ರಸ್ತೆ ದುರಸ್ತಿಗಾಗಿ ಶ್ರಮದಾನ
ಸಕಲೇಶಪುರ: ತಾಲೂಕಿನ ಹಳ್ಳಿಗದ್ದೆ ಗ್ರಾಮಸ್ಥರು ಶ್ರಮದಾನ ಮಾಡುವ ಮೂಲಕ ಗ್ರಾಮದ ರಸ್ತೆಯನ್ನು ತಾವೇ ದುರಸ್ತಿಪಡಿಸಿಕೊಂಡ ಘಟನೆ ಸೋಮವಾರ ನಡೆಯಿತು. ಹೆತ್ತೂರು -ಐಗೂರು ಮುಖ್ಯ ರಸ್ತೆಯ ನಡುವೆ ಇರುವ ಹಳ್ಳಿಗದ್ದೆ ಗ್ರಾಮ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿ.ಮೀ. ಅಂತರದಲ್ಲಿದ್ದ ಗ್ರಾಮಕ್ಕೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸವುದು ಅಸಾಧ್ಯವಾಗಿತ್ತು. ಈ ರಸ್ತೆ ದುರಸ್ತಿಪಡಿಸುವಂತೆ ಹಲವು ಬಾರಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದರೂ ಯಾವುದೇ ಉಪಯೋಗವಾಗಿರಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೂ ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಗ್ರಾಮಸರೇ ಶ್ರಮದಾನದ ಮೂಲಕ ದುರಸ್ತಿಪಡಿಸಿಕೊಂಡರು.
1ನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆ
ಮೈಸೂರು: ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಗೆ ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು. ಚಾಮರಾಜ ಜೋಡಿರಸ್ತೆಯಲ್ಲಿ ಜನಸ್ಪಂದನ ಟ್ರಸ್ಟ್ ಆರಂಭಿಸಿರುವ ಉಚಿತ ಕಂಪ್ಯೂಟರ್ ಹಾಗೂ ಸ್ಪೋಕನ್ ಇಂಗ್ಲಿಷ್ ತರಬೇತಿ ಹಾಗೂ ಉದ್ಯೋಗ ಕೇಂದ್ರ ಯುವ ಸ್ಪಂದನ ಶೈಕ್ಷಣಿಕ ಸಂಸ್ಥೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾತೃಭಾಷೆಯ ತಳಹದಿಯ ಮೇಲೆ ಪ್ರಾಥಮಿಕ ಶಿಕ್ಷಣ ಪಡೆಯುವುದು ಬಹುಮುಖ್ಯ. ಇದರಿಂದ ಭಾಷೆಯ ತಿಳಿವಳಿಕೆ ಹಾಗೂ ಜ್ಞಾನ ಹೆಚ್ಚಾಗಲಿದೆ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಸಂವಹನ ಅತ್ಯವಶ್ಯಕ ಎಂದು ಹೇಳಿದರು.
ಗುರಿ, ಶ್ರದ್ಧೆ ಸಾಧನೆಗೆ ಸ್ಫೂರ್ತಿ
ಹಾಸನ: ಗುರಿ ಮತ್ತು ಶ್ರದ್ಧೆ ಸಾಧನೆಗೆ ಸ್ಫೂರ್ತಿ ಎಂದು ಗುತ್ತಿಗೆದಾರ ಭೋಜರಾಜ್ ತಿಳಿಸಿದರು. ಗೊರೂರಿನ ಯೋಗಾ ನರಸಿಂಹಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಗುತ್ತಿಗೆದಾರರು ಆಯೋಜಿಸಿದ್ದ ರಾಷ್ಟ್ರೀಯ ರತ್ನ ಪುರಸ್ಕೃತ ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಿ.ಟಿ. ವೆಂಕಟೇಶ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹೇಮಾವತಿ ಪವರ್ಹೌಸ್ನ ಜನರಲ್ ಮ್ಯಾನೇಜರ್ ವೇಣುಗೋಪಾಲ್ ಮಾತನಾಡುತ್ತಾ, ವೆಂಕಟೇಶ್ ಅವರು ಗೊರೂರು ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿಕೊಡುವಲ್ಲಿ ವಿಶೇಷವಾಗಿ ಆಸ್ಥೆ ವಹಿಸಿ ಯಶಸ್ವಿಯಾದರು ಎಂದರು. ನೀರಾವರಿ ಯೋಜನೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಟಿ. ವೆಂಕಟೇಶ್, 1990 ರಲ್ಲಿ ಎಂಜಿನಿಯರ್ ಆಗಿ ಸೇವೆ ಆರಂಭಿಸಿ ಜಿಲ್ಲೆಯ ಏತ ನೀರಾವರಿ ಯೋಜನೆಗಳು ಸಾಕಾರಕ್ಕೆ ಪೂರಕವಾಗಿ ಸ್ಪಂದಿಸಿ, 2005 ರಲ್ಲಿ ಅಡಿಕೆ ಬೊಮ್ಮೇನಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಮುಗಿಯುವ ಹಂತದಲ್ಲಿದೆ. ಹಾಸನದಲ್ಲಿರುವ ಅಕ್ವಡಕ್ಟ್ ಅಭಿವೃದ್ಧಿ ಹಂತದಲ್ಲಿದ್ದು, ಸುಮಾರು 80 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ಕೀಳರಿಮೆ ಬಿಡಲು ವಿದ್ಯಾರ್ಥಿಗಳಿಗೆ ಸಲಹೆ
ಹಾಸನ: ನಮ್ಮಲ್ಲಿರುವ ಕೀಳರಿಮೆ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ ಎಂದು ಗೊರೂರು ಶಿವೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘ ಹಾಗೂ ನಾನಾ ಸಂಘಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸೌಜನ್ಯತೆ ಮತ್ತು ವಿನಯತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಯದ ಸದ್ಬಳಕೆಯಾಗಲಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ವಿಶ್ವನಾಥರಾವ್ ಚವ್ಹಾಣ್, ಸಮಯ ಕುಳಿತಿರುವುದಿಲ್ಲ. ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಒಂದು ಶಾಲೆ ಉತ್ತಮ ಶಾಲೆಯಾಗಬೇಕೆಂದರೆ, ಎಲ್ಲಾ ಶಿಕ್ಷಕರು ಸಿಬ್ಬಂದಿ ಸಹಕಾರ ಹಾಗೂ ಶ್ರಮವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೊಡ್ಡ ಕೊಂಡಗೊಳ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ವೆಂಕಟೇಶ್, ಮತ್ತಿತರರು ಪಾಲ್ಗೊಂಡಿದ್ದರು.
ಇಬ್ಬರು ಯುವತಿಯರ ನಾಪತ್ತೆ: ದೂರು
ಆಲೂರು: ತಾಲೂಕಿನ ಜೋಸೆಫ್ ನಗರ ನಿವಾಸಿ ಜ್ಞಾನಪ್ರಕಾಶ್ ಎಂಬುವವರ ಪುತ್ರಿ ಶಾಂತಪ್ರಿಯ (19) ಎಂಬಾಕೆ ಜೂ.10 ರಂದು ಮಧ್ಯಾಹ್ನ ಮನೆಯಿಂದ ಹೋದವಳು ಇದುವರೆಗೂ ಮನೆಗೆ ಹಿಂತಿರುಗಿಲ್ಲ ಎಂದು ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದ್ದು ಈಕೆಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಆಲೂರು ಪಿಎಸ್ಐ(ದೂರವಾಣಿ-ಸಂ-08170-218231) ತಿಳಿಸಲು ಕೋರಲಾಗಿದೆ.
ಮತ್ತೊಂದು ಪ್ರಕರಣ: ತಾಲೂಕಿನ ಛತ್ರನಹಳ್ಳಿಯ ಪವಿತ್ರ (22) ಎಂಬ ಯುವತಿ ಹಾಸನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾದ ಘಟನೆ ಇತ್ತೀಚೆಗೆ ನಡೆದಿದೆ. ಎಣ್ಣೆಗೆಂಪು ಬಣ್ಣ, ಕೋಲು ಮುಖ, ಕಪ್ಪು ಕೂದಲು ಹೊಂದಿದ್ದು, ಈಕೆ 5.4 ಅಡಿ ಎತ್ತರವಿದ್ದು, ಕೆಂಪು ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದರು ಎಂದು ಆಕೆಯ ತಂದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಷರ ಕಿತ್ತುಕೊಳ್ಳುತ್ತಿರುವ ಸರ್ಕಾರ
ಹಾಸನ: ಆರ್ಟಿಇ ಕಾಯ್ದೆಯ ಫಲವು ಶ್ರೀಮಂತರಿಗೇ ದೊರೆಯುತ್ತಿದ್ದು, ನಿಜವಾದ ಫಲಾನುಭವಿಗಳು ಮಾಹಿತಿ ಕೊರತೆಯಿಂದ ಮತ್ತು ಸಾಮಾಜಿಕ ಅನ್ಯಾಯದ ಅಸಹಾಯಕತೆಯಿಂದ ಆರ್ಟಿಇ ಕಾಯ್ದೆಯಿಂದ ದೂರವೇ ಉಳಿದಿದ್ದಾರೆ. ಇದಕ್ಕೆ ಪೂರಕ ವೆಂಬಂತೆ ಅಲ್ಪಸಂಖ್ಯಾತ ಶಾಲೆಗಳ ಮಾನ ದಂಡವನ್ನು ಶೇ.25 ಕ್ಕೆ ಸಡಿಲಿಸಿರುವುದು ಬಡವರ ವಿರೋಧಿಯಾಗಿದೆ ಎಂದು ಭೀಷ್ಮ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ. ರೋಹಿಣಿ ಕುಮಾರ್ ತಿಳಿಸಿದ್ದಾರೆ. ಸರ್ಕಾರ ಗಮನಹರಿಸಿ ಅಲ್ಪ ಸಂಖ್ಯಾತ ಶಾಲೆಗಳ ಸಡಿಲಿಕೆಯ ಮಾನ ದಂಡವನ್ನು ಪುನರ್ ವಿಮರ್ಶಿಸಬೇಕು. ಅನ್ನ ಕೊಟ್ಟ ಸರ್ಕಾರ ಅಕ್ಷರ ಕಿತ್ತು ಕೊಂಡು ದಾಸ್ಯತ್ವದಲ್ಲೇ ಮುಂದುವರೆಯುವಂತೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಆರೋಗ್ಯ ಶಿಬಿರ ಇಂದು
ಹಾಸನ: ಅರಕಲಗೂಡಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ಜೂ. 17 ರಂದು ಬಿಪಿಎಲ್ ಕಾರ್ಡುದಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೃದಯರೋಗ, ಕಿಡ್ನಿಯಲ್ಲಿ ಕಲ್ಲು, ಮತ್ತು ನರರೋಗಕ್ಕೆ ಸಂಬಂಧಿಸಿದಂತೆ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆ ಹಾಗೂ ಚನ್ನರಾಯಪಟ್ಟಣದ ನಾಗೇಶ್ ಆಸ್ಪತ್ರೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಸಹಯೋಗ ಇದೆ. ಮಾಹಿತಿಗೆ ಆರೋಗ್ಯಮಿತ್ರ ದೂ. 7259003457 ಅಥವಾ 7259003404 ಸಂಪರ್ಕಿಸಬಹುದು.
ಆರೋಗ್ಯ ಯೋಜನೆಗೆ ನೋಂದಣಿ
ಹಾಸನ; ನಗರದ ಸಂಪಿಗೆ ರಸ್ತೆಯಲ್ಲಿ ಇರುವ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ ಯಸ್ವಿನಿ ನಗರ ಸಹಕಾರಿಗಳ ಆರೋಗ್ಯ ಯೋಜನೆಯ ಸೌಲಭ್ಯವು ಸಂಘದ ಎಲ್ಲಾ ಸದಸ್ಯರಿಗೆ ಲಭ್ಯವಿದೆ.
ಸಂಘದ ಕಚೇರಿಯಲ್ಲಿ ಸದಸ್ಯರು ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಪ್ರತೀ ನೊಂದಣಿಗೆ 710 ರು. ಸರ್ಕಾರ ನಿಗದಿಪಡಿಸಿದ್ದು, ಜುಲೈ 15 ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಈ ಯೋಜನೆಯ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು ಪಡೆದುಕೊಳ್ಳಬೇಕಾಗಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಘದ ಕಚೇರಿಯ ದೂರವಾಣಿ ಸಂಖ್ಯೆ 08172-263006 ಸಂಪರ್ಕಿಸಬಪಹುದು.
ಬೆಂಗಳೂರು- ಹಾಸನ ರೈಲು ಮಾರ್ಗಕ್ಕೆ ಆದ್ಯತೆ
ಬೇಲೂರು: ಈ ಬಾರಿಯ ರೇಲ್ವೆ ಬಜೆಟ್ನಲ್ಲಿ ಪ್ರಗತಿಯಲ್ಲಿರುವ ರೇಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ರೇಲ್ವೆ ಸಚಿವ ಸದಾನಂದಗೌಡ ಹೇಳಿದರು.
ಚಿಕ್ಕಮಗಳೂರಿನಿಂದ ಹಾಸನಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣಕ್ಕೆ ಭೇಟಿ ನೀಡಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿಯ ಬಜೆಟ್ನಲ್ಲಿ ಬೆಂಗಳೂರು- ಹಾಸನ ರೈಲು ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚಿನ ಆಧ್ಯತೆ ನೀಡಲಾಗುವುದು. ಬೇಲೂರು-ಹಾಸನ ಮಾರ್ಗಪರಿಶೀಲನೆ ಬಗ್ಗೆ ಇನ್ನೂ ಯಾವುದೇ ಯೋಜನೆ ಕೈಗೊಂಡಿಲ್ಲ.
ಸುರಕ್ಷತೆಗೆ ಆದ್ಯತೆ: ಸಕಲೇಶಪುರ ಚಿಕ್ಕಮಗಳೂರು ರೈಲು ಮಾರ್ಗದ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ಬಜೆಟ್ನಲ್ಲಿ ರೈಲು ಪ್ರಯಾಣದ ಸುರಕ್ಷತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.ಬಿಜೆಪಿ ಮುಖಂಡರಾದ ಅಮಿತ್ ಶೆಟ್ಟಿ, ನಾಗೇಶ್, ಅಭಿಗೌಡ, ಬಲ್ಲೆನಹಳ್ಳಿ ರವಿ, ಸಂಜಯ್ ಕೌರಿ, ಸಂದೀಪ್, ವಿಜಯಲಕ್ಷ್ಮಿ, ಇತರರು ಇದ್ದರು.
ಹಾಸನ-ಶ್ರವಣಬೆಳಗೊಳ-ಬೆಂಗಳೂರು ರೈಲು
ಹಾಸನ: ಹಾಸನ-ಶ್ರವಣಬೆಳಗೊಳ-ಬೆಂಗಳೂರು ನಡುವಿನ ನೇರ ರೈಲು ಮಾರ್ಗ ಯೋಜನೆ ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ತಮ್ಮ ಗಮನದಲ್ಲಿದೆ ಎಂದು ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಶೃಂಗೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಸೋಮವಾರ ಸಂಜೆ ಬೆಂಗಳೂರಿಗೆ ಹಿಂತಿರುಗುವ ವೇಳೆ ನಗರದ ತಣ್ಣೀರು ಹಳ್ಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಾಸನದಿಂದ ಶ್ರವಣಬೆಳಗೊಳದವರೆಗೆ ರೈಲು ಹಳಿ ಜೋಡಣೆ ಕಾಮಗಾರಿ ಪೂರ್ಣಗೊಂಡಿದ್ದು, ರೈಲು ಓಡಾಡುತ್ತಿದೆ. ಅಂತೆಯೇ ಶ್ರವಣಬೆಳಗೊಳದಿಂದ ಹಿರೀಸಾವೇ ಮಾರ್ಗವಾಗಿ ಬೆಂಗಳೂರುವರೆಗೆ ಕಾಮಗಾರಿ 1 ದಶಕದಿಂದ ಪೂರ್ಣವಾಗಿಲ್ಲ. ಇದು ನನ್ನ ಗಮನದಲ್ಲಿದೆ. ಈ ಯೋಜನೆ ಸಾಕಾರವಾದ್ರೆ ಮಂಗಳೂರು-ಬೆಂಗಳೂರು ರಸ್ತೆ ಸಂಚಾರ ಒತ್ತಡ ಕಡಿಮೆಯಾಗಲಿದೆ ಅನ್ನುವುದೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

