ಹಾಸನ

ತರಕಾರಿ ಸಗಟು ವ್ಯಾಪಾರ ಎಪಿಎಂಸಿಯಲ್ಲೇ ನಡೆಯಲಿ

Published On :

ಕನ್ನಡಪ್ರಭ ವಾರ್ತೆ, ಅರಸೀಕೆರೆ. ಜು 16
ಪಟ್ಟಣದ ಸಂತೆ ಮೈದಾನದಲ್ಲಿ ಸಗಟು ತರಕಾರಿ ವ್ಯಾಪಾರಸ್ಥರಿಂದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ರೈತರು ಆರೋಪಿಸಿದರು.
 ಇದರ ವಿರುದ್ಧ ನಿರಂತರ ಹೋರಾಟದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಗೊಂಡಿದ್ದ ತರಕಾರಿ ಸಗಟು ವ್ಯಾಪಾರ ವಹಿವಾಟನ್ನು ರೈತರ ಹಿತ ಮರೆತು ವ್ಯಾಪಾರಿಗಳ ಪರವಾಗಿರುವ ಕೆಲ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಸಂತೆ ಮೈದಾನಕ್ಕೆ ಸ್ಥಳಾಂತರಿಸಲು ಮುಂದಾಗಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಯಿತು. ಇದನ್ನು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ನಿರಂತರ ಹೋರಾಟ: ಸಂತೆ ಮೈದಾನದಲ್ಲಿ ಸಗಟು ವ್ಯಾಪಾರಸ್ಥರು, ತಮಗೆ ಇಷ್ಟ ಬಂದ ಬೆಲೆಯಲ್ಲಿ ತರಕಾರಿಗಳನ್ನು ಕೊಂಡು ತೂಕದಲ್ಲೂ ಮೋಸ ಮಾಡಿ ರೈತರ ಶೋಷಣೆ ಮಾಡುತ್ತಿದ್ದಾರೆ.
   ರೈತ ಸಂಘ ನಿರಂತರ ಹೋರಾಟ ನಡೆಸಿದ್ದರಿಂದ ಎಚ್ಚೆತ್ತ ಅಧಿಕಾರಿಗಳು ಹಾಗೂ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ತರಕಾರಿ ವಹಿವಾಟನ್ನು ಸ್ಥಳಾಂತರಗೊಳಿಸಿದ್ದರು. ಈಗ ಮತ್ತೆ ಸಂತೆ ಮೈದಾನಕ್ಕೆ ಸ್ಥಳಾಂತರಗೊಳಿಸಲು ಮುಂದಾಗಿದ್ದು, ಇದರಿಂದ ರೈತರಿಗೆ ತೀವ್ರ ಅನ್ಯಾಯವಾಲಿದ್ದು, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹುನ್ನಾರ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್, ತಮ್ಮ ಅವಿರತ ಹೋರಾಟದ ಫಲದಿಂದ ನೂರಾರು ರೈತರಿಗೆ ಪ್ರಯೋಜನವಾಗಿದೆ.
  ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ರೈತರಿಗೆ ಬೆಲೆಯಲ್ಲಿ ಹಾಗೂ ತೂಕದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಅಲ್ಲದೆ ತಮಗೆ ಅನ್ಯಾಯವಾದಲ್ಲಿ ತಕ್ಷಣ ಅಧಿಕಾರಿಗಳ ಸಹಾಯ ಪಡೆಯಬಹುದು ಎಂದರು.
ರೈತರಿಗೆ ಮೋಸಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ವರ್ತಕರು ರಾಜಕಾರಣಿಗಳ ಮೇಲೆ ಒತ್ತಡ ಹೇರಿ, ಮತ್ತೆ ಸಂತೆ ಪೇಟೆಗೆ ವರ್ಗಾಯಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೆ ಇಂತಹ ರೀತಿಯ ವಿರೋಧಿ ನೀತಿಗೆ ಅಧಿಕಾರಿಗಳು ಮುಂದಾಗಬಾರದು ಎಂದು ಒತ್ತಾಯಿಸಿದರು.
ಲಿಖಿತ ಆದೇಶ: ಸುಂಕ ವಿನಾಯಿತಿ ದೊರೆತಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮಾರುಕಟ್ಟೆ ಆವರಣದಿಂದ ಸಂತೆ ಮೈದಾನಕ್ಕೆ ವ್ಯಾಪಾರ ವಹಿವಾಟು ಸ್ಥಳಾಂತರಿಸಲು ಅಧಿಕಾರಿಗಳು ಲಿಖಿತ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.  ಎಪಿಎಂಸಿಗೂ ಪುರಸಭೆಗೂ ಯಾವುದೇ ಸಂಬಂಧವಿಲ್ಲ, ಪುರಸಭಾ ಅಧಿಕಾರಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಎಪಿಎಂಸಿ ಕಾರ್ಯದರ್ಶಿಗಳು ಸೂಚಿಸದಿದ್ದರೆ ಎಪಿಎಂಸಿ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಹೋರಾಟ ನಡೆಸಿರುವ ಕುರಿತು ರಾಜ್ಯಪಾಲರು ಮುಖ್ಯಮಂತ್ರಿಗಳು ಸಂಬಂಧಿಸಿದ ಸಚಿವರ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದರು.  ಈ ಸಂದರ್ಭದಲ್ಲಿ ಜವನಹಳ್ಳಿ ನಿಂಗಪ್ಪ, ಹಾರನಹಳ್ಳಿ ಓಂಕಾರಮೂರ್ತಿ, ಸೋಮಶೇಖರ್, ಶೇಖರಪ್ಪ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.