ಹಣ ಇದ್ದರೂ ಸಮಸ್ಯೆ ಬಗೆಹರಿಸುವ ಮನಸ್ಸಿಲ್ಲ
ಅರಸೀಕೆರೆ: ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪ್ರದೇಶಾಭಿವೃದ್ಧಿ ನಿಧಿಯಿಂದ ಪಟ್ಟಣದ ಅಭಿವೃದ್ಧಿಗಾಗಿ ಪ್ರತಿವರ್ಷ ಕೋಟ್ಯಂತರ ರು. ಅನುದಾನ ಬಿಡುಗಡೆ ಮಾಡುತ್ತಿದೆಯಾದರೂ ನಾಗರಿಕರ ಮೂಲಭೂತ ಸಮಸ್ಯೆ ನಿವಾರಿಸುವಲ್ಲಿ ಪಟ್ಟಣದ ಪುರಸಭೆ ಸಂಪೂರ್ಣ ವಿಫಲವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಪ್ರಸನ್ನ ಗಣಪತಿ ಸಮುದಾಯ ಭವನದ ಬಲಭಾಗದಲ್ಲಿರುವ ದರ್ಗಾದ ಮುಂಭಾಗ ಭಾರಿ ಕಸದ ರಾಶಿ ಅನೇಕ ವರ್ಷಗಳಿಂದ ಬಿದ್ದಿದ್ದು ದುರ್ವಾಸನೆ ಬೀರುತ್ತಿದೆ. ಇಲ್ಲಿ ಜನರು ಮೂಗುಮುಚ್ಚಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸುತ್ತಮುತ್ತಲಿನ ಜನರು ಸಾಂಕ್ರಾಮಿಕ ರೋಗಗಳು ಹರಡುವ ಭಯದಿಂದ ಜೀವನ ಸಾಗಿಸುವಂತಾಗಿದೆ.
ಈ ಕಸದ ರಾಶಿಯ ಮುಂಭಾಗವೇ ದರ್ಗಾ ಇದ್ದು ನೂರಾರು ಮುಸಲ್ಮಾನರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಾರ್ಥನೆಯ ನಂತರ ಕಸದ ರಾಶಿಯ ದರ್ಶನ ಅನಿವಾರ್ಯ. ಅಣತಿ ದೂರದಲ್ಲಿ ರೋಟರಿ ಶಾಲೆ ಹಾಗೂ ಎಸ್ಬಿಎಂ ಬ್ಯಾಂಕ್ ಪಕ್ಕದಲ್ಲೇ ಶಾಲೆ, ಟ್ಯುಟೋರಿಯಲ್ಗಳಿದ್ದು ಈ ಎಲ್ಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಈ ದುರ್ವಾಸನೆಯಲ್ಲಿಯೇ ವ್ಯಾಸಂಗ ಮಾಡಬೇಕಾಗಿರುವುದು ವಿಪರ್ಯಾಸದ ಸಂಗತಿ.
ತ್ಯಾಜ್ಯದ ರಾಶಿ: ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಎಸ್ಎನ್ಎಸ್ ವಸತಿ ಗೃಹದ ಪಕ್ಕದಲ್ಲಿ ರಾಶಿ-ರಾಶಿ ಕಸ ಅನೇಕ ವರ್ಷಗಳಿಂದ ಬಿದ್ದಿದ್ದರೂ ಪುರಸಭೆಯ ನೌಕರರಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಸುತ್ತಮುತ್ತಲಿನ ನಿವಾಸಿಗಳ ದೂರಾಗಿದೆ. ಅನೇಕ ವರ್ಷಗಳಿಂದ ಕೊಳೆತು ನಾರುತ್ತಿರುವ ಈ ರಸ್ತೆಯಲ್ಲೇ ಸಾವಿರಾರು ಪ್ರಯಾಣಿಕರು ದಿನನಿತ್ಯ ಪ್ರಯಾಣಿಸುತ್ತಿದ್ದು ಈ ದುರ್ವಾಸನೆಯನ್ನು ದಾಟಿಯೇ ಮುಂದೆ ಹೋಗಬೇಕಾಗಿರುವುದು ದುರದೃಷ್ಟಕರ ಸಂಗತಿ.
ಎಲ್ಲದಕ್ಕೂ ಪುರಸಭೆಯನ್ನೇ ದೂರುವ ಸಾರ್ವಜನಿಕರಿಗೆ ಪುರಸಭೆಯ ವತಿಯಿಂದ ಹಸಿ ಹಾಗೂ ಒಣ ಕಸ ಬೇರೆ ಬೇರೆಯಾಗಿ ಹಾಕಲು ಕಸದ ಬುಟ್ಟಿಯನ್ನು ನೀಡಿದ್ದು ಹೀಗೆ ಬೇರೆ ಬೇರೆಯಾಗಿ ಶೇಖರಣೇಯಾದ ಕಸವನ್ನು ಪಡೆಯಲು ಪುರಸಭಾ ಸಿಬ್ಬಂಧಿ ಮನೆಯ ಬಾಗಿಲಿಗೆ ಬಂದು ಕಸವನ್ನು ಪಡೆಯುತ್ತಿದ್ದರೂ ಈ ರಾಶಿ ರಾಶಿ ಕಸ ಶೇಖರಣೆಯಾಗುತ್ತಿರುವಾದಾದರೂ ಎಲ್ಲಿಂದ ಎಂಬುದು ಯಕ್ಷಪ್ರಶ್ನೆಯಾಗಿದೆ. ಸಾರ್ವಜನಿಕರು ಈ ಬಗ್ಗೆ ತಮ್ಮ ಜವಾಬ್ದಾರಿಯನ್ನರಿತು ಕಸ ಶೇಖರಣೆಯಾಗದಂತೆ ಮುಂಜಾಗ್ರತೆ ವಹಿಸುವ ಅಗತ್ಯವಿದೆ.
ಗುಂಡಿಗಳ ಹಾವಳಿ: ಪಟ್ಟಣದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿಗೆ ಹೋಗುವ ದಾರಿಯಲ್ಲಿ ಒಳಚರಂಡಿಗಾಗಿ ರಸ್ತೆಗಳನ್ನು ಅಗೆದು ಸಣ್ಣ ಪುಟ್ಟ ಗುಂಡಿಗಳನ್ನು ಹಾಗೆಯೇ ಬಿಟ್ಟಿರುವುದರಿಂದ ಶಾಲೆಗೆ ಹೋಗುವ ಮಕ್ಕಳು ಬಿದ್ದು ಗಾಯಗೊಂಡಿರುವ ಅನೇಕ ಘಟನೆಗಳು ನಡೆದಿದ್ದು ಶಾಲಾ ಮಕ್ಕಳು ಓಡಾಡುವ ಈ ರಸ್ತೆಯನ್ನು ಸಮತಟ್ಟುಗೊಳಿಸುವ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕೆಂಬುದು ಪೋಷಕರ ಆಗ್ರಹವಾಗಿದೆ.
ಅಲ್ಪಸಂಖ್ಯಾತರು, ದಲಿತರೇ ಹೆಚ್ಚಾಗಿ ವಾಸಿಸುತ್ತಿರುವ ಹಾಸನ ರಸ್ತೆ ಬಡಾವಣೆಯ ಬಹುತೇಕ ಭಾಗಗಳಲ್ಲಿ ಸುತ್ತಮುತ್ತಲ ಪರಿಸರ ಕಲುಷಿತಗೊಂಡಿದ್ದು ಅಶುಚಿತ್ವದ ವಾತಾವರಣ ನಿರ್ಮಾಣವಾಗಿ ಸಾಂಕ್ರಾಮಿಕ ರೋಗಳ ಭೀತಿಯನ್ನು ಜನರು ಎದುರಿಸುತ್ತಿದರೂ ಪುರಸಭೆ ಎಚ್ಚೆತ್ತುಸರಿಪಡಿಸುವ ಕಾರ್ಯಕ್ಕೆ ಕೈಹಾಕದಿರುವುದು ಅದರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಸಕಡ್ಡಿ ರಾಶಿ: ಹಾಸನ ರಸ್ತೆಯ 5ನೇ ವಾರ್ಡ್ ಈ ಹಿಂದೆ ಪುರಸಭೆಯ ಮಾಜಿ ಅಧ್ಯಕ್ಷ ಪಿ.ದೇವಕುಮಾರ್ ಪ್ರತಿನಿಧಿಸುತ್ತಿದ್ದು ಈಗ ಜೆಡಿಎಸ್ನ ಸುರೇಶ್ ಸದಸ್ಯರಾಗಿದ್ದಾರೆ. ಈ ವಾರ್ಡ್ನ ನಾಲ್ಕನೇ ಕ್ರಾಸ್ನಲ್ಲಿ ರಾಜಕಾಲುವೆ ಹರಿದುಹೋಗಿದ್ದು ಇದನ್ನು ಅನೇಕ ವರ್ಷಗಳಿಂದ ಸ್ವಚ್ಛಗೊಳಿಸದ ಕಾರಣ ಕಸಕಡ್ಡಿಗಳು ಕೊಳೆತು ಅಲ್ಲಿಯೇ ನಿಂತು ಅಸಹ್ಯಕರವಾದ ವಾತಾವರಣ ಸೃಷ್ಟಿಯಾಗಿದ್ದು, ಸೊಳ್ಳೆಗಳು ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ, ಚಿಕೂನ್ಗುನ್ಯಾ, ರೋಗಗಳ ಭೀತಿಯನ್ನು ಜನರು ಎದುರಿಸುವಂತಾಗಿದೆ.
ಈ ರಸ್ತೆಯ 3ನೇ ವಾರ್ಡ್ ಹಾಸನ ರಸ್ತೆಯ ಎಡ ಭಾಗದ ಎರಡನೇ ಕ್ರಾಸ್ನಲ್ಲಿ ಸೇತುವೆಯೊಂದು ಪುರಸಭೆಯ ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಮುರಿದುಬಿದ್ದಿದ್ದು ದೊಡ್ಡದಾದ ಕಂದಕ ನಿರ್ಮಾಣವಾಗಿ ದಶಕಗಳೇ ಉರುಳಿದರೂ ಇದನ್ನು ರಿಪೇರಿ ಮಾಡಿಸದ ಕಾರಣ ದ್ವಿ ಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ರಾತ್ರಿಯ ವೇಳೆ ಅಪಘಾತಕ್ಕೆ ಸಿಲುಕಿ ಗಾಯಗೊಂಡಿದ್ದಾರೆ. ಆದರೂ ಇದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಪುರಸಭೆ ಮುಂದಾಗದಿರುವುದು ವಿಪರ್ಯಾಸ.
ಪಿ. ಶಾಂತಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

