ಆದ್ಯತೆ ನೀಡುವರೇ ರೇಲ್ವೆ ಸಚಿವರು?
- ಪಿ. ರವಿಕುಮಾರ್
ಹಾಸನ: ರೈಲ್ವೆ ಖಾತೆ ನಮ್ಮ ರಾಜ್ಯಕ್ಕೇ ಒಲಿದಿರುವುದರಿಂದ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳು ಪೂರ್ಣಗೊಳ್ಳಬಹುದೆಂಬ ನಿರೀಕ್ಷೆಯನ್ನು ಜನತೆ ಹೊಂದಿದ್ದಾರೆ.
ನರೇಂದ್ರ ಮೋದಿ ಅವರ ನೂತನ ಸಚಿವ ಸಂಪುಟದಲ್ಲಿ ಕೇಂದ್ರ ರೈಲ್ವೆ ಖಾತೆ ಡಿ.ವಿ. ಸದಾನಂದಗೌಡರಿಗೆ ಸಿಕ್ಕಿರುವುದರಿಂದ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ರೈಲ್ವೆ ಕಾಮಗಾರಿಗಳು ಪೂರ್ಣಗೊಳ್ಳಬಹುದೆಂಬ ಮಹದಾಸೆಯನ್ನು ಹೊಂದಿದ್ದಾರೆ.
ಏಕೆಂದರೆ ಈ ಹಿಂದೆ ರಾಜ್ಯದ ಅನೇಕರು ರೇಲ್ವೆ ಖಾತೆ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಎಚ್.ಸಿ. ದಾಸಪ್ಪ, ಕೆ. ಹನುಮಂತಯ್ಯ, ಜಾರ್ಜ್ಫೆರ್ನಾಂಡೀಸ್, ಜಾಫರ್ ಷರೀಫ್, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆಯವರಂತಹ ಜನಪ್ರತಿನಿಧಿಗಳು ಅಧಿಕಾರವಹಿಸಿಕೊಂಡಿದ್ದರು. ಆದರೆ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳು ನಡೆಯಲಿಲ್ಲ. ಇದೀಗ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದಗೌಡರು ಮಂತ್ರಿಯಾಗಿದ್ದಾರೆ. ಇವರಾದರೂ ಜಿಲ್ಲೆಯತ್ತ ಮುಖ ಮಾಡುತ್ತಾರೆ ಎಂಬ ಭರವಸೆಯನ್ನು ಜನತೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಕಳೆದ 17 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅನೇಕ ಯೋಜನೆಗಳು ಸದಾನಂದಗೌಡರಿಂದ ಮುಕ್ತಿಗಾಗಿ ಕಾಯುತ್ತಿವೆ. ಮುಖ್ಯವಾಗಿ 1996 ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಚಾಲನೆ ನೀಡಿದ ಹಾಸನ-ಬೆಂಗಳೂರು ನೇರ ರೈಲು ಮಾರ್ಗ ಯೋಜನೆ ಆಗಿನಿಂದಲೂ ಆಮೆಗತಿಯಲ್ಲೇ ಸಾಗುತ್ತಿದ್ದು, ಈ ಬಾರಿಯಾದರೂ ಪೂರ್ಣಗೊಳ್ಳುವುದೇ ಎಂದು ಜನತೆ ಕುತೂಹಲ ಕಂಗಳಿಂದ ಎದುರು ನೋಡುತ್ತಿದ್ದಾರೆ.
ಹಾಸನ- ಶ್ರವಣಬೆಳಗೊಳ-ಕುಣಿಗಲ್ ನೆಲಮಂಗಲ-ಬೆಂಗಳೂರು ನಡುವಿನ 166 ಕಿಮೀ ಉದ್ದದ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿ 17 ವರ್ಷ ಕಳೆದು ಹೋಗಿವೆ. ಈಗಾಗಲೇ ಹಾಸನ-ಶ್ರವಣ ಬೆಳಗೊಳ-ಹಿರೀಸಾವೆ ವರೆಗೆ ಹಳಿ ಜೋಡಣೆ ಕಾಮಗಾರಿ ಪೂರ್ಣಗೊಂಡಿದ್ದು, ಶ್ರವಣಬೆಳಗೊಳದವರೆಗೆ ರೈಲು 2006 ರಿಂದಲೇ ರೈಲು ಸಂಚರಿಸುತ್ತಿವೆ. ಅಂತೆಯೇ ಬೆಂಗಳೂರು ಕಡೆಯಿಂದ ನೆಲಮಂಗಲದವರೆಗೂ ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದೆ.
ಆದರೆ ಸೋಲೂರು ಬಳಿ ಹಳಿ ನಿರ್ಮಾಣಕ್ಕೆ ಬೇಕಾಗಿರುವ ಭೂಮಿ ಸ್ವಾಧೀನ ಕಾರ್ಯಕ್ಕೆ ಕೊಂಚ ಹಿನ್ನಡೆ ಉಂಟಾಗಿರುವುದು ಯೋಜನೆ ವಿಳಂಬಕ್ಕೆ ಪ್ರಮುಖ ಕಾರಣ. ಇದನ್ನು ಸರಿಪಡಿಸಲು ರಾಜ್ಯ ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ. ಆದರೆ ಹೊಸ ರೈಲ್ವೆ ಸಚಿವರು ಆಸಕ್ತಿ ತೋರಲೇ ಬೇಕಿದೆ.
ಫ್ಲೈಓವರ್: ಹಾಸನ ನಗರದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾದ ದಿನದಿಂದಲೂ ವಾಹನ ಸಂಚಾರಕ್ಕೆ ನರಕಯಾತನೆಯಾಗಿರುವ ಚನ್ನಪಟ್ಟಣ ರೈಲ್ವೆಗೇಟ್ ಕ್ರಾಸಿಂಗ್ನಲ್ಲಿ ಫ್ಲೈ ಓವರ್ ಇಲ್ಲವೆ ಅಂಡರ್ ಪಾಸ್ ನಿರ್ಮಾಣ ಮಾಡುವ ಬಗ್ಗೆ ಸದಾನಂದಗೌಡರು ಮನಸ್ಸು ಮಾಡುತ್ತಾರಾ ಅಂತ ಸಾವಿರಾರು ಸವಾರರು ಅಪಾರ ಆಸೆ ಇಟ್ಟುಕೊಂಡಿದ್ದಾರೆ. ಒಂದು ಖುಷಿ ವಿಷಯ ಎಂದರೆ ಕಳೆದ 18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ದುದ್ದ-ತಿಪಟೂರು ರೈಲು ಮಾರ್ಗ ಸಮೀಕ್ಷೆ ಕಾರ್ಯ ನಡೆಸುವ ಕಳೆದ ಬಜೆಟ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದ್ದರು. ಇದರಿಂದಾಗಿ ಒಣಗಿ ಹೋಗಿದ್ದ ಕನಸು ಮತ್ತೆ ಚಿಗುರೊಡೆದಿದ್ದು, ಅದು ಸಾಕಾರಗೊಳ್ಳಲು ಸದಾನಂದಗೌಡರು ಸಹಕಾರಿಯಾಗುವರೆ ಎಂಬುದನ್ನು ಕಾದು ನೋಡಬೇಕಿದೆ.
ಏಕೆಂದರೆ ಈ ಯೋಜನೆ ಸಾಕಾರವಾದರೆ ಹಾಸನ-ತುಮಕೂರು ನಡುವಿನ ಸಂಚಾರ ಸುಮಾರು 70 ಕಿಮೀ ಕಡಿಮೆಯಾಗಲಿದೆ. ಹಾಲಿ ಹಾಸನದಿಂದ ತುಮಕೂರಿಗೆ ಹೋಗಬೇಕಾದರೆ ಅರಸೀಕೆರೆ ಮಾರ್ಗವಾಗಿಯೇ ಹೋಗಬೇಕು. ಆದರೆ ಹೊಸ ಯೋಜನೆ ಅನುಷ್ಠಾನವಾದರೆ ದುದ್ದದಿಂದ ತಿಪಟೂರು ಮೂಲಕ ತುಮಕೂರಿಗೆ ಹೋಗುವುದರಿಂದ ದೂರ ಕಡಿಮೆಯಾಗಲಿದೆ. ಅಲ್ಲದೆ ಯಶವಂತಪುರ-ಮಂಗಳೂರು ರೈಲು ಅರಸೀಕೆರೆಗೆ ಹೋಗದೆಯೇ ತಿಪಟೂರು, ದುದ್ದ ಮೂಲಕ ಹಾಸನಕ್ಕೆ ಬರಬಹುದು. ಹೀಗಾದರೆ ಪ್ರಯಾಣದ ಒತ್ತಡ ಕಡಿಮೆಯಾಗಲಿದೆ.
ಈಗಾಗಿ ಇನ್ನು ಹತ್ತು ಹಲವು ಯೋಜನೆಗಳು ಜಿಲ್ಲೆಗೆ ಆಗಬೇಕಿದ್ದು, ನೂತನ ಸಚಿವರು ಜಿಲ್ಲೆಯಲ್ಲ ಮುಖ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

