ಮಣ್ಣು ಪರೀಕ್ಷೆ ಆಧರಿಸಿ ಬೆಳೆ ಆಯ್ಕೆ ಮಾಡಿ
ಹೊಳೆನರಸೀಪುರ: ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬೆಳೆಗಳ ಆಯ್ಕೆ ಮತ್ತು ಅಗತ್ಯ ರಸಗೊಬ್ಬರಗಳನ್ನು ಬಳಕೆ ಮಾಡಬೇಕು. ಹೀಗಾದಲ್ಲಿ ಮಾತ್ರವೇ ರೈತರು ಕೃಷಿಯಲ್ಲಿ ನಷ್ಟವನ್ನು ಕಡಿಮೆಗೊಳಿಸಿ, ಲಾಭದಾಯಕ ಕೃಷಿಯನ್ನು ಮಾಡಬಹುದಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕ ಮುನೇಗೌಡ ರೈತರಿಗೆ ತಿಳಿಸಿದರು.
ಇಲ್ಲಿನ ಕೃಷಿ ಇಲಾಖೆಯ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಭೂಚೇತನ ಕಾರ್ಯಾಗಾರ ಉದ್ಘಾಟಿಸಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ ಕೃಷಿಯಲ್ಲಿನ ನಷ್ಟದ ಪ್ರಮಾಣ ಕಡಿಮೆಗೊಳಿಸಬಹುದಾಗಿದೆ ಎಂದರು.
ಆಸಕ್ತಿ ಅಗತ್ಯ: ರೈತರು ಕೃಷಿಯೊಂದಿಗೆ ಹೈನುಗಾರಿಕೆ, ತೊಟಗಾರಿಕೆ, ಕುಕ್ಕುಟ ಉದ್ಯಮದಂತಹ ಇನ್ನಿತರ ಲಾಭದಾಯಕ ಚಟುವಟಿಕೆಗಳೆಡೆಗೂ ಗಮನಹರಿಸಿ ಆಸಕ್ತಿ ಬೆಳೆಸಿಕೊಂಡಲ್ಲಿ ಲಾಭ ಗಳಿಕೆ ಸಾಧ್ಯ. ಭೂಚೇತನ ಕಾರ್ಯಕ್ರಮದ ಉದ್ದೇಶ ಮೊದಲ ಹಂತದಲ್ಲಿ ಖುಷ್ಕಿ ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವುದಾಗಿತ್ತು. ಈಗ ಎರಡನೇ ಹಂತದಲ್ಲಿ ನೀರಾವರಿ ಆಶ್ರಿತ ಬೆಳೆಗಳಿಗೂ ಇಳುವರಿಯನ್ನು ಹೆಚ್ಚಿಸಲು ಸಮತೋಲನ ಆಧಾರಿತ ಪೋಷಕಾಂಶಗಳ ಅಳವಡಿಕೆಗೆ ಶಿಫಾರಸು ಮಾಡುವುದಾಗಿದೆ ಎಂದು ಮುನೇಗೌಡ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್. ಭಾನುಪ್ರಕಾಶ್, ಸುಧಾರಿತ ತಳಿಗಳನ್ನು ರೈತರಿಗೆ ಪರಿಚಯಿಸಿ, ಬೀಜೋತ್ಪಾದನೆಯನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅವಸರದ ಕೃಷಿ: ಕೃಷಿ ವಿವಿಯ ಬೇಸಾಯ ಶಾಸ್ತ್ರ ತಜ್ಞ ಡಾ. ಜಯರಾಮಯ್ಯ ಮಾತನಾಡಿ, ಅವಸರದ ಕೃಷಿ ಪದ್ಧತಿಯಿಂದ ಇಂದಿನ ದಿನಗಳಲ್ಲಿ ಕೃಷಿಯಲ್ಲಿ ನಷ್ಟದ ಜೊತೆಗೆ ಭೂಮಿಯ ಫಲವತ್ತತೆಯಲ್ಲಿಯೂ ಸಾಕಷ್ಟು ಕುಂಠಿತ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಪಂ ಅಧ್ಯಕ್ಷ ಸಿ.ಆರ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿಯ ಕೀಟರೋಗ ತಜ್ಞ ಡಾ.ಎಂ.ಎಸ್. ನಾಗರಾಜ್, ಜಿಪಂ ಮಾಜಿ ಸದಸ್ಯ ಎಚ್.ಜೆ. ರಾಮೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೊಯ್ಸಳ ಅಪ್ಪಾಜಿ, ಪ್ರಗತಿಪರ ಕೃಷಿಕ ಪುಟ್ಟಪ್ಪ, ಎಂ.ಕೆ. ನಾಗರಾಜು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಚಂದ್ರು ಇತರರು ಇದ್ದರು. ಸಹಾಯಕ ಕೃಷಿ ಅಧಿಕಾರಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

