ಬ್ಲಾಸ್ಟಿಂಗ್ ಸಮಸ್ಯೆ: ಬಾಗೂರು ಏತ ಕಾಮಗಾರಿ ವಿಳಂಬ
ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ಬಾಗೂರು ಏತ ನೀರಾವರಿಯ ಹತ್ತಿರ ನುಗ್ಗೇಹಳ್ಳಿಯ 17.60 ಕೋಟಿ ರು. ವೆಚ್ಚದ ಏತ ನೀರಾವರಿಯ ನೀರೆತ್ತುವ ಸ್ಥಳಕ್ಕೆ ಶನಿವಾರ ಶಾಸಕ ಸಿ.ಎನ್. ಬಾಲಕೃಷ್ಣ ಭೇಟಿ ನೀಡಿ ಕಾಮಗಾರಿ ವಿಳಂಬ ಆಗುತ್ತಿರುವುದಕ್ಕೆ ಎಂಜಿನಿಯರ್ ಗಳನ್ನು ಕಾರಣ ಕೇಳಿದರು. ಎಂಜಿನಿಯರ್ ಹನುಮಂತಯ್ಯ ಉತ್ತರಿಸಿ ಕಾಮಗಾರಿ ಸ್ಥ ಗಟ್ಟಿಕಲ್ಲಿನಿಂದ ಕೂಡಿದ್ದು ಬ್ಲಾಸ್ಟಿಂಗ್ ಮಾಡಲು ಪಂಪ್ಹೌಸ್ ಹತ್ತಿರವಿರುವುದರಿಂದ ತೊಂದರೆಯಾಗುತ್ತಿದೆ. ಡ್ರಿಲ್ಲಿಂಗ್ ಕಂಟ್ರೋಲ್ ಬ್ಲಾಸ್ಟಿಂಗ್ ಮೂಲಕ 18ಮೀ ಪಂಪ್ಹೌಸ್ ಪಕ್ಕ 20 ಮೀ. ಆಳದಲ್ಲಿ ತಳಪಾಯ ನಿರ್ಮಿಸಬೇಕುಬೇಕು. ಇದರಿಂದಾಗಿ ವಿಳಂಬವಾಗುತ್ತಿದೆ. 3 ತಿಂಗಳಿನಿಂದ ಈ ಕೆಲಸ ಮಾಡುತ್ತಿದ್ದೇವೆ ಎಂದರು ವಿವರಿಸಿದರು. ಕಾರ್ಯಪಾಲಕ ಎಂಜಿನಿಯರ್ ನಾರಾಯಣ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹನುಮಂತಯ್ಯ, ಎಚ್ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ಎಪಿಎಂಸಿ ನಿರ್ದೇಶಕ ಬಿ.ಎಚ್. ಶಿವಣ್ಣ, ಗುತ್ತಿಗೆದಾರ ಪಿಚ್ಚೇಶ್ವರ ರಾವ್ ಇದ್ದರು.
ಶ್ರೀ ಲಕ್ಷ್ಮೀ ವೆಂಕಟೇಶ್ವರ ರಥ ಪುರ ಪ್ರವೇಶ
ಅರಸೀಕೆರೆ: ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ರಥವು ಅರಸೀಕೆರೆ ಪಟ್ಟಣ ಪುರ ಪ್ರವೇಶ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿ ವರ್ಷದಂತೆ ಮಹಾರಥೋತ್ಸವ ನಡೆದ ಎರಡನೇ ದಿನದಂದು ಪಟ್ಟಣಕ್ಕೆ ಪ್ರವೇಶ ಮಾಡುವುದು ಈ ಉತ್ಸವದ ಪ್ರಮುಖ ಧಾರ್ಮಿಕ ಅಂಶವಾಗಿದ್ದು, ಅದರಂತೆ ಶುಕ್ರವಾರ ಸಂಜೆ ಪುರ ಪ್ರವೇಶ ಮಾಡಿದ ಸ್ವಾಮಿಯವರ ರಥೋತ್ಸವಕ್ಕೆ ಪುರಸಭೆ ಅಧಿಕಾರಿಗಳು ಮತ್ತು ಜನತೆ ಪಟ್ಟಣದೊಳಗೆ ಬರಮಾಡಿಕೊಂಡರು.
ಮನೆ ಮುಂದೆ ಶೃಂಗಾರ: ರಥವು ಮಂಗಳ ವಾದ್ಯಗಳೊಂದಿಗೆ ಪೇಟೆ ಬೀದಿ ಮೂಲಕ ಸಂಚರಿಸಿ ಶ್ರೀ ಪ್ರಸನ್ನ ಗಣಪತಿ ಪೆಂಡಾಲ್ನಲ್ಲಿ ಕೆಲ ಕಾಲ ವಾಸ್ತವ್ಯ ಹೂಡಲಾಯಿತು. ಇಲ್ಲಿ ನಡೆದ ಪೂಜಾ ಕೈಂಕರ್ಯಗಳನ್ನು ಸ್ವೀಕರಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿರುವ ಭಕ್ತಾಧಿಗಳು ತಮ್ಮ ಮನೆಗಳ ಮುಂದೆ ತಳಿರು ತೋರಣಗಳಿಂದ ಶೃಂಗರಿಸಿ ಆಗಮಿಸಿದ ರಥಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಆರ್.ನಾಗರಾಜ್, ಕಾರ್ಯದರ್ಶಿ ಎಸ್.ವಿ.ಟಿ.ಬಾಬು, ಧರ್ಮದರ್ಶಿಗಳಾದ ಬೊಮ್ಮೇನಹಳ್ಳಿ ಪರಮಶಿವಯ್ಯ, ಕರವೇ ಜಿಲ್ಲಾ ಉಪಾಧ್ಯಕ್ಷ ತುಳಸಿ, ಇನ್ನಿತರರು ಇದ್ದರು.
ಬೈಕ್ ಡಿಕ್ಕಿ : ಪಾದಚಾರಿ ಸಾವು
ಚನ್ನರಾಯಪಟ್ಟಣ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ಕಾರ್ಪೋರೇಷನ್ ಬ್ಯಾಂಕ್ ಬಳಿ ನಡೆದಿದೆ. ತಾಲೂಕಿನ ಕಸಬಾ ಹೋಬಳಿ, ಅರಳಾಪುರ ಗ್ರಾಮದ ವಾಸಿ ಹುಚ್ಚವೀರಪ್ಪ (60) ಎಂಬವರೇ ಮೃತಪಟ್ಟ ದುರ್ದೈವಿ.
ಅವರು ತಮ್ಮ ಸ್ನೇಹಿತರಾದ ಶಂಕರೇಗೌಡರ ಜತೆ ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಮೋಟಾರ್ ಬೈಕ್ ಡಿಕ್ಕಿ ಹೊಡೆದಿದೆ. ಇದಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ತೀವ್ರ ಗಾಯಗೊಂಡ ಹುಚ್ಚವೀರಪ್ಪ ಅವರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು: ವ್ಯಕ್ತಿ ಬಂಧನ
ಹಾಸನ: ನಗರದ ತಣ್ಣೀರುಹಳ್ಳದ ರಸ್ತೆ, ಕೆ.ಇ.ಬಿ ಮುಂಭಾದ ಕಾಂಪೌಂಡ್ ಪಕ್ಕ ಮಟ್ಕಾ-ಜೂಜಾಟ ನಡೆಸುತ್ತಿದ್ದ ಗುಡ್ಡೇನಹಳ್ಳಿಯ ಗಣೇಶ (34) ಎಂಬಾತನನ್ನು ಪೊಲೀಸರು ಬಂಧಿಸಿರುವ ಘಟನೆ ಶನಿವಾರ ನಡೆದಿದೆ. ಮಟ್ಕಾ-ಜೂಜಾಟದಲ್ಲಿ ಪಣಕ್ಕಿದ್ದ ಸುಮಾರು 260 ರು. ನಗದು ವಶಪಡಿಸಿಕೊಳ್ಳಲಾಗಿದೆ. ಈತ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆಗೆ ಹಣ ಕಟ್ಟುವಂತೆ ಪುಸಲಾಯಿಸುತ್ತಿದ್ದ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಸಂಘ ಉದ್ಘಾಟನೆ
ಆಲೂರು: ತಾಲೂಕಿನ ಗಂಜಿಗೆರೆಯ ಶ್ರೀ ವೆಂಕಟರಮಣಸ್ವಾಮಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ನೆರವೇರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಬಿ.ಸಿ.ರಾಮೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳು ಬೇಕು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೀವನದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಂಘಗಳು ಪ್ರಮುಖ ಸಾಧನ ಎಂದು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಭವಾನಿ, ರಾಯರಕೊಪ್ಪಲು ಕೆನರಾಬ್ಯಾಂಕಿನ ವ್ಯವಸ್ಥಾಪಕ ಗಂಗಾಧರ್, ಮಗ್ಗೆ ಶಾಖೆಯ ವ್ಯವಸ್ಥಾಪಕರು, ಗ್ರಾಮಸ್ಥರಾದ ಧರ್ಮಪ್ಪ, ಕುಮಾರ್, ಶಾಲೆಯ ಶಿಕ್ಷಕರು ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಹ ಶಿಕ್ಷಕ ಬಿ.ಟಿ. ರಮೇಶ್ ನಿರೂಪಿಸಿದರು. ಡಿ.ಶೀಲಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್ ವಂದಿಸಿದರು.
ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ
ಅರಸೀಕೆರೆ: ತಾಲೂಕಿನ ತಳಲುತೊರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಜ್ಞಾನ ವಿಕಾಸ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ತಳಲುತೊರೆಯ ಪ್ರೌಢಶಾಲೆಯ ಶಿಕ್ಷಕಿ ವಿನೋದಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಅಂಗನವಾಡಿ ಕಾರ್ಯಕರ್ತೆ ಗೌರಮ್ಮ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕಿ ವಿಜಯಲಕ್ಷ್ಮಿ, ತಾಲೂಕಿನ ಯೋಜನಾಧಿಕಾರಿ ಪಿ. ಚನ್ನಪ್ಪಗೌಡ ಇದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಲಿತಾ ಸ್ವಾಗತಿಸಿದರು, ಮೇಲ್ವಿಚಾರಕಿ ನರ್ಮತಾ ನಿರೂಪಿಸಿದರು. ಸೇವಾ ಪ್ರತಿನಿಧಿ ಶಿವಗಂಗ ವಂದಿಸಿದರು.
ಜ್ಞಾನದ ಬೆಳಕು ಮೂಡಿಸುವುದೇ ಆಧ್ಯಾತ್ಮ: ಶಾರದಾ ಗೋಪಾಲ್
ಹಾಸನ: ಆಧ್ಯಾತ್ಮಿಕ ತಿಳಿವಳಿಕೆಯಿಂದ ಬದುಕಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಿವಮೊಗ್ಗದ ಗೀತಾಮಿತ್ರ ಆಧ್ಯಾತ್ಮಿಕ ಮಾಸಪತ್ರಿಕೆ ಪ್ರಧಾನ ಸಂಪಾದಕರಾದ ಶಾರದಾ ಗೋಪಾಲ್ ಹೇಳಿದರು. ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ನವನಾಥಯಾಗ ಮಂಟಪದಲ್ಲಿ ಶನಿವಾರ ರಾತ್ರಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು 11ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಶಾಂತಿಯಿಲ್ಲದವನಿಗೆ ಸುಖವೆಲ್ಲಿ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆಧ್ಯಾತ್ಮದಿಂದ ಜ್ಞಾನ: ಆಧ್ಯಾತ್ಮಿಕ ತಿಳಿವಳಿಕೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ನಮ್ಮ ಬಗ್ಗೆ ನಾವು ತಿಳಿದುಕೊಳ್ಳುವುದೇ ಆಧ್ಯಾತ್ಮ. ಮನಸ್ಸಿನಲ್ಲಿರುವ ಕಸವನ್ನೆಲ್ಲಾ ತೊಡೆದು ಜ್ಞಾನದ ಬೆಳಕು ಮೂಡಿಸುವ ಕೆಲಸವನ್ನು ಆಧ್ಯಾತ್ಮ ಮಾಡುತ್ತದೆ. ಆಧ್ಯಾತ್ಮಿಕ ಬದುಕಿನಲ್ಲಿ ಸಂತ, ಪಂಥ, ಗ್ರಂಥ, ಮಂತ್ರ ಮತ್ತು ಕ್ಷೇತ್ರ ಈ ಐದು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಬದುಕಿನ ಸದ್ಗತಿಗೆ ಈ ಐದು ಅಂಶಗಳು ಮುಖ್ಯ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಮಾತನಾಡಿ, ವ್ಯಕ್ತಿಯ ಆತ್ಮೋನ್ನತಿಗೆ ದಾರಿ ಮಾಡಿಕೊಡುವುದರ ಜೊತೆಗೆ ಸಮಾಜದಲ್ಲಿ ಶಾಂತಿ ಕಾಪಾಡಲು ಆಧ್ಯಾತ್ಮಿಕ ಚಟುವಟಿಕೆಗಳು ಅತ್ಯಗತ್ಯ. ಆ ಕೆಲಸವನ್ನು ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು. ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಹೆಚ್.ಬಿ. ಮದನಗೌಡ ಇದ್ದರು.
ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಮೆರವಣಿಗೆ
ಬೇಲೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಪುರಸಭೆ ಇನ್ನಿತರ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕೆಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಹೇಳಿದರು.
ವಿವಿಧ ಬೇಡಿಕೆಗೆ ಆಗ್ರಹಿಸಿ ನಡೆಯುತ್ತಿರುವ ಜಾಥಾವನ್ನ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಸ್ವಾಗತಿಸಿದ ನಂತರ ಮಾತನಾಡಿ, ಕನಿಷ್ಠ ವೇತನ ಮಾಸಿಕ 15 ಸಾವಿರ ರು. ನಿಗದಿಪಡಿಸಬೇಕು, ಅಂಗವಾಡಿ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುವ ಕೇಂದ್ರಗಳ ಸಮೀಪ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕು, ಗ್ರಾಮ ಪಂಚಾಯ್ತಿ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು ಎಂದರು. ರಾಜ್ಯ ಪುರಸಭೆ ಪೌರಕಾರ್ಮಿಕ ಸಂಘದ ಅಧ್ಯಕ್ಷ ಹರೀಶನಾಯಕ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಇಂದ್ರಮ್ಮ, ಸಿಐಟಿಯು ಜಿಲ್ಲಾ ಪ್ರ.ಕಾರ್ಯದರ್ಶಿ ಧರ್ಮೇಶ್, ಅಕ್ಷರದಾಸೋಹ ನೌಕರರ ಸಂಘದ ತಾ.ಅಧ್ಯಕ್ಷೆ ಸುಮಾ, ಜಿಲ್ಲಾ ಸಿಐಟಿಯು ಅಧ್ಯಕ್ಷ ಸುಕುಮಾರ್ ಇತರರು ಇದ್ದರು.
ವ್ಯಕ್ತಿ ನಾಪತ್ತೆ
ಹಾಸನ: ನಗರ ಹೊರವಲಯದ ಎಸ್.ಎಂ. ಕೃಷ್ಣನಗರ ವಾಸಿ ಯಾಸ್ಮೀನ್ ಅವರ ಪತಿ ಇಸ್ಮಾಯಿಲ್ (28) ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5 ಅಡಿ ಎತ್ತರ, ಎಣ್ಣೆಗಂಪು ಬಣ್ಣ ಸಾಧಾರಣ ಮೈಕಟ್ಟು, ಕನ್ನಡ, ಹಿಂದಿ, ಉರ್ದು ಮಾತನಾಡುತ್ತಾರೆ. ಮನೆ ಬಿಟ್ಟಾಗ ಹಸಿರು ಬಣ್ಣದ ಪ್ಯಾಂಟ್ ಮತ್ತು ಸ್ಲೇಟ್ ಬಣ್ಣದ ಪ್ಯಾಂಟ್ ಧಸಿದ್ದರು ಎಂದು ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

