ಹಾಸನ

ಬೀಜ, ರಸಗೊಬ್ಬರ, ಕೀಟನಾಶಕದ ಬಿಲ್ ಕಡ್ಡಾಯ

Published On :

ಹಾಸನ:  ಸಾಲಗಾಮೆ ಗ್ರಾಮದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಗ್ರಾಮ ಪಂಚಾಯ್ತಿ  ಅಧ್ಯಕ್ಷರೆ ಸುಮ ಧರಣೇಶ್ ಅವರ ಅಧ್ಯಕ್ಷತೆಯಲ್ಲಿ  ಹೋಬಳಿ ಮಟ್ಟದ ಭೂ ಚೇತನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.   ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯ್ತಿ ಸದಸ್ಯ ಯು.ಕೆ. ಶಿವನಂಜಪ್ಪ ನೆರವೇರಿಸಿದರು. ಕಾರ್ಯಾಗಾರದಲ್ಲಿ ಹಾಸನ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಕೋಕಿಲ ಮಾತನಾಡಿ,  ಹಾಲಿ ಮುಂಗಾರು ಹಂಗಾಮಿನಲ್ಲಿ ಜೂನ್ ಮಾಹೆಯಲ್ಲಿ 262 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ಈವರೆಗೆ 240 ಮಿ.ಮೀ. ಮಳೆಯಾಗಿ ಉತ್ತಮ ಮುಂಗಾರು ಪ್ರಾರಂಭವಾಗಿರುವುದನ್ನು ತಿಳಿಸಿದರು.
ಶೇ. 50 ಸಹಾಯ ಧನ: ಭೂಚೇತನ ಯೋಜನೆಯಡಿಯಲ್ಲಿ ಶೇಕಡ 50ರ ಸಹಾಯಧನದಲ್ಲಿ ಲಘು ಪೋಷಕಾಂಶಗಳಾದ ಸತುವಿನ ಸಲ್ಫೇಟ್, ಬೋರಾಕ್ ಹಾಗೂ ಮಣ್ಣು ಸುಧಾರಕ ಜಿಪ್ಸಂ ಅನ್ನು ರೈತ ಸಂಪರ್ಕ ಕೇಂದ್ರದ ಮೂಲಕ ವಿತರಿಸಲಾಗುತ್ತಿದೆಯೆಂದು ತಿಳಿಸಿದರು. ರೈತರು ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಸಸ್ಯ ಸಂರಕ್ಷಣಾ ಔಷಧ  ಖರೀದಿಸುವಲ್ಲಿ ಕಡ್ಡಾಯವಾಗಿ ಬಿಲ್ ಪಡೆಯಲು ತಿಳಿಸಿದರು.
 ಕೃಷಿ ಕಾಲೇಜು, ಕಾರೆಕೆರೆಯ ಬೆಳೆ ಶರೀರ ಕ್ರಿಯಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಥಾಂ ಭಟ್ ಮಾತನಾಡಿ, ಮಣ್ಣು ಪರೀಕ್ಷೆ ಆಧಾರಿತ ಸಮತೋಲನ ರಸಗೊಬ್ಬರ ಬಳಕೆ, ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸಲು ಸಾವಯವ ಗೊಬ್ಬರ ಬಳಕೆ, ಹಸಿರೆಲೆ ಗೊಬ್ಬರ ಬಳಕೆ, ಜೈವಿಕ ಗೊಬ್ಬರಗಳ ಬಳಕೆ ಹಾಗೂ ಲಘುಪೋಷಕಾಂಶಗಳನ್ನು ಬಳಸಲು ತಿಳಿಸಿದರು.  
ಮುಂಜಾಗೃತಾ ಕ್ರಮ: ಕೃಷಿ ಕಾಲೇಜು, ಕಾರೆಕೆರೆಯ ಸಸ್ಯ ರೋಗ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್. ನಾಗರಾಜು ಅವರು ಎಲ್ಲಾ ಬೆಳೆಗಳಲ್ಲೂ ಶೇ. 90 ರಷ್ಟು ರೈತರು ಬೀಜೋಪಚಾರ ಮಾಡದೆ ಬಿತ್ತನೆ ಮಾಡುತ್ತಿರುವುದರಿಂದ ರೋಗಗಳ ಬಾಧೆ ಹೆಚ್ಚಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬ ರೈತರು ಬೀಜೋಪಚಾರ ಮಾಡಬೇಕೆಂದು ತಿಳಿಸಿದರು.
 ಕಾರ್ಯಾಗಾರದಲ್ಲಿ ಯಲಗುಂದ ಗ್ರಾಮ ಪಂಚಾಯ್ತಿ  ಅಧ್ಯಕ್ಷರಾದ ವಿಶಾಲ ಹಾಗೂ ಸಾಲಗಾಮೆ ಗ್ರಾಮ ಪಂಚಾಯ್ತಿ ಸದಸ್ಯರಾದ  ಶಿವಲಿಂಗ ಇದ್ದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕಿ  ಲತಾ, ಸಹಾಯಕ ಕೃಷಿ ಅಧಿಕಾರಿ ರಾಜಶೇಖರಪ್ಪ, ರೈತ ಅನುವುಗಾರರು ಸಾಲಗಾಮೆ ಹೋಬಳಿಯ ರೈತ, ರೈತ ಮಹಿಳೆಯರು ಭಾಗವಹಿಸಿದ್ದರು.  ಕೃಷಿ ಅಧಿಕಾರಿ ಕೆ.ಹೆಚ್. ರಮೇಶ್‌ಕುಮಾರ್ ಸ್ವಾಗತಿಸಿದರು. ಸಾಲಗಾಮೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಿರಣ್ ಕುಮಾರ್‌ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  

ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ವಶ
ಸಕಲೇಶಪುರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಮೂವರ ಮೇಲೆ ದೂರು ದಾಖಲಿಸಿಕೊಂಡಿರುವ ಘಟನೆ ಬುಧವಾರ ತಾಲೂಕಿನ ವಡೂರು ಗ್ರಾಮ ಸಮೀಪ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ಕೆ ಹೊಸಕೋಟೆ ಗ್ರಾಮದ ಲಾರಿ ಚಾಲಕ ಶರತ್ ಆಲೂರು ತಾಲೂಕು ಹುಣುಸುವಳ್ಳಿ ಗ್ರಾಮದ ಲಾರಿ ಮಾಲೀಕ ಎಚ್.ಪಿ. ಸುರೇಶ ಮತ್ತು ಲಾರಿಗೆ ಮರಳನ್ನು ತುಂಬಿಸಿಕೊಡಲು ಸಹಕರಿಸಿದ ವಡೂರು ಗ್ರಾಮದ ಗಣೇಶ  ಮೇಲೆ ದೂರು ದಾಖಲಿಸಲಾಗಿದೆ ಆರೋಪಿಗಳು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಪಿಎಸ್‌ಐ ಭರತ್ ಗೌಡ ಸಿಬ್ಬಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.