ಮಹಿಳೆಯ ಚಿನ್ನಾಭರಣ ದರೋಡೆ ಯತ್ನ: ಐವರ ಬಂಧನ
ಹೊಳೆನರಸೀಪುರ: ಬೆಟ್ಟದ ಮೇಲಿನ ದೇವಾಲಯಕ್ಕೆ ತೆರಳಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆಗೆ ಯತ್ನಿಸಿರುವ ಐವರು ಯುವಕರನ್ನು ಗ್ರಾಮಸ್ಥರು ಹಿಡಿದು ಇಲ್ಲಿನ ನಗರ ಠಾಣೆಗೆ ಒಪ್ಪಿಸಿದ್ದು, ಉಳಿದ ಮೂವರು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಹಳೇಕೋಟೆ ರಂಗನಾಥಸ್ವಾಮಿ ದೇವಾಲಯದ ಬಳಿ ಶನಿವಾರ ಸಂಜೆ ನಡೆದಿದೆ.
ಹಳೇಕೋಟೆ ಹೋಬಳಿಗೆ ಸೇರಿದ ಸಬ್ಬನಹಳ್ಳಿ ಗ್ರಾಮದ ಮಹಿಳೆ ಮಣಿ ಎಂಬಾಕೆಯು ತಮ್ಮ ಸಂಬಂಧಿಯಾದ ಶೇಖರ ಎಂಬವರೊಂದಿಗೆ ಹಳೇಕೋಟೆ ಬಳಿಯಲ್ಲಿನ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ, ಎಂಟು ಯುವಕರಿದ್ದ ತಂಡ, ಇವರಿಬ್ಬರನ್ನೂ ಬೆದರಿಸಿದೆ. ಬಳಿಕ ಮಹಿಳೆಯನ್ನು ಚಿನ್ನಾಭರಣ ನೀಡುವಂತೆ ಬೆದರಿಸಿದೆ. ಅಲ್ಲದೇ, ಆಕೆಯನ್ನು ಅಸಹ್ಯವಾಗಿ ಮೊಬೈಲ್ನಲ್ಲ ಚಿತ್ರೀಕರಿಸಲು ಮುಂದಾಗಿದೆ.
ಹಣಕ್ಕಾಗಿ ಹಿಂಬಾಲಿಸಿದರು: ತನ್ನ ಬಳಿಯಲ್ಲಿ ಹಣವಿಲ್ಲ, ಬೆಟ್ಟದ ಕೆಳಗಿನ ಹಳೇಕೋಟೆ ಬಳಿಯಲ್ಲಿನ ಪರಿಚಯಸ್ಥರಲ್ಲಿ ಹಣ ಪಡೆದು ನೀಡುವುದಾಗಿ ಮಹಿಳೆ ಹೇಳಿದ್ದಾಳೆ. ಇದನ್ನು ನಂಬಿದ ಯುವಕರ ಗುಂಪು ಆಕೆಯೊಂದಿಗೆ ಬೆಟ್ಟದ ಕೆಳಗೆ ಇಳಿದಿದೆ.
ಹಳೇಕೋಟೆಯಲ್ಲಿನ ಪ್ರಮುಖ ವ್ಯಕ್ತಿಯೊಬ್ಬರ ಬಳಿ ಮಹಿಳೆ ಬೆಟ್ಟದ ಮೇಲೆ ನಡೆದ ಘಟನೆಯನ್ನು ವಿವರಿಸುತ್ತಿದ್ದಾಗ ದರೋಡೆಕೋರರ ಗುಂಪು ಪರಾರಿಯಾಗಲು ಯತ್ನಿಸಿದೆ. ಆಗ ಸ್ಥಳದಲ್ಲೇ ಇದ್ದ ಗ್ರಾಮಸ್ಥರು ದರೋಡೆಕೋರರ ಗುಂಪಿನ ಹೇಮಂತ, ಅಭಿಷೇಕ್, ಹರೀಶ, ಯಶವಂತ್, ದಿಲೀಪ ಎಂಬುರನ್ನು ಹಿಡಿದಿದು ಹೊಳೆನರಸೀಪುರದ ನಗರ ಠಾಣೆಗೆ ವಿಷಯ ತಿಳಿಸಿದ್ದಾರೆ.
ಮೂವರು ಪರಾರಿ: ಪೊಲೀಸರು ಆಗಮಿಸುವ ಮುನ್ನ ಮೂವರು ಪ್ರಮುಖ ಆರೋಪಿಗಳಾದ ಮಹೇಶ, ಸಚಿನ್ ಹಾಗೂ ಅನಿಲ್ ಅವರುಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಉಳಿದ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಎಂಟು ಯುವಕರ ತಂಡವು ಹಳೇಕೋಟೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಯುವಕರ ಗುಂಪಾಗಿದ್ದು, ಇವರಲ್ಲಿ ಕೆಲವರು ಕಾಲೇಜು ವಿದ್ಯಾರ್ಥಿಗಳೆನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

