ಖಾಸಗಿ ನಿವೇಶನದಲ್ಲಿ ಸರ್ಕಾರಿ ಹಾಸ್ಟೆಲ್!
ಹೊಳೆನರಸೀಪುರ: ತಾಲೂಕಿನ ಮಂಗಲಾಪುರ ಗ್ರಾಮದ ಬಳಿಯಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಿಸಲು ಭೂಮಿಪೂಜೆ ನಡೆಸಿದ ಸ್ಥಳವು ತಮಗೆ ಸೇರಿದ್ದೆಂದು ವ್ಯಕ್ತಿಯೊಬ್ಬರು ಅಧಿಕಾರಿಗಳ ಜತೆ ವಾಗ್ವಾದ ನಡೆಸಿ ದಿಗ್ಬಂಧನ ವಿಧಿಸಿದ ಘಟನೆ ನಡೆಯಿತು.
ಕೆಆರ್‌ಐಡಿಎಲ್ ವತಿಯಿಂದ ಆರ್‌ಐಡಿಎಫ್ ಯೋಜನೆಯಡಿ ಭೂಸೇನಾ ನಿಗಮವು ತಾಲೂಕಿನ ಮಂಗಲಾಪುರ ಗ್ರಾಮದ ಬಳಿ ರು. 99.60 ಲಕ್ಷ ಅನುದಾನದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಹಾಸ್ಟೆಲ್ ನಿರ್ಮಿಸಲು ಉದ್ದೇಶಿಸಿದ್ದು, ಕಾಮಗಾರಿಯ ಭೂಮಿ ಪೂಜೆಗೆಂದು ಶಾಸಕ ಎಚ್.ಡಿ.ರೇವಣ್ಣ ಭಾನುವಾರ ತೆರಳಿದ್ದರು.
ಖಾಸಗಿ ನಿವೇಶದಲ್ಲಿ ಸಿದ್ಧತೆ: ಮೊದಲಿಗೆ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಲ್ಲಿನ ಖಾಲಿ ನಿವೇಶನದ ಬಳಿಯಲ್ಲಿ ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿಗಾಗಿ ಸಿದ್ಧತೆ ಮಾಡಲಾಗಿತ್ತು.
ಆದರೆ ಸ್ಥಳಕ್ಕೆ ತೆರಳಿದ ಶಾಸಕ ಎಚ್.ಡಿ.ರೇವಣ್ಣ ಅವರು ಈ ಸ್ಥಳದಲ್ಲಿ ವಿದ್ಯಾರ್ಥಿ ನಿಲಯದ ಸ್ಥಾಪನೆ ಬೇಡ, ಮುಂದಿನ ದಿನಗಳಲ್ಲಿ ಇಲ್ಲಿ ಸರ್ಕಾರಿ ಎಂಜಿನೀಯರಿಂಗ್ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಪಾಲಿಟೆಕ್ನಿಕ್ ಕಾಲೇಜಿನ ಹೊರ ಆವರಣದಲ್ಲಿನ ನಿವೇಶನವೊಂದರಲ್ಲಿ ವಿದ್ಯಾರ್ಥಿ ನಿಲಯದ ಕಟ್ಟಡದ ಕಾವಗಾರಿಗಾಗಿ ಭೂಮಿಪೂಜೆ ನೆರವೇರಿಸುವಂತೆ ತಿಳಿಸಿ ಚನ್ನರಾಯಪಟ್ಟಣಕ್ಕೆ ತೆರಳಿದರು.
ಮಾಲೀಕನ ತಕರಾರು: ನಂತರ ಭೂಸೇನಾ ನಿಗಮದ ಎಇಇ ಶ್ರೀನಿವಾಸರಂಗ, ಎಂಜಿನೀಯರ್ ಜ್ಯೋತಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಪಾಂಡುರಂಗವಿಠಲ ಅವರು ಭೂಮಿಪೂಜೆಗಾಗಿ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ದಾಶರಥಿ ಎಂಬುವವರು ಈ ಜಮೀನು ತಮ್ಮ ಪಿತ್ರಾರ್ಜಿತ ಸ್ವತ್ತಾಗಿದ್ದು, ನಮ್ಮ ಅನುಮತಿ ಇಲ್ಲದೆಯೇ ಭೂಮಿಪೂಜೆ ನಡೆಸಲು ನಿಮಗೆ ಅನುಮತಿ ನೀಡಿದವರು ಯಾರು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಏಕಾಏಕಿ ಉದ್ಭವಿಸಿದ ಈ ಘಟನೆಯಿಂದಾಗಿ ಸ್ಥಳದಲ್ಲಿದ್ದ ಅಧಿಕಾರಿಗಳು ಸಮಾಜಾಯಿಷಿ ನೀಡಲು ಮುಂದಾದರು. ಆದರೆ ಅಷ್ಟು ಹೊತ್ತಿಗಾಗಲೇ ಕೆಲ ಗ್ರಾಮಸ್ಥರೂ ಅಲ್ಲಿ ಜಮಾಯಿಸಿ ಜಮೀನಿನ ಸ್ವಾಧೀನದಲ್ಲಿರುವವರ ಅನುಮತಿಯಿಲ್ಲದೇ ಅನಧಿಕೃತವಾಗಿ ಹೇಗೆ ಭೂಮಿಪೂಜೆಗೆ ಮುಂದಾಗಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳಿಗೆ ದಿಗ್ಬಂಧನ: ಈ ಸ್ಥಳದಲ್ಲಿ ಭೂಮಿಪೂಜೆ ನೆರವೇರಿಸುವಂತೆ ಸೂಚನೆ ನೀಡಿದವರು ಸ್ಥಳಕ್ಕೆ ಆಗಮಿಸಿ ತಮಗೆ ಉತ್ತರ ನೀಡುವಂತೆ ಪಟ್ಟು ಹಿಡಿದರಲ್ಲದೇ, ಅಧಿಕಾರಿಗಳು ಹಾಗೂ ಅವರ ವಾಹನವನ್ನು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಸ್ಥಳದಿಂದ ಕದಲದಂತೆ ಗ್ರಾಮಸ್ಥರು ದಿಗ್ಬಂಧನ ವಿಧಿಸಿದರು. ಈ ಘಟನೆಯಿಂದಾಗಿ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ವಿಷಯ ತಿಳಿದ ಕೆಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅಧಿಕಾರಿಗಳ ಬಿಡುಗಡೆ: ಕೊನೆಗೆ ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಪ್ಪ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿ ಗ್ರಾಮಸ್ಥರ ದಿಗ್ಬಂಧನದಲ್ಲಿದ್ದ ಅಧಿಕಾರಿಗಳನ್ನು ಸ್ಥಳದಿಂದ ತೆರಳಲು ಅನುವು ಮಾಡುವಲ್ಲಿ ಯಶಸ್ವಿಯಾದರು.
ಆದರೆ ನಿವೇಶನದ ಮಾಲೀಕ ಎಂ.ವಿ.ದಾಶರಥಿ ಅವರು ಶಾಸಕರು ದಬ್ಬಾಳಿಕೆಯಿಂದ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಲು ಮುಂದಾಗುವಂತೆ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

