ಹಾಸನ

ಮನೆಗೆ ಕನ್ನ: 2.5 ಲಕ್ಷ ನಗದು, 120 ಗ್ರಾಂ ಚಿನ್ನ ಕಳವು

Published On :

ಚನ್ನರಾಯಪಟ್ಟಣ: ಪಟ್ಟಣದ ವಳಗೆರಮ್ಮ ಬೀದಿಯಲ್ಲಿ ಕಳ್ಳರ ತಂಡವೊಂದು ಮನೆಯೊಂದರ ಸಿಮೆಂಟ್ ಶೀಟ್‌ಗಳನ್ನು ತೆಗೆದು ಹಣ ಹಾಗೂ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ವಳಗೆರಮ್ಮ ಬೀದಿಯ ಮಕ್ತಿಯಾರ್ ಪಾಶ ಅವರ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರ ತಂಡ ಮನೆಯ ಮೇಲಿನ ಸಿಮೆಂಟ್ ಶೀಟ್‌ಗಳನ್ನು ತೆಗೆದು ಮನೆಯೊಳಗಿದ್ದ ಕಪಾಟಿನಲ್ಲಿದ್ದ 2.5 ಲಕ್ಷ ಹಣ ಹಾಗೂ 120 ಗ್ರಾಂ ಚಿನ್ನ ದೋಚಿದ್ದಾರೆ.  ಹಾಸನದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಸರ್ಕಲ್ ಇನ್‌ಸ್ಪೆಕ್ಟರ್ ಶೈಲೇಂದ್ರ ಹಾಗೂ ಸಬ್‌ಇನ್‌ಸ್ಪೆಕ್ಟರ್ ರಾಜನಾಯಕ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಪಟ್ಟಣ ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಪಘಾತ: ಬೆಂಗಳೂರಿನ ಐವರಿಗೆ ಗಾಯ
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಧರ್ಮಸ್ಥಳಕ್ಕೆ ಹೋರಟಿದ್ದ ಬೆಂಗಳೂರಿನ ಐವರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಮಾರನಹಳ್ಳಿ ಗ್ರಾಮದ ಸಮೀಪ ಟೆಂಪೋ ಟ್ರಾವೆಲ್ಸ್ ಉರುಳಿ ಬಿದ್ದು,  ಬೆಂಗಳೂರಿನ ಆರ್.ಟಿ ನಗರ ನಿವಾಸಿಗಳಾದ ಹರಿಕೃಷ್ಣದಾಸ್, ಲಕ್ಷ್ಮಿದಾಸ್, ಮಂಜುದಾಸ್ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ರಾಟೇಮನೆ ತಿರುವು ರಸ್ತೆಯಲ್ಲಿ ಸಾರಿಗೆ ಬಸ್ ಹಾಗೂ ಆಲ್ಟೊ ಕಾರ್ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಗಳೂರಿನ ಹಮ್ಮಸಂದ್ರದ ದಂಪತಿ ಲಕ್ಷ್ಮಿ ಹಾಗೂ ರವೀಂದ್ರ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆ  ಪ್ರಕರಣ:  ಮೂವರ ಬಂಧನ
ಸಕಲೇಶಪುರ: ಹೋಟೆಲ್ ಉದ್ಯಮಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಗುಂಪಿನಲ್ಲಿದ್ದ ಮೂವರನ್ನು ಬಂಧಿಸುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದಾರೆ.
ಬೇಲೂರು ತಾಲೂಕಿನ ಅಡವನಹಳ್ಳಿ ಗ್ರಾಮದ ಮಹೇಶ್, ಸೋಮನಹಳ್ಳಿ  ಗ್ರಾಮದ ಕಾರ್ತಿಕ್ ಹಾಗೂ ಮೂಡಿಗೆರೆ ತಾಲೂಕು ಗಬ್ಬಹಳ್ಳಿ ಗ್ರಾಮದ ಜಯರಾಂ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಪಟ್ಟಣದ ಲಕ್ಷ್ಮಿಪುರಂ ಬಡಾವಣೆಯಲ್ಲಿರುವ ಹೋಟೆಲ್ ಉದ್ಯಮಿ ಸಂಜೀತ್‌ಶೆಟ್ಟಿಯ ಮನೆಗೆ ನುಗ್ಗಿದ ಸುಮಾರು 30 ಜನರಿದ್ದ ಗುಂಪು ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿತ್ತು ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜೂಜಾಟ :  22 ಜನರ ಬಂಧನ
ಹಾಸನ:  ಅಂದಾರ್ ಬಾಹರ್ ಜೂಜಾಡುತ್ತಿದ್ದ 22 ಜನರನ್ನು ಬಂಧಿಸಿ, 62,405 ರು.ಗಳನ್ನು ವಶಪಡಿಸಿಕೊಂಡಿರುವ ಘಟನೆ ಭಾನುವಾರ ನಡೆದಿದೆ. ಅರಸೀಕೆರೆ ಗ್ರಾಮಾಂತರ ಠಾಣೆ ವ್ಯಾಪ್ತಿ ಮಾಲೆಕಲ್ ತಿರುಪತಿ ಗ್ರಾಮದಲ್ಲಿ ಇರುವ ದೇವಾಂಗ ಸಮುದಾಯ ಭವನದ ಪಕ್ಕದ ಖಾಲಿ ಜಾಗದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಪಿಎಸ್‌ಐ ಎಸ್.ಪಿ. ಸುನಿಲ್  ಸಿಬ್ಬಂದಿಯೆಂದಿಗೆ ದಾಳಿ ನಡೆಸಿ ಬಂಧಿಸಿದ್ದು, ಪಣಕ್ಕಿಟ್ಟಿದ್ದ 62,405 ರು. ನಗದನ್ನು ವಶಪಡಿಸಿಕೊಂಡಿದ್ದಾರೆ.  ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.