ಹಾಸನ

ಹಾಸನ ರಿಂಗ್ ರಸ್ತೆ ಕಾಮಗಾರಿ ಶೀಘ್ರ ಪ್ರಾರಂಭ

Published On :

ಹಾಸನ: ಹಾಸನದ ರಿಂಗ್ ರಸ್ತೆಯ, ಹಳೇಬೀಡು ರಸ್ತೆಯಿಂದ ಬೇಲೂರು ರಸ್ತೆವರೆಗೆ 3.18 ಕಿ.ಮೀ.ನಿಂದ 5.25 ಕಿ.ಮೀ. ಅಡಚಣೆ ರಹಿತ ಭೂಮಿ ಲಭ್ಯವಿದ್ದು, ಇದನ್ನು ಅಭಿವೃದ್ಧಿಪಡಿಸಲು 2013-14ನೇ ಸಾಲಿನಲ್ಲಿ 4 ಪಥದ ರಸ್ತೆ ನಿರ್ಮಾಣ ಮಾಡಲು 3 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಲಖಿತ ಉತ್ತರ ನೀಡಿರುವ ಸಚಿವರು, 2013-14ನೇ ಸಾಲಿನಲ್ಲಿ ಮಂಜೂರಾಗಿರುವ 3 ಕೋಟಿ ಅನುದಾನದಲ್ಲಿ 3.18ರಿಂದ 7 ಕಿ.ಮೀ.ವರೆಗೆ ಮಧ್ಯಮ ಪಥದ ರಸ್ತೆ ನಿರ್ಮಾಣ ಮಾಡಲು ಟೆಂಡರ್ ಸ್ವೀಕೃತಗೊಂಡಿದ್ದು ನಿಯಮಾನುಸಾರ ಗುತ್ತಿಗೆದಾರರನ್ನು ನಿಗದಿಗೊಳಿಸಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
5.25 ಕಿ.ಮೀ.ನಿಂದ 7 ಕಿ.ಮೀ.ವರೆಗೆ ಬೇಲೂರು ರಸ್ತೆಯವರೆಗೆ ಖಾಸಗಿ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಭೂಸ್ವಾಧೀನಾಧಿಕಾರಿಗಳಿಗೆ 54.75 ಲಕ್ಷ ಪ್ರಾರಂಭಿಕ ಠೇವಣಿ ಇಡಲು ಅನುಮೋದನೆ ನೀಡಲಾಗಿದೆ. ಈ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಲು ಪ್ರಸಕ್ತ ಮಾರುಕಟ್ಟೆ ದರದಂತೆ ಅಂದಾಜು 5 ಕೋಟಿ ಅನುದಾನ ಅವಶ್ಯಕವಿದ್ದು, ನಂತರ ನಿಯಮಾನುಸಾರ ಕ್ರಮ ವಹಿಸಲಾಗುವುದು.
ಕೆಲ್ಲಂಗೆರೆಯಲ್ಲಿ ಸಂಹಿತಾ ಯಾಗಕ್ಕೆ ಚಾಲನೆ
ಹಾರನಹಳ್ಳಿ (ಅರಸೀಕೆರೆ ತಾ.): ಇತಿಹಾಸ ಪ್ರಸಿದ್ಧ ಅರಸೀಕೆರೆ ತಾಲೂಕಿನ ಕೆಲ್ಲಂಗೆರೆಯ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ಲೋಕ ಕಲ್ಯಾಣರ್ಥವಾಗಿ ಶಾಕಲ ಋಕ್ಸಾಂಹಿತಾ- ಯಾಗವನು ದೇವಿ ಉಪಾಸಕರಾದ ಕೆಲ್ಲಂಗೆರೆಯ ಕೆ.ಜೆ. ರಾಮದಾಸಪ್ಪ ಕುಟುಂಬದವರು ಅಗ್ನಿ ಮಂಥನ ಮಾಡುವುದರ ಮೂಲಕ ಸಂಹಿತಾ ಯಾಗಕ್ಕೆ ಚಾಲನೆ ನೀಡಿದರು.
ಪ್ರಂಪಚವನ್ನೇ ಉದ್ಧಾರ ಮಾಡಬಲ್ಲಂತಹ ನಮ್ಮ ದಿವ್ಯ ಸಂಸ್ಕೃತಿಗೆ ವೇದಗಳೇ ಸುಭದ್ರ ಅಡಿಪಾಯ. ವೇದಗಳೇ ಜ್ಞಾನ ಮತ್ತು ದಾರಿದೀಪ ಆಪ್ರಭುವಿನ ದಿವ್ಯವಾಣಿ, ಸೃಷ್ಟಿಯ ಆದಿ ಶಬ್ಧರೂಪದಲೇ ಪ್ರಕಟವಾದ ಜ್ಞಾನ, ವಿಜ್ಞಾನ ಭಂಡಾರವೇ ವೇದಗಳು ವೇದಗಳು ಅಪೌರುಷೇಯವೆಂದು ಪರಮೇಶ್ವರನವಾಣಿಯಾಗಿದೆ ಎಂದು ವಿದ್ವಾನ್ ಕೃಷ್ಣಮೂರ್ತಿ ಘನಪಾಠಿ ತಿಳಿಸಿದರು.
ಋಗ್ವೇದ ಸಂಹಿತಾ ಭಾಗವು ವೇದಗಳಲ್ಲೆಲ್ಲಾ ಅತಿ ಪುರಾತನವಾದದು ಋಗ್ವೇದ. 10552 ಋಕುಗಳು, 10 ಮಂಡಲ, 85 ಅನುವಾಕ, 1028 ಸೂಕ್ತಗಳಿವೆ. ಆಮಂತ್ರಗಳಿಂದ ಹೋಮ ಮಾಡಲಾಗುತ್ತದೆ ಎಂದರು. ವೇ.ಬ್ರ.ಶ್ರೀ ವಾಸುದೇವಭಟ್ ಅನಂತ ಪ್ರಕಾಶ, ರಾಧಕೃಷ್ಣ, ಅಡ್ಡಗದ್ದೆ ಕೃಷ್ಣಮೂರ್ತಿ, ಉದಯವೈದ್ಯ, ವೈದಿಕರು ಯಾಗದಲ್ಲಿ ಪಾಲ್ಗೊಂಡಿದ್ದರು. ಲಕ್ಷ್ಮೀ ನಾರಾಯಣಸ್ವಾಮಿಯವರಿಗೆ ವಿಶೇಷ ಅಭಿಷೇಕ ಅಲಂಕಾರ ಮಾಡಲಾಗಿತ್ತು. ಜು.23ರಂದು ಯಾಗದ ಪೂರ್ಣಾಹುತಿ ನಡೆಯಲಿದೆ.
ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಸೆಸ್ಕ್ ಕಚೇರಿಗೆ ರೈತರ ಮುತ್ತಿಗೆ
ಅರಸೀಕೆರೆ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪ್ರತಿದಿನ ಸಂಜೆ 6ರಿಂದ 10 ರವರೆಗೆ ಜ್ಯೂಸ್ ಲೈನ್(ಓಪನ್ ಡೆಲ್ಟಾ) ನೀಡಿ ಕಿರುಕುಳ ನೀಡುತ್ತಿರುವ ಸೆಸ್ಕಾಂ ಅಧಿಕಾರಿಗಳ ಧೋರಣೆ ಖಂಡಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಸೆಸ್ಕ್ ಕಚೇರಿ ಎದುರು ಧರಣಿ ನಡೆಸಿದರು. ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ವಿತರಣೆ ಮಾಡದ ಕಾರಣ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ತಕ್ಷಣದಿಂದಲೇ ಸಮರ್ಪಕ ವಿದ್ಯುತ್ ವಿತರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.  ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ,  ಸಂಜೆ ವೇಳೆ ವಿದ್ಯುತ್ ಅವ್ಯವಸ್ಥೆಯಿಂದ ಹಿಟ್ಟಿನ ಗಿರಣಿಗಳು, ಕುಡಿಯುವ ನೀರಿನ ಕೊಳವೆಬಾವಿಗಳು ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೀವ್ರ ಅನಾನುಕೂಲ ಉಂಟಾಗಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೆ ಜ್ಯೂಸ್‌ಲೈನ್(ಓಪನ್ ಡೆಲ್ಟಾ) ವ್ಯವಸ್ಥೆ ರದ್ದುಗೊಳಿಸಬೇಕು ಇಲ್ಲದಿದ್ದಲ್ಲಿ ಸಾವಿರಾರು ರೈತರೊಂದಿಗೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಗ್ರಾಪಂ ಸದಸ್ಯ ಓಂಕಾರಮೂರ್ತಿ ಮಾತನಾಡಿ, ಸಂಜೆ ಪ್ರತಿದಿನ 6ರಿಂದ 10 ಗಂಟೆವರೆಗೆ 2 ಫೇಸ್ ವಿದ್ಯುತ್ ನೀಡಬೇಕಾದ ನಿಗಮದ ಅಧಿಕಾರಿಗಳು. ಅಗತ್ಯವಿರುವ ಸಂದರ್ಭದಲ್ಲಿ ಗುಣಮಟ್ಟದ ವಿದ್ಯುತ್ ನೀಡದ ಪರಿಣಾಮ ಸುಮಾರು 350 ಕ್ಕೂ ಹೆಚ್ಚು ಕೊಳವೆ ಬಾವಿ ಮೋಟಾರ್‌ಗಳು ಸುಟ್ಟುಹೋಗಿವೆ ಎಂದು ದೂರಿದರು.  ಗ್ರಾಪಂ ಮಾಜಿ ಅಧ್ಯಕ್ಷ ಕರೀಂ ಸಾಬ್ ಮಾತನಾಡಿ,  ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸದೆ ಇಂತಹ ವ್ಯವಸ್ಥೆ ರೂಪಿಸಿರುವುದು ರೈತ ಸಮುದಾಯದ ಮೇಲೆ ಗದಾಪ್ರಹಾರ ಮಾಡಿದೆ ಎಂದು ಕಿಡಿ ಕಾರಿದರು.  ಜವನಹಳ್ಳಿ ನಿಂಗಪ್ಪ, ಪ್ರಸನ್ನಕುಮಾರ್, ಬಸವರಾಜ್ ಇದ್ದರು.
ದಿಡಗ ಗ್ರಾಪಂ ಅವ್ಯವಹಾರ: ತನಿಖೆಗೆ ಬಾರದ ಅಧಿಕಾರಿಗಳು
ಚನ್ನರಾಯಪಟ್ಟಣ: ತಾಲೂಕಿನ ದಿಡಗ ಗ್ರಾಮ ಪಂಚಾಯಿತಿಯಲ್ಲಿನ ವಿವಿಧ ಯೋಜನೆಗಳಲ್ಲಿ ಅವ್ಯವಹಾರವಾಗಿದೆ ಎಂದು ಸಾರ್ವಜನಿಕರು ನಡೆಸಿದ ಧರಣಿಯಲ್ಲಿ ತನಿಖೆ ಮಾಡಲು ದಿನಾಂಕ ನಿಗದಿ ಮಾಡಿದ್ದು, ನಿಗದಿತ ಸಮಯಕ್ಕೆ ಅಧಿಕಾರಿಗಳು ಬಾರದಿರುವುದನ್ನು ಖಂಡಿಸಿ ಸಾರ್ವಜನಿಕರು ಧರಣಿ ನಡೆಸಿದರು. ದಿಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ತಾರತಮ್ಯ ನೀತಿ ಹಾಗೂ ಯೋಜನೆಗಳಲ್ಲಿ ಅವ್ಯವಹಾರವಾಗಿರುವ ಬಗ್ಗೆ ತನಿಖೆ ನಡೆಸುವ ಸಂಬಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಜು.17ದಿನಾಂಕವನ್ನು ನಿಗದಿ ಮಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗ್ರಾಮ ಪಂಚಾಯಿತಿ ಆವರಣಕ್ಕೆ ಬೆಳಗ್ಗೆ ಆಗಮಿಸಿದ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು ಮಧ್ಯಾಹ್ನವಾದರೂ ಬಾರದ ಕಾರಣ ವಿಳಂಬ ಖಂಡಿಸಿ ಧರಣಿ ನಡೆಸಿದರು. ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳೇ ದಿನಾಂಕ ನಿಗದಿ ಮಾಡಿ ಅವರೇ ಬಾರದಿರುವುದನ್ನು ಆರೋಪಿಸಿದ ಸಾರ್ವಜನಿಕರು ಯೋಜನೆ ಅವ್ಯವಹಾರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪಾತ್ರವಿರುವುದು ಖಾತ್ರಿಯಾಗಿದೆ ಎಂದು ಆರೋಪಿಸಿದರು.  ಸಾರ್ವಜನಿಕರು ತನಿಖೆ ನಡೆಸುವವರಗೆ ತಾವು ಸ್ಥಳವನ್ನು ಬಿಟ್ಟು ಕದಲುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ಕುಳಿತರೂ ಸಂಜೆ 5ಗಂಟೆಯಾದರೂ ಬಾರದ ಕಾರಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜೂಜು: ಮೂವರ ಸೆರೆ
ಅರಕಲಗೂಡು: ಇಲ್ಲಿಗೆ ಸಮೀಪದ ವಿಜಾಪುರ ಅರಣ್ಯ ಗ್ರಾಮದಲ್ಲಿ ಅಕ್ರಮವಾಗಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಅರಕಲಗೂಡು ಪೊಲೀಸರು ಗುರುವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ. ಈ ವೇಳೆ ಮಂಜುನಾಥ, ಚಂದ್ರು ಮತ್ತು ಗಣೇಶ ಎಂಬುವವರನ್ನು ಬಂಧಿಸಲಾಗಿದ್ದು ಮತ್ತೆ ಕೆಲವರು ತಪ್ಪಿಸಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ 1500 ರು. ದೊರೆತಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪದಾಧಿಕಾರಿಗಳ ಪದಗ್ರಹಣ
ಹಾಸನ: ಮಾನವೀಯ ಮೌಲ್ಯಗಳನ್ನು ವೃದ್ಧಿಸುವ ಸಂಸ್ಥೆ ರೋಟರಿಯಾಗಿದೆ ಎಂದು ಜಿಲ್ಲಾ ರೋಟರಿ ರಾಜ್ಯಪಾಲ ಡಿ. ಎಸ್. ರವಿ ತಿಳಿಸಿದ್ದಾರೆ. ಚನ್ನರಾಯಪಟ್ಟಣದ ಸಿ.ವಿ. ಮಂಜಪ್ಪ ಸಮುದಾಯ ಭವನದಲ್ಲಿ ತಾಲೂಕು ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿ, ರೋಟರಿ ಸಂಸ್ಥೆ ಅನನ್ಯ. ಸಾಮಾಜಿಕ ಹೊಣೆಗಾರಿಕೆ, ನಾಯಕತ್ವದ ಅವಕಾಶವನ್ನು ರೋಟರಿ ಕಲ್ಪಿಸುತ್ತಿದೆ. ಆರೋಗ್ಯ, ನೈರ್ಮಲ್ಯಕ್ಕೆ ರೋಟರಿ ಸದಸ್ಯರು ಆದ್ಯತೆ ನೀಡಿ ಕಾರ್ಯ ಮಾಡಬೇಕು. ಬೇಜವಾಬ್ದಾರಿಯಿಂದ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದೆ. ಭಾರತದಲ್ಲಿ ಶೇ.50ರಷ್ಟು ಮಂದಿ ಯುವ ಶಕ್ತಿ ಇದರ ಸದ್ಬಳಕೆಯಾಗದೆ ಜನಸಂಖ್ಯೆ ಹೆಚ್ಚಳ ಆತಂಕ ತರಲಾರದು. ಭಾರತೀಯ ಸಂಸ್ಕೃತಿ, ಸಂಸ್ಕಾರ, ನೆಲ ಜಲದ ಬಗ್ಗೆ ಅಭಿಮಾನದ ಕಾರ್ಯ ನಮ್ಮದಾಗಬೇಕೆಂದರು. ಸಕಲೇಶಪುರದ ರೋಟರಿ ಸಂಸ್ಥೆ ಸಹಾಯಕ ರಾಜ್ಯಪಾಲ ಡಾ.ಕಿಶೋರ್ ಮಾತನಾಡಿ, ತಾಲೂಕಿನಲ್ಲಿ ರೋಟರಿ ಸಂಸ್ಥೆಯ ಕಾರ್ಯದ ಬಗ್ಗೆ ಪ್ರಶಂಸಿಸಿ ಸಮಾಜದ ದುಃಖಕ್ಕೆ ಸ್ಪಂದಿಸುವ ಮೌಲ್ಯಗಳು ರೋಟರಿ ಸಂಸ್ಥೆಯ ಧ್ಯೇಯವಾಗಿದೆ. 12 ಲಕ್ಷ ರೋಟರಿ ಸದಸ್ಯರಿದ್ದು, 34537 ಕ್ಲಬ್‌ಗಳು, 219 ರಾಷ್ಟ್ರಗಳಲ್ಲಿ ಕಾರ್ಯ ಮಾಡುತ್ತಿದೆ ಎಂದರು. ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಎಂ. ಆರ್ ಅನಿಲ್‌ಕುಮಾರ್ ಸ್ವಾಗತಿಸಿ, ತಾಲೂಕು ಸಂಸ್ಥೆಯ ಕಾರ್ಯಚಟುವಟಿಕೆ ವರದಿ ತಿಳಿಸಿದರು. 2014-15ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಅಶೋಕ್ ಕುಮಾರ್, ಕಾರ್ಯದರ್ಶಿಯಾಗಿ ನವೋದಯ ವಿದ್ಯಾ ಸಂಘದ ಕಾರ್ಯದರ್ಶಿ ಎ.ಎನ್. ರೋಹಿತ್ ಹಾಗೂ ತಂಡದವರು ಅಧಿಕಾರ ಸ್ವೀಕರಿಸಿದರು. ರೋಟರಿಯನ್ ಯಶವಂತ್ ನಿರೂಪಿಸಿದರು. ಆಗಸ್ಟೀನ್ ಬಾಬು, ಹೇಮಲತಾ, ರೂಪ, ರಾಕೇಶ್, ಜಲೇಂದ್ರ, ಮಂಜುನಾಥ್ ಇತರರು ಇದ್ದರು.
ಅಪಘಾತ: ಇಬ್ಬರಿಗೆ ಗಾಯ
ಶ್ರೀರಂಗಪಟ್ಟಣ: ಟ್ರ್ಯಾಕ್ಟರ್ ಬೈಕೈಗೆ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗಂಜಾಂ ಗ್ರಾಮದ ಗುಂಬಜ್ ರಸ್ತೆಯ ಆರಕ್ಷಕ ಉಪಠಾಣೆ ಎದುರು ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿರುವ ಗೋವಿಂದರಾಜು(25), ರಾಜೇಂದ್ರ(28) ಮೈಸೂರಿನ ಕೆಆರ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.