ಹಾಸನ

ತೀರ್ಥಂಕರ ಮೋಕ್ಷ ಕಲ್ಯಾಣ ಮಹೋತ್ಸವ ನಾಳೆಯಿಂದ

Published On :

ಹಾಸನ: ಮುಕುಟ ಸಪ್ತಮಿ ಮಹೋತ್ಸವ ಸಮಿತಿ ಹಾಗೂ ಸಮಸ್ತ ದಿಗಂಬರ ಜೈನ ಸಮಾಜದ ಆಶ್ರಯದಲ್ಲಿ   ಆ. 2 ಮತ್ತು 3ರಂದು ನಗರದ ಮಹಾವೀರ ಭವನದಲ್ಲಿ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ.  ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಸಂಸ್ಥಾನ ಜೈನ ಮಠದ ನೂತನ ಭಟ್ಟಾರಕರಾಗಿ ಪಟ್ಟಾಭಿಶಕ್ತ ರಾಗಿರುವ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಆ. 2ರಂದು ಮಧ್ಯಾಹ್ನ 3 ಗಂಟೆಗೆ ಮಂಗಲ ಪ್ರವೇಶ ಮಾಡಲಿದ್ದು, ಅವರಿಗೆ ಹಾಸನ ಜೈನ ಸಮಾಜದ ವತಿಯಿಂದ ಗುರುವಂದನಾ, ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆ. 3ರಂದು ಬೆಳಗ್ಗೆ 7ಕ್ಕೆ ದೊಡ್ಡ ಬಸದಿಯ ಪಾರ್ಶ್ವನಾಥ ತೀರ್ಥಂಕರರಿಗೆ ಜಲಾಭಿಷೇಕ, 8ಕ್ಕೆ ಚಿಕ್ಕ ಬಸದಿಯ ಪಾರ್ಶ್ವನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಹಾವೀರ ಭವನದಲ್ಲಿ ಪಾಶ್ವನಾಥ ತೀರ್ಥಂಕರರಿಗೆ 108 ಕಳಶಗಳ ಜಲಾಭಿಷೇಕ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಹುಚ್ಚುನಾಯಿ ಕಡಿತದಿಂದ ವೃದ್ಧೆಗೆ ತೀವ್ರ ಗಾಯ
ಬೇಲೂರು: ಪಟ್ಟಣದ ಸಂತೆಗೆ ಬರುತ್ತಿದ್ದ ವೃದ್ಧೆಯೊಬ್ಬರಿಗೆ ಹುಚ್ಚು ನಾಯಿ ಕಡಿದು ತೀವ್ರವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಇತ್ತೀಚೆಗೆ ಘಟನೆ ನಡೆದಿದೆ. ಚನ್ನಕೇಶವ ದೇವಸ್ಥಾನದ ರಸ್ತೆಯಲ್ಲಿನ ಸರ್ಕಾರಿ ಆಸ್ಪತ್ರೆ ಮುಂಭಾಗ ಹುಚ್ಚು ನಾಯಿ ಕಡಿದು, ಪ್ರಸಾದಿಹಳ್ಳಿ ಗ್ರಾಮದ ನಂಜಮ್ಮ ಎಂಬವರು ಸಂತೆಗಾಗಿ ಬೇಲೂರಿನಲ್ಲಿ ರಸ್ತೆ ದಾಟುವ ಸಂದರ್ಭ ಹುಚ್ಚು ನಾಯಿಯೊಂದು ಕಾಲಿಗೆ ಕಡಿದಿದೆ. ನಾಯಿ ಕಡಿದ ರಭಸಕ್ಕೆ ಬಲಗಾಲಿನ ಹಿಮ್ಮಡಿಯ ಮಾಂಸ ಖಂಡ ಕಿತ್ತು ಹೊರಬಂದಿದ್ದು, ಕೂಡಲೇ ದಾರಿಹೋಕರು ನಾಯಿ ಯನ್ನು ಹಿಡಿಯಲು ಹರಸಾಹಸ ಪಟ್ಟರೂ ಸಿಗಲಿಲ್ಲ. ನಂತರ ನಂಜಮ್ಮ ಎಂಬವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು.
ಬೇಲೂರು ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿಗಳ ಹಾವಳಿ ಹೆಚ್ಚಳವಾಗಿದ್ದು, ಕಳೆದ ತಿಂಗಳು ಹಸುಗೂಸು ಸೇರಿದಂತೆ ಸುಮಾರು 8 ಜನರಿಗೆ ನಾಯಿಗಳು ತೀವ್ರ ಗಾಯ ಮಾಡಿದ್ದಾರೆ. ಈ ಬಗ್ಗೆ ಪುರಸಭೆ ಆಡಳಿತ ಗಮನಹರಿಸಬೇಕು ಹಾಗೂ ಗಾಯಗೊಂಡ ವೃದ್ಧೆಗೆ ಪರಿಹಾರ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಹೌಸಿಂಗ್ ಬೋರ್ಡ್‌ಗೆ ಸೌಲಭ್ಯ ಕಲ್ಪಿಸಲು ಆಗ್ರಹ
ಹಾಸನ: ನಗರದ ಹೊಸ ಬಸ್‌ನಿಲ್ದಾಣದ ಎದುರು ಇರುವ ಹೌಸಿಂಗ್‌ಬೋರ್ಡ್ ಕಾಲೋನಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಹಾಸನಾಂಬ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋಪಾಲ ಮತ್ತು ಉಪಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.
ಕರ್ನಾಟಕದ ಗೃಹಮಂಡಳಿಯಿಂದ ಲೇಔಟ್ ನಿರ್ಮಾಣ ಮಾಡಿ, ಮಂಡಳಿವತಿಯಿಂದ 200 ಮನೆಗಳನ್ನು ನಿರ್ಮಿಸಿ, ಫಲಾನುಭವಿಗಳಿಗೆ ವಿತರಣೆ ಮಾಡಿ ನಾಲ್ಕು ವರ್ಷ ಕಳೆದಿರುತ್ತದೆ. ಖಾಲಿ ನಿವೇಶನಗಳಲ್ಲಿ ಸುಮಾರು 250 ಮನೆಗಳನ್ನು ನಿರ್ಮಿಸಿ ಜನರು ವಾಸವಿರುತ್ತಾರೆ. ಆದರೆ ಈ ಬಡಾವಣೆಗೆ ಗೃಹ ಮಂಡಳಿಯವರು ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸದೆ ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ.
ಈ ಬಡಾವಣೆಗೆ ವಾರಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಿದ್ದು, ರಾತ್ರಿ ವೇಳೆ ಬೀದಿ ದೀಪಗಳಿಲ್ಲ. ಮುಖ್ಯ ರಸ್ತೆಯಲ್ಲೇ ತಿರುಗಾಡಲು ಸಾಧ್ಯವಾಗುತ್ತಿಲ್ಲ. ರಸ್ತೆ ಬದಿ ಮತ್ತು ಖಾಲಿ ನಿವೇಶಗಳಲ್ಲಿ ಪೊದೆಗಳು ಬೆಳೆದು ಕಳ್ಳರ ಅಡಗುತಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗೃಹ ಮಂಡಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬಡಾವಣೆ ನಿವಾಸಿಗಳ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.