ಸ್ವಚ್ಛತೆ ಎಂಬುದು ಇಲ್ಲಿ ಕನಸಿನ ಮಾತು
ಅರಕಲಗೂಡು: ಅರಕಲಗೂಡು ತಾಲೂಕು ಕೇಂದ್ರವಾದರೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಏನೆಲ್ಲಾ ಸರ್ಕಸ್ ಮಾಡಿದರೂ ಪೂರ್ಣ ಪ್ರಮಾಣದಲ್ಲಿ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಹತ್ತು ಹಲವು. ಪಟ್ಟಣದ ತುಂಬೆಲ್ಲಾ ಗೂಡಂಗಡಿಗಳು , ಗಾಡಿಗಳು ಮತ್ತೆ ತಲೆ ಎತ್ತಲಾರಂಭಿಸಿವೆ. ಪಟ್ಟಣದ ಹೃದಯ ಭಾಗವಾದ ನೂತನ ಬಸ್ಸು ನಿಲ್ದಾಣದ ಆಸುಪಾಸು ಈ ಎಲ್ಲಾ ಅಂಗಡಿಗಳು ನಿಲ್ಲುತ್ತಿವೆ.
ಬೆಳಗಿನಿಂದ ರಾತ್ರಿಯವರೆಗೂ ಇಂತಹ ಅಂಗಡಿಗಳಲ್ಲಿ ಹಣ್ಣು, ತಿಂಡಿ ತಿನಸುಗಳು ಮಾರಾಟವಾದ ನಂತರ ಆ ಸ್ಥಳದಲ್ಲಿ ಕೊಳಚೆ ನಿರ್ಮಾಣವಾಗುತ್ತಿದೆ.
ಪಟ್ಟಣದಲ್ಲಿ ಇರಿಸಲಾಗಿರುವ ಕಸದ ತೊಟ್ಟಿಗಳ ಕಸ ಆಗಿಂದಾಗಲೇ ಎತ್ತವಳಿ ಆಗದೇ ನಾಯಿಗಳು ಕಸವನ್ನು ಎಳೆದು ಹಾಕುತ್ತವೆ. ಇದೆಲ್ಲಾ ಇಲ್ಲಿ ಮಾಮೂಲು. ಈ ಮಧ್ಯೆ ಈ ವರೆಗೆ ಪಟ್ಟಣದಲ್ಲಿ ಚರಂಡಿಗಳ ನಿರ್ಮಾಣಕ್ಕೆಂದು ಲಕ್ಷಾಂತರ ರು. ವೆಚ್ಚ ಮಾಡಲಾಗಿದೆಯಾದರೂ ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸದೇ ಇರುವುದರಿಂದ ಕಸಕಡ್ಡಿಗಳು ಚಂರಂಡಿಯಲ್ಲಿ ಸಂಗ್ರಹವಾಗಿ ಸ್ವಚ್ಛತೆ ಕಾಪಾಡಲು ದೊಡ್ಡ ಸವಾಲಾಗಿಬಿಟ್ಟಿದೆ.
ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ತುಂಬುತ್ತಿಲ್ಲ. ಇದೂ ಸಹ ಪಟ್ಟಣದ ಸ್ವಚ್ಛತೆ ಕಾಪಾಲು ತೊಡಕಾಗಿದೆ ಎನ್ನಬಹುದು. ಅಲ್ಲಲ್ಲಿ ಪಾಳು ಬಿದ್ದ ನಿವೇಶನಗಳು ಇದ್ದು, ಈ ಕಟ್ಟಡಗಳ ಮಾಲೀಕರು ನಿವೇಶನಗಳನ್ನು ಸ್ವಚ್ಛಗೊಳಿಸದ ಕಾರಣ ಪಾಳು ಬಿದ್ದ ಪ್ರದೇಶವಾಗಿವೆ. ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪಟ್ಟಣ ಪಂಚಾಯಿತಿ ಖಾಸಗಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಿ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಇನ್ನು ಪಟ್ಟಣದ ಕೆಲವೇ ಚರಂಡಿಗಳಿಂದ ತೆರಳುವ ತ್ಯಾಜ್ಯ ನೀರು ಪಟ್ಟಣದಿಂದ ಹೊರ ಹಾಕಲು ಬೇಕಾದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸದ ಕಾರಣ ಅಲ್ಲಲ್ಲಿ ಕೊಳೆತು ನಾರುವಂತಾಗಿದೆ. ಪಟ್ಟಣದಲ್ಲಿ ಒಟ್ಟು 15 ವಾರ್ಡುಗಳಿದ್ದು, ಆ ಪೈಕಿ ಎಲ್ಲೋ ಒಂದೆರಡು ವಾಡುಗಳು ಸುಧಾರಣೆಯ ಹಂತದಲ್ಲಿದ್ದರೆ ಉಳಿದವುಗಳೆಲ್ಲದರ ಪಾಡೂ ಇದೇ ಆಗಿದೆ.
ಪ್ಲಾಸ್ಟಿಕ್ ಬಳಕೆ: ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ, ಜಿಲ್ಲಾಧಿಕಾರಿಗಳು ಹಲವು ಬಾರಿ ಆದೇಶಿಸಿದ್ದಾರೆ. ಜಿಲ್ಲೆಯ ವಿವಿಧ ಪುರಸಭೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಸಂಬಂಧ ದಾಳಿಗಳೂ ನಡೆದಿವೆ. ಆದರೆ ಪಟ್ಟಣ ಪಂಚಾಯಿತಿ ಮಾತ್ರ ಒಂದೆರಡು ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು ಬಿಟ್ಟರೆ, ಮತ್ತೇನೂ ಮಾಡಿಲ್ಲ.
ಪಟ್ಟಣದ ತುಂಬೆಲ್ಲಾ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಇದು ಪಟ್ಟಣದ ಅಂದ ಹಾಗೂ ಸ್ವಚ್ಛತೆಯನ್ನೂ ಹಾಳು ಮಾಡುತ್ತಿವೆ. ಇದನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಮಂಜೂರಾಗದ ಯುಜಿಡಿ
ಪಟ್ಟಣದ ಸ್ವಚ್ಛತೆ ಕಾಪಾಡಲು ರುವ ಸಮಸ್ಯೆಗೆ ಮತ್ತೊಂದು ಕಾರಣವೆದರೆ, ಈವರೆಗೆ ಪಟ್ಟಣಕ್ಕೆ ಒಳಚಂರಂಡಿಯನ್ನು ಅನುಷ್ಠಾನಗೊಳಿಸದಿರುವುದು. ಒಳ ಚಂರಂಡಿ ವ್ಯವಸ್ಥೆ ಮಂಜೂರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಹಾಗೆಯೇ ಉಳಿದಿದೆ. ಈ ಸಂಬಂಧ ಪ್ರಸ್ತಾವನೆಯನ್ನೂ ಹಲವು ಬಾರಿ ಕಳುಹಿಸಲಾಗಿತ್ತು. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪಟ್ಟಣ ಪಂಚಾಯಿತಿಗೆ ಯಾವುದಾದರೂ ವಿಶೇಷ ಅನುದಾನದಲ್ಲಿ ಒಳ ಚರಂಡಿ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಇಲ್ಲದಿದ್ದರೆ ಪಟ್ಟಣದ ಸ್ವಚ್ಛತೆ ಮರೀಚಿಕೆ ಆಗಲಿದೆ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಚುನಾಯಿತ ಸದಸ್ಯರು ಮತ್ತು ಶಾಸಕರು ಹೆಚ್ಚಿನ ಇಚ್ಚಾಶಕ್ತಿ ಪ್ರದರ್ಶಿಸುವ ಅಗತ್ಯವಿದೆ.
ಅ.ರಾ.ಸುಬ್ಬರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

