ಅವ್ಯವಸ್ಥೆ ವಿರುದ್ಧ ಶಾಸಕರ ಆಕ್ರೋಶ
ಅರಸೀಕೆರೆ: ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಆಸ್ಪತ್ರೆಯ ಅವ್ಯವಸ್ಥೆ ಕಂಡು ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಜೆ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಯೊಬ್ಬರು ಶಾಸಕ ಶಿವಲಿಂಗೇಗೌಡರಿಗೆ ದೂರವಾಣಿ ಮೂಲಕ ಕರೆ ಮಾಡಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲವೆಂದು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಮಸ್ಯೆಗಳು ಅನಾವರಣಗೊಂಡಿತ್ತು. ಆಸ್ಪತ್ರೆಯ ಆವರಣದಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಹದಗೆಟ್ಟಿರುವ ಶೌಚಾಲಯ ವ್ಯವಸ್ಥೆ ಹಾಗೂ ಗಿಡಗಂಟೆಗಳಿಂದ ಆವೃತ್ತವಾಗಿರುವ ಆಸ್ಪತ್ರೆಯ ಆವರಣ ಕಂಡ ಶಾಸಕರು ವೈದ್ಯಾಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ಪುರಸಭೆ ಆರೋಗ್ಯ ನಿರೀಕ್ಷಕರಿಗೆ ಕರೆ ಮಾಡಿ ಜೆಸಿಪಿ ಯಂತ್ರದ ಸಮೇತ ಆಸ್ಪತ್ರೆಯ ಆವರಣಕ್ಕೆ ಬರುವಂತೆ ಸೂಚನೆ ನೀಡಿದ ಶಾಸಕರು ತಾವೇ ನಿಂತು ಗಿಡ ಗಂಟೆಗಳನ್ನು ತೆರವುಗೊಳಿಸಿದರಲ್ಲದೇ ಹದಗೆಟ್ಟಿರುವ ಶೌಚಾಲಯ ವ್ಯವಸ್ಥೆಯನ್ನ 24 ಗಂಟೆಯೊಳಗೆ ಸರಿಪಡಿಸುವಂತೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಜೆ.ಸಿ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಕ್ರಪಾಣಿ, ಆರೋಗ್ಯ ರಕ್ಷ ಸಮಿತಿಯ ಸದಸ್ಯ ಕಾಜಾ ಮೋಯ್ದೀನ್ ಇದ್ದರು.
ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ
ಹಾಸನ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಗೆ ಸಾರಿಗೆ ಇಲಾಖೆಯ ವತಿಯಿಂದ ಶೇ.75 ರಷ್ಟು ವೆಚ್ಚ ಭರಿಸಿ ಚಾಲನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಶೇ. 25 ರಷ್ಟು ವೆಚ್ವನ್ನು ಅಭ್ಯರ್ಥಿಗಳು ಪಾವತಿಸಬೇಕಾಗಿದೆ. ಅಭ್ಯರ್ಥಿಗಳು ಕಚೇರಿಯ ಕೆಲಸದ ಅವಧಿಯಲ್ಲಿ ಬೆಳಗ್ಗೆ 10.30ರಿಂದ 4.30 ರೊಳಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಅರ್ಜಿ ಸಲ್ಲಿಸಲು ಜೂನ್ 30 ಕಡೇ ದಿನ.
ಅಭ್ಯರ್ಥಿಗಳು ಮಾಹಿತಿಗಳನ್ನು ಒದಗಿಸಬೇಕಾಗಿದೆ. ಕಚೇರಿ ಕೆಲಸದ ದಿನಗಳಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 4.30ರ ಅವಧಿಯಲ್ಲಿ ಅರ್ಜಿಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಸನ ಇಲ್ಲಿ ಪಡೆಯಬಹುದು. ಕಡ್ಡಾಯವಾಗಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ.(ತಹಸೀಲ್ದಾರ್ರಿಂದ ಪಡೆದಿರಬೇಕು). ಮೋಟಾರು ವಾಹನ ಚಾಲನೆ ಮಾಡಲು ದೈಹಿಕ ಅರ್ಹತೆಯನ್ನು ಹೊಂದಿರಬೇಕು. ಹಾಲಿ ಲಭ್ಯ ಇರುವ ತರಬೇತಿಯಲ್ಲಿ ಯಾವುದಾದರೂ ಒಂದು ತರಬೇತಿಗೆ ಅರ್ಜಿಸಲ್ಲಿಸಬೇಕು. ಮಹಿಳಾ ಅಭ್ಯರ್ಥ್ಥಿಗಳಿಗೆ ಅವಕಾಶ ಇದೆ. ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಕನಿಷ್ಠ 8ನೇ ತರಗತಿ ಪಾಸಾಗಿರಬೇಕು ಎಂದು ಹಾಸನ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ನಂದಿ ಸಿಹಿ ಉತ್ಸವ ಇಂದು
ಹಾಸನ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಜೂ. 2 ರಂದು ನಂದಿನಿ ವಿಶೇಷ ಹಾಲು ಬಿಡುಗಡೆ ಸಮಾರಂಭ ಹಾಗೂ ನಂದಿನಿ ಸಿಹಿ ಉತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಮಧ್ಯಾಹ್ನ 1 ಕ್ಕೆ ನಗರದ ಎಚ್ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹಾಸನ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಬಾಬು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

