ಹಾಸನ

ವಿಶ್ವ ಪರಂಪರೆ ಪಟ್ಟಿಗೆ ಶ್ರವಣಬೆಳಗೊಳ

ವಿಶ್ವ ಪರಂಪರೆ ಪಟ್ಟಿಗೆ ಶ್ರವಣಬೆಳಗೊಳ
Published On :

ಚನ್ನರಾಯಪಟ್ಟಣ: ಶ್ರವಣಬೆಳಗೊಳ ಕ್ಷೇತ್ರವು 2500 ವರ್ಷಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸವನ್ನು ಹೊಂದಿರುವ ಹಿನ್ನಲೆಯಲ್ಲಿ ಕ್ಷೇತ್ರವನ್ನು ವಿಶ್ವ ಪರಂಪರೆ  ಪಟ್ಟಿಗೆ ಸೇರಿಸುವಂತೆ ಶಿಪಾರಸ್ಸು ಮಾಡಲಾಗಿದೆ ಎಂದು ಬೆಂಗಳೂರಿನ ಭಾರತೀಯ ಪುರಾತತ್ವವ ಇಲಾಖೆ ಅಧೀಕ್ಷಕ  ಟಿ.ಎಂ ಕೇಶವ್ ತಿಳಿಸಿದರು.
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಚಿಕ್ಕಬೆಟ್ಟ ಚಂದ್ರಗಿರಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಶ್ರವಣಬೆಳಗೊಳ ಕ್ಷೇತ್ರ 2500 ವರ್ಷಗಳ ಇತಿಹಾಸ ಹೊಂದಿರುವುದರ ಜತೆಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ನೆಲಗಟ್ಟನ್ನು ಉಳಿಸಿಕೊಂಡು ಬರುತ್ತಿರುವುದನ್ನು ಪರಿಗಣಿಸಿ ಕ್ಷೇತ್ರವನ್ನು ವಿಶ್ವಪರಂಪರಾ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ವರದಿ: ಶ್ರವಣಬೆಳಗೊಳ ಕ್ಷೇತ್ರದಲ್ಲಿ 2500 ವರ್ಷಗಳಿಂದಲೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಬರುತ್ತಿರುವ ಬಗ್ಗೆ ಹಲವು ದಾಖಲೆಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ಯುನೆಸ್ಕೊ ಕೇಳುವ ದಾಖಲೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.  ಶ್ರವಣಬೆಳಗೊಳದ ಜೊತೆ ಜಿಲ್ಲೆಯ ಶಿಲ್ಪಕಲೆಗಳ ತವರು ಬೇಲೂರು ಮತ್ತು ಹಳೇಬೀಡನ್ನೂ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಚಿಕ್ಕಬೆಟ್ಟ ರಕ್ಷಣೆ: ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿ ಸಾವಿರಾರು ವರ್ಷದ ಕಲೆ, ಜಿನಾಲಯಗಳು ಹಾಗೂ ಶಾಸನಗಳಿದ್ದು, ಅವುಗಳ ರಕ್ಷಣೆ ಮತ್ತು ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತಿಹಾಸ ಪೂರ್ವ ಬಸದಿಗಳು ಮಳೆಯಿಂದ ಸೋರುತ್ತಿವೆ. ಮಳೆಗಾಲದ ನಂತರ ಬಸದಿಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಇನ್ನೂ ಕೆಲವು ಶಾಸನಗಳು ಮಳೆ ಮತ್ತು ಬಿಸಿಲಿನ ತಾಪಕ್ಕೆ ಹಾಳಾಗುತ್ತಿರುವ ಬಗ್ಗೆ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ತಮ್ಮ ಗಮನಕ್ಕೆ ತಂದಿದ್ದು, ಪ್ರಸಕ್ತ ಸಾಲಿನಲ್ಲಿ ಅವುಗಳ ರಕ್ಷಣೆಗೆ ಮುಂದಾಗುವುದಾಗಿ ಭರವಸೆ ನೀಡಿದರು.
ಏಣಿ ವ್ಯವಸ್ಥೆ: ವರ್ಷಕ್ಕೊಮ್ಮೆ ನಡೆಯುವ ಚಿಕ್ಕಬೆಟ್ಟದಲ್ಲಿನ ಮಾನಸ್ತಂಭಕ್ಕೆ ಅಭಿಷೇಕ ನಡೆಯುತ್ತಿದ್ದು, ಇತಿಹಾಸ ಪ್ರಸಿದ್ದ ಎತ್ತರದ ಮಾನಸ್ತಂಭಕ್ಕೆ ಸುರಕ್ಷಿತವಾಗಿ  ಹತ್ತಲು ಅಟ್ಟಣಿಗೆ ಅಥವಾ ಏಣಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಸೌರ ವಿದ್ಯುತ್ ದೀಪ: ಚಂದ್ರಗಿರಿಯಲ್ಲಿನ ಸ್ಮಾರಕಗಳನ್ನು ಕಾಪಾಡುವುದು ನಮ್ಮ ಕರ್ತವ್ಯ. ಚಂದ್ರಗಿರಿಯಲ್ಲಿನ ಎಲ್ಲ ಸ್ಮಾರಕಗಳೂ ಹಳೆಯ ಕಾಂಪೌಂಡ್ ವ್ಯಾಪ್ತಿಯಲ್ಲಿವೆ. ಅದಕ್ಕೆ ಹೊಂದಿಕೊಂಡಂತೆ ಮತ್ತೊಂದು ಕಾಂಪೌಂಡ್ ಹಾಗೂ ರಾತ್ರಿ ಸಂದರ್ಭದಲ್ಲಿ ಕಾವಲುಗಾರರಿಗೆ ಅನುಕೂಲವಾಗಲು ಕಾವಲು ಮನೆ ಮತ್ತು ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲು ಚಿಂತನೆ ನಡೆದಿದೆ ಎಂದರು. ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಆಚಾರ್ಯ 108 ಸಚ್ಚಿದಾನಂದಿ ಮಹಾರಾಜರು, 105 ಆರ್ಯಿಕಾ ಶಿವಮತಿ ಮಾತಾಜಿ, ಡಿ.ಆರ್. ಶಹಾ, ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡೇಗೌಡ, ರಾಘವೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಉಪಸ್ಥಿತರಿದ್ದರು.

ಕ್ಷೇತ್ರಕ್ಕೆ ಆಧುನಿಕ ಸೌಲಭ್ಯ ಕಲ್ಪಿಸಲು ಮನವಿ
ಚನ್ನರಾಯಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ದ ಶ್ರವಣಬೆಳಗೊಳದ ಎಸ್‌ಡಿಜೆಎಂಐ ಸಮಿತಿ ಹಾಗೂ ಚಿಕ್ಕಬೆಟ್ಟ ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ ಚಿಕ್ಕಬೆಟ್ಟ ಚಂದ್ರಗಿರಿ ಮಹೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ರಾಜ್ಯ ದಿಗಂಬರ ಜೈನ ತೀರ್ಥಕ್ಷೇತ್ರಗಳ ಸಮಿತಿ ಅಧ್ಯಕ್ಷ ಡಿ.ಆರ್. ಶಹಾ ಚಾಲನೆ ನೀಡಿದರು.
12ವರ್ಷಕ್ಕೊಮ್ಮೆ ನಡೆಸಲು ಉದ್ದೇಶಿಸಿರುವ ಚಿಕ್ಕಬೆಟ್ಟ ಚಂದ್ರಗಿರಿ ಉತ್ಸವ ಚಿಕ್ಕಬೆಟ್ಟದಲ್ಲಿ ಭಾನುವಾರ ಚಾಲನೆ ದೊರೆತಿದ್ದು, ಉತ್ಸವದ ಅಂಗವಾಗಿ ಚಂದ್ರಗಿರಿಯಲ್ಲಿನ 14 ಬಸದಿಗಳಲ್ಲಿ ಏಕ ಕಾಲಕ್ಕೆ ಅಭಿಷೇಕ ಹಾಗೂ ಪೂಜೆ ಕಾರ್ಯಕ್ರಮ ನೆರವೇರಿತು.
ಜಿನಾಲಯಗಳಿಗೆ ನಮನ: ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಮಠದ ಬಳಿಯಿಂದ ಮೆರವಣಿಗೆಯಲ್ಲಿ ಭಕ್ತರು, ಮುನಿಗಳು ಹಾಗೂ ಜೈನ ಧರ್ಮೀಯರು ಮೆರವಣಿಗೆಯಲ್ಲಿ ಆಗಮಿಸಿ ಜಿನಾಲಯಗಳಿಗೆ ನಮನ ಸಲ್ಲಿಸಿದರು.
ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಎಲ್ಲಾ 14 ಬಸದಿಗಳಿಗೆ ತೆರಳಿ ಬಸದಿಗಳಲ್ಲಿನ ಜೈನ ತೀರ್ಥಂಕರರಿಗೆ ಅಭಿಷೇಕ ನೆರವೇರಿಸಿ ಮುಕ್ಕೊಡೆಗಳನ್ನು ಧರಿಸಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ಚಾವುಂಡರಾಯನು ಶ್ರೀ ಕ್ಷೇತ್ರದ ಚಂದ್ರಗಿರಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಇಲ್ಲಿಂದ ಬಿಟ್ಟ ಬಾಣವು ವಿಂದ್ಯಗಿರಿಯ ಮೇಲೆ ತಾಗಿದ್ದರಿಂದ ವಿಂದ್ಯಗಿರಿಯಲ್ಲಿ ಬಾಹುಬಲಿ ಮೂರ್ತಿ ನಿರ್ಮಾಣಕ್ಕೆ ಕಾರಣವಾದ ಚಂದ್ರಗಿರಿಯ ಉತ್ಸವ ಅಗತ್ಯವಿದೆ ಎಂದು ತಿಳಿಸಿದರು.
ಸೌಲಭ್ಯ ಕಲ್ಪಿಸಲು ಮನವಿ: ಕ್ಷೇತ್ರದಲ್ಲಿ ಪ್ರಾಚೀನತೆ ಉಳಿಯಬೇಕು. ಅದೇ ರೀತಿ ಆಧುನಿಕವಾಗಿ ಕ್ಷೇತ್ರ ಅಭಿವೃದ್ಧಿಯಾಗಬೇಕಿದ್ದು, ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಧುನಿಕ ಸೌಲಭ್ಯಗಳನ್ನು ನೀಡಬೇಕು ಎಂದು ತಿಳಿಸಿದರು.  ಚಿಕ್ಕಬೆಟ್ಟ ಚಂದ್ರಗಿರಿ ಮಹೋತ್ಸವ ಒಂದು ವರ್ಷದ ಕಾಲ ನಡೆಯಲಿದ್ದು, ವರ್ಷಪೂರ್ವ ಧಾರ್ಮಿಕ ಹಾಗೂ ಶಾಸನಗಳ ಮಾಹಿತಿ ಹಾಗೂ ಸಾಹಿತ್ಯಾತ್ಮಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸಂಸ್ಕೃತಿ ಉಳಿಸುವ ಕಾರ್ಯ: ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ ನಾಡಿಗೆ ಅಹಿಂಸಾ ಮಾರ್ಗವನ್ನು ಸಾರಿದ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿರುವುದರಿಂದ ಹಿಂದಿನ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
 ಆಚಾರ್ಯ 108 ಸಚ್ಚಿದಾನಂದಿ ಮಹಾರಾಜರು, ಆರ್ಯಿಕಾ 105  ಶಿವಮತಿ ಮಾತಾಜಿ ಬೆಂಗಳೂರಿನ ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕ ಟಿ.ಎಂ ಕೇಶವ್, ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡೇಗೌಡ, ತಾಲೂಕು ಪಂಚಾಯಿತಿ ಸದಸ್ಯ ರಾಘವೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.