ಹಾಸನ

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ವ್ಯಾನ್ ಬೆಂಕಿ

Published On :

ಹೊಳೆನರಸೀಪುರ: ಕಳೆದ ಮೂರು ದಿನಗಳ ಹಿಂದಷ್ಟೇ ಪಟ್ಟಣದಲ್ಲಿ ಮಾರುತಿ ವ್ಯಾನೊಂದಕ್ಕೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ಬೆಂಕಿ ತಗುಲಿ ವ್ಯಾನು ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ನಡೆದಿದ್ದರೂ ಇದುವರೆವಿಗೂ ನಗರಠಾಣೆ ಪೊಲೀಸರಾಗಲಿ, ತಾಲೂಕು ಆಡಳಿತವಾಗಲಿ ಯಾವುದೇ ದೂರು ದಾಖಲಿಸಿಕೊಳ್ಳದೇ ಮತ್ತು ಕ್ರಮ ಕೈಗೊಳ್ಳದೇ ಇರುವುದು ಬೆಳಕಿಗೆ ಬಂದಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಆಕ್ರಮವಾಗಿ ಕೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ವಾಹನಗಳಿಗೆ ರೀಫಿಲ್ಲಿಂಗ್ ಮಾಡುವ ದಂಧೆ ನಿರಾತಂಕವಾಗಿ ನಡೆಯುತ್ತ ಬಂದಿದೆ.  ಇದರ ಜತೆಗೆ ಕೆಲವರು ಈ ಅಡುಗೆ ಅನಿಲವನ್ನೇ ಗ್ಯಾಸ್‌ಲೈಟ್‌ಗಳಿಗೆ ತುಂಬುದ ದಂಧೆ ಕೂಡ ಬಹಳ ವರ್ಷದಿಂದಿದೆ. ಹಾಗೆಯೇ ಹಲವು ಅವಗಢಗಳೂ ಸಂಭವಿಸಿವೆ.
ಆದರೆ, ಜೂ.1ರ ಭಾನುವಾರ ಪಟ್ಟಣದ ಕಂಚುಗಾರರ ಬೀದಿಯಲ್ಲಿ ಬಿರು ಬಿಸಿಲಿನ ವೇಳೆ ಮಾರುತಿ ವ್ಯಾನೊಂದಕ್ಕೆ ಗ್ಯಾಸ್ ರೀಫಿಂಗ್‌ಮಾಡುವ ವೇಳೆ ಅಚಾನಕ್ ಆಗಿ ಆದ ಅವಘಡದಿಂದ ಬೆಂಕಿ ಹೊತ್ತಿಕೊಂಡು ವ್ಯಾನ್ ಸಂಪೂರ್ಣ ಬೆಂಕಿಗೆ ಅಹುತಿಯಾಗಿತ್ತು. ಈ ಘಟನೆಯಲ್ಲಿ ಸಿಲೆಂಡರ್ ಸಿಡಿಯದೇ ಹೆಚ್ಚಿನ ಅನಾವುದ ತಪ್ಪಿತು.  ಆದರೆ, ಅಕ್ರಮವಾಗಿ ಗ್ಯಾಸ್ ತುಂಬುತ್ತಿರುವ ವ್ಯಕ್ತಿ ಯಾರೆಂಬುದನ್ನು ಇಲ್ಲಿನ ಪೊಲೀಸರು ಕಂಡು ಹಿಡಿಯುವ ಕನಿಷ್ಠ ಪ್ರಯತ್ನ ಸಹ ಮಾಡದಿರುವ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರದ ಘಟನೆಯಲ್ಲಿ ಅಕಸ್ಮಾತಾಗಿ ಹಾನಿ ಆಗಿದ್ದರೆ ಆಗಲೂ ಕೂಡ ಪೊಲೀಸ್ ಇಲಾಖೆ ಕೈಕಟ್ಟಿ ಕೂರುತ್ತಿತ್ತೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಾರ್ವಜನಿಕರ ಆಕ್ಷೇಪದ ಬಗ್ಗೆ ನಗರಠಾಣಾ ಪಿಎಸ್‌ಐ ಶಿವಕುಮಾರ್, ಈ ಘಟನೆ ನಡೆದಿರುವುದು ನಿಜ ಆದರೆ ವಾಹನದ ಮಾಲೀಕರಾಗಲಿ ಸಾರ್ವಜನಿಕರಾಗಲಿ ಇಲ್ಲಿಯವರೆಗೆ ದೂರು ನೀಡಿಲ್ಲ. ಭಾನುವಾರದ ಘಟನೆಯಿಂದ ಅಕಸ್ಮಾತ್ ವ್ಯಾನಿನಲ್ಲಿದ್ದ ಸಿಲೆಂಡರ್ ಸ್ಫೋಟಿಸಿದ್ದರೆ ಸುತ್ತಮುತ್ತಲಿನ ಹತ್ತಾರು ಮನೆಗಳಿಗೆ ತೀವ್ರತರ ಹಾನಿ ಸಂಭವಿಸುತ್ತಿತ್ತು ಎಂದರು.
ಪೊಲೀಸರ ಈ ನಿರ್ಲಕ್ಷ್ಯದ ಕ್ರಮದಿಂದಾಗಿ ಪಟ್ಟಣದಲ್ಲಿನ ಗ್ಯಾಸ್ ರೀಫಿಲ್ಲಿಂಗ್ ದಂಧೆಕೋರರು ನಿರ್ಭಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಎನಿಸಿರುವ ಎಎಸ್ಪಿ ರವಿ ಡಿ. ಚನ್ನಣ್ಣನವರ್ ಅವರಾದರೂ ಇಂತಹ ಅವಘಢಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಲ್ಲಿ ಮುಂದೆ ಈ ರೀತಿ ನಡೆಯುವುದನ್ನು ತಪ್ಪಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.