು ಬರುವ ನಮ್ಮ ಗಂಡಂದಿರಿಗೆ ಸಾಲದ ರೂಪದಲ್ಲಿ ಮದ್ಯ ನೀಡಿ ವಾರದ ಬಟವಾಡೆ ದಿನ ಅಡ್ಡಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸಂಸಾರ ಬೀದಿ ಪಾಲಾಗುವ ಸ್ಥಿತಿಯಿದೆ. ಈ ಬಗ್ಗೆ ತಹಸೀಲ್ದಾರ್ ಅವರಿಗೂ ತಿಳಿಸಿದ್ದೇವೆ ಎಂದರು.
 ಕಲ್ಲುಶೆಟ್ಟಿಹಳ್ಳಿಯ ಸೋಮಮ್ಮ ಮಾತನಾಡಿ, ನಮ್ಮ ಹಳ್ಳಿಯಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ. ಇಲ್ಲಿ ಮಾರುವ ಮದ್ಯವನ್ನ ಅಕ್ಕಪಕ್ಕದ ಗ್ರಾಮಗಳಾದ ಹಳೆಕಲ್ಲುಶೆಟ್ಟಿಹಳ್ಳಿ, ಹುಲ್ಲೇನಹಳ್ಳಿ ಗಂಡಸರೂ ಬಂದು ಕುಡಿದು ಗಲಾಟೆ ಮಾಡಿಕೊಂಡು ಹಿಂತಿರುಗುತ್ತಾರೆ. ಸರ್ಕಾರ ಮದ್ಯ ಮಾರಾಟವನ್ನು ಪೂರ್ಣವಾಗಿ ನಿಲ್ಲಿಸಿದರೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಒತ್ತಾಯಿಸಿದರು. ಧರಣಿ ನಂತರ ಅಬಕಾರಿ ಎಸೈ ನೂರ್ ಜಹಾನ್ರಿಗೆ ಮನವಿ ಪತ್ರ ನೀಡಿದರು.
ಕ್ರಮ ಕೈಗೊಳ್ಳುವ ಭರವಸೆ: ಮನವಿ ಪತ್ರ ಪಡೆದು ಮಾತನಾಡಿದ ನೂರ್ ಜಹಾನ್ ಮಾತನಾಡಿ,  ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಬಂದಿದ್ದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಕಚೇರಿ ಮುಂದೆ ಉಪವಾಸ ಧರಣಿ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.   ಧರಣಿಯಲ್ಲಿ ಶೃಂಗಾರ್, ಮಾರಮ್ಮ, ಹೊಯ್ಸಳ, ಇಂಚರ, ಭೂಮಿಕಾ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಹೇಮಾವತಿ, ಲಕ್ಷ್ಮಮ್ಮ, ರಾಜಮ್ಮ, ಕಮಲ, ಯಶೋಧ, ಸುಮಿತ್ರ, ಜಯ, ನೇತ್ರಾವತಿ, ಸಾವಿತ್ರಿ, ಲೀಲಾ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.