ಸಮುದಾಯದ ಸಹಾಭಾಗಿತ್ವದಲ್ಲಿ ನೆಲ-ಜಲ ಸಂರಕ್ಷಣೆ
ಅರಸೀಕೆರೆ: ಸಮುದಾಯದ ಸಹಾಭಾಗಿತ್ವದಲ್ಲಿ ನೆಲ-ಜಲ ಸಂರಕ್ಷಣೆ, ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಬಾರ್ಡ್) 1999-2000ನೇ ಸಾಲಿನಲ್ಲಿ ಬ್ಯಾಂಕಿನ ಲಾಭಂಶದಲ್ಲಿ 200 ಕೋಟಿ ರು. ಸರ್ಕಾರೇತರ ಸಂಸ್ಥೆಗಳ ಮೂಲಕ ಜಲಾನಯನ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನಬಾರ್ಡ್ನ ಡಿ.ಜಿ.ಎಂ. ಟಿ. ರಮೇಶ್ ತಿಳಿಸಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಸಂಪನ್ನೂಲ ಅಭಿವೃದ್ಧಿ ಮತ್ತು ಪರಿಸರ ಪುನಃಶ್ಚೇತನ ಸಂಸ್ಥೆ (ಆರ್ಡರ್) ವತಿಯಿಂದ ತಾಲೂಕಿನ ಗಂಡಸಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಲಾನಯನ ಅಭಿವೃದ್ಧಿ ಯೋಜನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ 15 ರಾಜ್ಯಗಳಲ್ಲಿ 200 ಕೋಟಿ ರು. ನಿಂದ ಪ್ರಾರಂಭವಾದ ಈ ಯೋಜನೆ ಇಂದು ಹದಿನೇಳು ಸಾವಿರ ಕೋಟಿ ರು.ಗೆ ತಲುಪಿದೆ. ಕರ್ನಾಟಕದ 14 ಜಿಲ್ಲೆಗಳಲ್ಲಿ 115 ಸರ್ಕಾರೇತರ ಸಂಸ್ಥೆಗಳ ಮೂಲಕ ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಹಾಸನ ಜಿಲ್ಲೆಯ ಮೂರು ಜಲಾನಯನ ಕಾರ್ಯಕ್ರಮಗಳು ಸೇರಿದಂತೆ ಒಟ್ಟು 80 ಜಲಾನಯನ ಕಾರ್ಯಕ್ರಗಳು ಸಂಪೂರ್ಣಗೊಂಡಿವೆ ಎಂದರು.
ಜಿಲ್ಲೆಯಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮದಲ್ಲಿ 2.5 ಕೋಟಿ ರು.ಗಳಲ್ಲಿ 105 ಹೆಕ್ಟೇರ್ ಪ್ರದೇಶವನ್ನು ಅಭಿವೃದ್ದಿಪಡಿಸಲಾಗಿದೆ. ಅರ್ಡರ್ ಸಂಸ್ಥೆಯ ಮೂಲಕ ಗ್ರಾಮಸ್ಥರ ಸಂಪೂರ್ಣ ಸಹಕಾರದೊಂದಿಗೆ ಜಲಾನಯನ ಸಮಿತಿಗಳನ್ನು ರಚಿಸಿ ಜನರೇ ತೆಗೆದುಕೊಂಡ ನಿರ್ಧಾರದಂತೆ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡಲಾಗಿದೆ. ಇದೊಂದು ಪ್ರಮುಖ ಕಾರ್ಯಕ್ರಮವಾಗಿದ್ದು, ಪಾರದರ್ಶಕವಾಗಿ ಕೆಲಸ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಹುಚ್ಚೆಗೌಡ ಮಾತನಾಡಿ, ರೈತ ವ್ಯವಸಾಯದಲ್ಲಿ ಕಡಿಮೆ ಖರ್ಚಿನಲ್ಲಿ ಬದಲಾವಣೆ ಮಾಡಿಕೊಂಡು ಸರ್ಕಾರದ ಸವಲತ್ತುಗಳನ್ನು ಫಲಪ್ರದವಾಗಿ ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ ಈ ನಿಟ್ಟಿನಲ್ಲಿ ರೈತ ಸಮುದಾಯ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಬೆಂಗಳೂರಿನ ನಬಾರ್ಡ್ನ ಎ.ಜಿ.ಎಂ. ಜ್ಯೋತಿಶ್ ಜಗನ್ನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ,
ತಾಲೂಕು ಪಂಚಾಯಿತಿ ಸದಸ್ಯ ಮಾನಸ ಜಗದೀಶ್, ಕಲ್ಪತರು ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಬಿ.ಜಿ.ಪ್ರಭು, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಇತರರು ಭಾಗವಹಿಸಿದ್ದರು.
ಹಾಸನ ಜಿಲ್ಲೆಯಲ್ಲಿ 22 ಯೋಜನೆಗಳಲ್ಲಿ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯಲ್ಲಿ 5 ಕಿರು ಜಲಾನಯನಗಳಾದ ಜೋಬಿಗೆನಹಳ್ಳಿ, ಚಿಕ್ಕಗಂಡಸಿ, ಜಿ.ಮಂಗಳಾಪುರ, ಗಂಡಸಿ ಮತ್ತು ಜಕ್ಕನಹಳ್ಳಿ ಜಲಾನಯನ ಕಾರ್ಯಕ್ರಮಗಳಲ್ಲಿ 23 ಗ್ರಾಮದ 2300 ಕುಟುಂಬಗಳು ಪ್ರಯೋಜನ ಪಡೆದಿವೆ. ಹಾಸನ ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಹಾಸನ ತಾಲೂಕುಗಳಲ್ಲಿ ಸುಮಾರು 30,084 ಹೆಕ್ಟೇರ್ ಪ್ರದೇಶದಲ್ಲಿ 2008-09 ರಿಂದ ಜಲಾನಯನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ 7 ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 4 ಯೋಜನೆಗಳ ಅನುಷ್ಠಾನ ಕಾರ್ಯ ಪೂರ್ಣಗೊಂಡಿದ್ದು, ಉಳಿದವು ಮುಕ್ತಾಯದ ಹಂತದಲ್ಲಿವೆ.
ಕೆ.ಎಸ್.ಮಂಗಳಾ, ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ಪ್ರಬಂಧಕಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

