ಹಾಸನ

ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ

Published On :

ಕನ್ನಡಪ್ರಭವಾರ್ತೆ, ಅರಕಲಗೂಡು, ಜು.28
ಕುಲಗೆಟ್ಟ ರಸ್ತೆಗಳು, ಎಲ್ಲೆಲ್ಲೂ ಗುಂಡಿಗಳದ್ದೇ ದರ್ಬಾರು. ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೇ ಆಪತ್ತು. ಇಂತಹ ರಸ್ತೆಗಳಿದ್ದರೂ ಜನರ ಸಮಸ್ಯೆಯತ್ತ ಜನಪ್ರತಿನಿಧಿಗಳಾಗಲೀ, ಸರ್ಕಾರವಾಗಲೀ ಗಮನಹರಿಸುತ್ತಿಲ್ಲ ಎಂಬ ಆರೋಪದೊಂದಿಗೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
 ಸುರಿಯುತ್ತಿದ್ದ ಮಳೆಯ ನಡುವೆಯೇ ಪಟ್ಟಣದ ಹೊರವಲಯದ ರಾಮನಾಥಪುರ ರಸ್ತೆಯಲ್ಲಿ ಅಪಘಾತಕ್ಕೀಡಾದ ಬೈಕ್ ಮತ್ತು ಗಾಯಗೊಂಡು ರಕ್ತಸಿಕ್ತನಾಗಿ ಸಾವನ್ನಪ್ಪಿದ ಬೈಕ್ ಸವಾರನ ಶವದ ಅಣಕು ಶವವನ್ನು ರಸ್ತೆಯಲ್ಲೇ ಮಲಗಿಸಿ ಪ್ರತಿಭಟನೆಗೆ ನಡೆಸಿದರು.
ಸಂಚಾರ ಅಸ್ತವ್ಯಸ್ತ: ರಸ್ತೆ ದುರಸ್ತಿಗೊಳಿಸಿ, ಇಲ್ಲವೇ ಅಪಘಾತಗಳಿಂದ ಸಾಯುವ ಜನರ ಶವ ದಾಟಿ ಹೋಗಿ ಎಂಬ ಘೋಷಣೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ದ ಕೂಗಿದರು. ಸುಮಾರು ಎರಡು ಗಂಟೆಗೂ ಅಧಿಕ ಸಮಯ ರಸ್ತೆ ತಡೆ ಮಾಡಿದರು. ಇದರಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕಚೇರಿ ಕೆಲಸಕ್ಕೆ ತೆರಳುತ್ತಿದ್ದ ಹಲವರು ರಸ್ತೆಯಲ್ಲೇ ನಿಲ್ಲುವಂತಾಯಿತು.
 ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಾಸಕರ ಓಲೈಕೆಗಾಗಿ ಕೆಲಸ ಮಾಡುತ್ತಿದ್ದಾರೆ. 2015ರ ವರೆಗೂ ಹೆದ್ದಾರಿ ಕಾಮಗಾರಿ ಆರಂಭವಾಗುವುದಿಲ್ಲ ಎಂಬುದು ಅಧಿಕಾರಿಗಳಿಗೂ ಗೊತ್ತಿದೆ. ಆದರೆ ಈಗಾಗಲೇ ರಸ್ತೆ ದುರಸ್ತಿಗೆಂದು ಬಿಡುಗಡೆ ಆಗಿರುವ 20 ಕೋಟಿ ರು.ಗಳನ್ನು ವೆಚ್ಚ ಮಾಡದೇ ಜನರನ್ನು ವಂಚಿಸಲಾಗುತ್ತಿದೆ. ಕನಿಷ್ಠ ತಾತ್ಕಾಲಿಕ ಪರಿಹಾರ ಕಲ್ಪಿಸಿಕೊಡದ ಇಂತಹ ಅಧಿಕಾರಿಗಳು ತಾಲೂಕಿಗೆ ಏಕೆ ಬೇಕು ಎಂದು ಪ್ರತಿಭಟನಾಕಾರರು, ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ  ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಣೇಶ್ ಅವರನ್ನು ಪ್ರಶ್ನಿಸಿದರು.
ಅಣಕು ಶವ ದಹನ: ನಂತರ ರಕ್ತಸಿಕ್ತವಾಗಿದ್ದ ಅಣಕು ಶವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊತ್ತು ಮೆರವಣಿಗೆಯಲ್ಲಿ ತಂದ ಕರವೇ ಕಾರ್ಯಕರ್ತರು ಅ.ನ.ಕೃ ವೃತ್ತದಲ್ಲಿ ಅಣಕು ಶವವನ್ನು ದಹಿಸಿದರು.
 ನಂತರ ಮಾತನಾಡಿದ ಕರವೇ ಅಧ್ಯಕ್ಷ ಹೆಚ್.ಆರ್.ಭಾಸ್ಕರ್, ಪ್ರತಿಭಟನೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟಕ್ಕೆ ಜನರನ್ನು ಸಂಘಟಿಸಲಾಗುವುದು ಎಂದು ಎಚ್ಚರಿಸರಿದರು.
ನಂತರ ಉಪ ತಹಸೀಲ್ದಾರ್ ರಂಗರಾಜು ಅವಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ತಾಲೂಕು ಕರವೇ ಉಪಾಧ್ಯಕ್ಷ ಯೋಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ, ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಸೋಮಶೇಖರ್, ನಗರಾಧ್ಯಕ್ಷ ಚೇತನ್, ಮುಖಂಡರಾದ ಎಂ.ಎಸ್. ಕೃಷ್ಣಮೂರ್ತಿ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.