ಕಸದ ಬೆಟ್ಟ ಕರಗಿಸುವ ಕಾಲ ಸನ್ನಿಹಿತ
-ಪಿ.ರವಿಕುಮಾರ್
ಹಾಸನ: ದಶಕಗಳಿಂದ ನಗರದ ಸಂತೆಪೇಟೆ ಬಳಿ ಬೆಟ್ಟದಷ್ಟು ಬೆಳೆದಿರುವ ಕಸದ ರಾಶಿಯನ್ನು ಕರಿಗಿಸುವ ಕಾಲ ಹತ್ತಿರವಾಗಿದ್ದು, ತ್ಯಾಜ್ಯ ವಿಂಗಡಣೆ ಕಾರ್ಯ ಒಂದು ವಾರದೊಳಗೆ ಪ್ರಾರಂಭವಾಗಲಿದೆ. ನಗರದ ನಗರಸಭೆಯ ಹಿಂದೆ ಕಸದ ಗುಡ್ಡವೇ ನಿರ್ಮಾಣವಾಗಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಈ ಭಾಗದ ಜನರು ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಈಗಿನ ಯೋಜನೆ ಜಾರಿಯಾದರೆ ಲ್ಲಿಯ ನಿವಾಸಿಗಳು ಕೊಂಚ ನಿರಾಳದಿಂದ ಇರಬಹುದಾಗಿದೆ.
ಹಲವಾರು ಬಾರಿ ಪ್ರತಿಭಟನೆ
ಕಸದ ರಾಸಿ ಬೆಳೆದು ನಿಂತಿದ್ದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಇಲ್ಲಿನ ನಿವಾಸಿಗಳು, ನಾನಾ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದವು. ಅದರ ಜತೆಗೆ ನಗರದಲ್ಲಿ ಪ್ರತಿನಿತ್ಯ 60-65 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಕಸದ ರಾಶಿ ನಿತ್ಯ ಬೆಳೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಸಾಲುಸಾಲು ಪ್ರತಿಭಟನೆಗಳು ಕೂಡ ನಡೆದಿದ್ದು, ಆದರೂ ಎರಡು ದಶಕಗಳಿಂದ ಕಸದ ರಾಶಿ ಬೆಳೆಯುತ್ತಲೇ ಇದೆ. ಅಷ್ಟೇ ಅಲ್ಲದೆ ಇದನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ನಗರಸಭೆಗೆ ತಲೆನೋವಾಗಿ ಕಾಡುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಂಡಿರುವ ನಗರಸಭೆಯು ಮೈಸೂರಿನ ಮಾದರಿಯಲ್ಲಿ ಕಸ ವಿಂಗಡಣೆ ಮಾಡಿ ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ನೀಡಲು ನಿರ್ದರಿಸಿದೆ. ಅದಕ್ಕೆ ಬೇಕಾಗಿರುವ ಕಸ ವಿಂಗಡಣೆ ಯಂತ್ರವನ್ನು ನಗರಸಭೆ ಖರೀದಿ ಮಾಡಿದೆ. ಕೆಲಸ ವಿಂಗಡಣೆ ಕೆಲಸ ನಿರ್ವಹಿಸಲು ಟೆಂಡರ್ ಮೂಲಕ ರು. 1.67 ಕೋಟಿಗೆ ಹೊರ ಗುತ್ತಿಗೆ ನೀಡಲಾಗಿದೆ.
ಶೂನ್ಯ ತ್ಯಾಜ್ಯ ಘಟಕ
ಸಂತೆಪೇಟೆ ಬಳಿ ಇರುವ ಕಸದ ರಾಶಿ ಕರಗಿಸಿದ ನಂತರ ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡದಿರಲು ನಗರಸಭೆ ತೀರ್ಮಾನಿಸಿದ್ದು, ಪ್ರತ್ಯೇಕ ಮೂರು ಶೂನ್ಯ ತ್ಯಾಜ್ಯ ವಿಲೇವಾರಿ ಘಟನೆ ನಿರ್ಮಿಸಿದೆ. ಗೊರೂರು ರಸ್ತೆಯಲ್ಲಿರುವ ಮೂರು ಘಟಕದ ಸಹಾಯದಿಂದ ತ್ಯಾಜ್ಯ ಕರಗಿಸುವ ಮೂಲಕ ಕಸದ ರಾಶಿ ಬೀಳದಂತೆ ಎಚ್ಚರ ವಹಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು. ಒಟ್ಟಾರೆಯಾಗಿ ಹಲವು ದಶಕಗಳಿಂದ ಸಮಸ್ಯೆಯಾಗಿ ಪರಿಣಮಿಸಿದ್ದ ಸಂತೆಪೇಟೆ ಬಳಿ ಇರುವ ಕಸದ ಗುಡ್ಡಕ್ಕೆ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗುತ್ತಿದೆ.
ಕಸ ವಿಂಗಡಣೆ
ನಗರಸಭೆ ಖರೀದಿಸಿರುವ ಕಸ ವಿಂಗಡಣೆ ಯಂತ್ರಗಳನ್ನು ಈಗಾಗಲೇ ಕಸದ ರಾಶಿಯ ಬಳಿಗೆ ಸಾಗಿಸಲಾಗಿದೆ. ಆ ಯಂತ್ರಗಳು ಕಸದಲ್ಲಿ ಇರುವ ಕಲ್ಲು, ಕಡ್ಡಿ, ಪ್ಲಾಸ್ಟಿಕ್, ಗಾಜು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಬೇರ್ಪಡಿಸಸಿ ಕಸ ಮಾತ್ರ ಉಳಿಯಲಿದೆ. ಈ ಕಸಕ್ಕೆ ಜೈವಿಕ ಕ್ರಿಯೆ ಬಿರುಸುಗೊಳ್ಳುವ ರಾಸಾಯನಿಕ ಸಿಂಪಡಿಸಿ ಗೊಬ್ಬರದ ರೂಪ ನೀಡಲಾಗುವುದು. ತ್ಯಾಜ್ಯ ವಿಂಗಡಣೆ ಕಾರ್ಯ ಇನ್ನೊಂದು ತಿಂಗಳಲ್ಲಿ ಆರಂಭವಾಗಿ ತ್ಯಾಜ್ಯ ವಿಂಗಡಣೆ ಕೆಲಸ ಪೂರ್ಣಗೊಳ್ಳಲು ಒಂದು ವರ್ಷ ಕಾಲವಾಧಿ ಬೇಕು ಎಂಬುದು ನಗರಸಭೆ ಅಧಿಕಾರಿಗಳ ಅಭಿಪ್ರಾಯ.
ಹಲವು ವರ್ಷಗಳಿಂದ ಈ ಕಸದ ದುರ್ವಾಸನೆಯಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ. ಮತ್ತೆ ಇಲ್ಲಿ ಕಸವನ್ನು ತಂದು ಹಾಕದಿದ್ದರೆ ಸಾಕು. ಆದಷ್ಟು ಬೇಗ ಆಧಿಕಾರಿಗಳು ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಪ್ರಾರಂಭಿಸಿ ಈ ಕಸದಿಂದ ಜೀವನವನ್ನು ಮುಕ್ತಿಗೊಳಿಸಬೇಕು.
-ಮೋಹನ್, ನಿವಾಸಿ
ಇಷ್ಟು ವರ್ಷದಿಂದ ನಾವು ಕಸದ ರಾಶಿಯ ನಡುವೆಯೇ ಜೀವನ ನಡೆಸಿಕೊಂಡು ಬಂದಿದ್ದೇವೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಈಗಲಾದರೂ ಕಸದ ರಾಶಿಗೆ ಮುಕ್ತಿಯನ್ನು ನೀಡಲು ಹೊರಟಿರುವುದರಿಂದ ಕೊಂಚ ನೆಮ್ಮದಿಯಾಗಿದೆ.
-ಮಂಗಳಮ್ಮ, ಶ್ರೀನಗರ ನಿವಾಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

