ಅನುದಾನಕ್ಕೆ ಕೊರತೆ ಇಲ್ಲ ಕಸ ವಿಲೇವಾರಿ ಮಾತ್ರ ಇಲ್ಲ
ಹೊಳೆನರಸೀಪುರ: ಅನುದಾನ ಇದೆ, ಅವಕಾಶ ಮತ್ತು ಸೌಲಭ್ಯಗಳೂ ಇದೆ, ಜೊತೆಗೆ ಎಲ್ಲೆಂದರಲ್ಲಿ ಕಸವೂ ಇದೆ... ಆದರೆ ಕಸ ವಿಲೇವಾರಿಯ ಸಮಸ್ಯೆಯನ್ನು ಪರಿಹರಿಸುವ ಮಾರ್ಗ ಮಾತ್ರ ಇಂದಿಗೂ ಇಲ್ಲಿನ ಪುರಸಭೆಯ ಜನಪ್ರತಿನಿಧಿಗಳಿಗಾಗಲೀ, ಪುರಸಭೆಯ ಆಡಳಿತಕ್ಕಾಗಲೀ ಹೊಳೆಯುತ್ತಿಲ್ಲ ಎಂಬುದೇ ಪಟ್ಟಣದಲ್ಲಿನ ಘನತ್ಯಾಜ್ಯಕ್ಕಿಂತಲೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ದಿನೇ ದಿನೇ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಸೌಲಭ್ಯಗಳು ಮತ್ತು ಎಲ್ಲ ರೀತಿಯ ಸವಲತ್ತುಗಳನ್ನು ನೀಡಲು ಇಲ್ಲಿನ ಪುರಸಭೆಯೇನೋ ಸಿದ್ಧವಿದೆ. ಆದರೂ ಸಮಸ್ಯೆ ಮಾತ್ರ ಏಕೆ ಬಗೆಹರಿಯುತ್ತಿಲ್ಲ ಎಂಬುದಕ್ಕೆ ಉತ್ತರ ಯಾರಲ್ಲೂ ಸಿಗುತ್ತಿಲ್ಲ.
ಡಸ್ಟ್ಬಿನ್, ಕಂಟೈನರ್
ಇನ್ನು ಮನೆ-ಮನೆ ತ್ಯಾಜ್ಯ ನಿರ್ವಹಣೆಗಾಗಿ 23 ವಾರ್ಡ್ಗಳ ಪೈಕಿ 4 ವಾರ್ಡ್ಗಳನ್ನು ಮಾಸಿಕ 18ಸಾವಿರ ರು.ಗಳ ಗೌರವಧನದ ಆಧಾರದಲ್ಲಿ ದಿವ್ಯಜ್ಯೋತಿ ನಿರಂತರ ಉಳಿತಾಯ ಸಂಘಕ್ಕೆ ಅನುಮತಿಯನ್ನು ಪುರಸಭೆ ನೀಡಿದೆ. ಇನ್ನುಳಿದಂತೆ 16 ವಾರ್ಡ್ಗಳ ಸ್ವಚ್ಛತೆಯನ್ನು ಪುರಸಭೆಯ ಖಾಯಂ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಮನೆ-ಮನೆಗಳಿಗೆ 15 ಸಾವಿರ ಡಸ್ಟ್ಬಿನ್ಗಳನ್ನು ಇಡಲಾಗಿದೆ. ಅಲ್ಲದೇ 22 ಕಸ ಸಂಗ್ರಹಣೆಯ ಕಂಟೈನರ್ಗಳನ್ನು ವಿವಿಧ ಬಡಾವಣೆಗಳಿಗೆ ಒದಗಿಸಲಾಗಿದೆ. ಇಷ್ಟೆಲ್ಲಾ ಇದ್ದೂ ಇಂದಿಗೂ ಹಲವು ಬಡಾವಣೆಗಳಲ್ಲಿನ ಬೀದಿಗಳಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಲೇ ಇರುತ್ತದೆ. ಪುರಸಭೆಯು ಪ್ರತಿ ನಿತ್ಯವೂ ಬೀದಿ ಬೀದಿಗಳನ್ನು ಸುತ್ತಿ ಸ್ವಚ್ಛಗೊಳಿಸಿದ ನಂತರ ಸಂಗ್ರಹಿಸಿದ ಕಸವನ್ನು ವಿಲೇ ಮಾಡುವ ಸಲುವಾಗಿ ಪಟ್ಟಣದ ಹೊರವಲಯದಲ್ಲಿ ಸರಿಸುಮಾರು 8 ಎಕರೆಯಷ್ಟು ಜಾಗವನ್ನು ಖರೀದಿಸಿದೆ. ಇಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ಹಾಗೂ ವೈಜ್ಞಾನಿಕವಾಗಿ ವಿಲೇ ಮಾಡಲು ಅವಶ್ಯಕವಾದ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಅಳವಡಿಸುತ್ತಿದೆ.
ಘಟಕಕ್ಕೆ ವಿದ್ಯುತ್ ಇಲ್ಲ
ಆದರೆ ಘನತ್ಯಾಜ್ಯ ವಿಲೇ ಘಟಕಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ. ಅಲ್ಲದೇ ಇನ್ನಷ್ಟು ಯಂತ್ರಗಳು ಇನ್ನಷ್ಟೇ ಬರಬೇಕಿದೆ. ಇದೆಲ್ಲಾ ಬರುವುದು ಯಾವಾಗಲೋ. ಆದರೆ ಪಟ್ಟಣದಾದ್ಯಂತ ಸಂಗ್ರಹಿಸಿದ ಕಸವನ್ನು ಸೂಕ್ತವಾಗಿ ವಿಲೇ ಮಾಡುವಲ್ಲಿ ಪುರಸಭೆಯ ಸಂಬಂಧಿಸಿದ ಅಧಿಕಾರಿಗಳ ಕ್ರಮ ಮತ್ತು ಶ್ರಮದ ಕೊರತೆಯಿಂದಾಗಿ ಘನತ್ಯಾಜ್ಯ ವಿಲೇವಾರಿ ಘಟಕವು ಗಬ್ಬೆದ್ದು ನಾರುತ್ತಿದೆ. ಘಟಕದ ಒಳಗೆಲ್ಲಾ ಹದ್ದು, ಕಾಗೆ ನಾಯಿಗಳದ್ದೇ ಪಾರುಪತ್ಯವಾಗಿದೆ. ಕಸವನ್ನು ವೈಜ್ಞಾನಿಕವಾಗಿ ಬೇರ್ಪಡಿಸಿ, ಗುಂಡಿಯಲ್ಲಿ ಮುಚ್ಚದ ಕಾರಣದಿಂದಾಗಿ ಕಸದ ರಾಶಿ ದೂರಕ್ಕೆ ಬೆಟ್ಟದಂತೆ ಕಾಣುತ್ತಿದೆ. ಈ ಕಸದ ರಾಶಿಯಿಂದ ಹಾರಿ ಬರುವ ಪ್ಲಾಸ್ಟಿಕ್ಗಳು ಅಕ್ಕ-ಪಕ್ಕದ ಗ್ರಾಮದ ಜಮೀನಿಗೆ ಬೀಳುತ್ತಿರುವುದಲ್ಲದೇ, ಕೋಳಿ ಅಂಗಡಿಗಳ ತ್ಯಾಜ್ಯವನ್ನು ತಿನ್ನಲು ಹೊತ್ತೊಯ್ಯುವ ಹದ್ದು-ಕಾಗೆಗಳು ಸಮೀಪದಲ್ಲಿನ ಗ್ರಾಮಗಳ ಬಳಿಯಲ್ಲಿ ತ್ಯಾಜ್ಯವನ್ನು ಬೀಳಿಸುವ ಕಾರಣ ಹಾಗೂ ವಾಸನೆಯನ್ನು ಸಹಿಸುವುದು ಇಲ್ಲಿನ ಗ್ರಾಮಸ್ಥರಿಗೆ ಅಸಹನೀಯವಾಗಿದ್ದು ಈ ಕುರಿತಂತೆ ಹಲವಾರು ಬಾರಿ ಪ್ರತಿಭಟನೆಗಳೂ ನಡೆದಿದೆ. ಅಲ್ಲದೇ ಪ್ರತಿ ನಿತ್ಯವೂ ಪುರಸಭೆಯ ಸ್ವಚ್ಛತಾ ಕಾರ್ಯಕ್ಕೂ ಮಿಗಿಲಾಗಿ ವಿವಿಧ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಕಚೇರಿಗಳಿಗೆ ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪೌರಕಾರ್ಮಿಕರ ಕೊರತೆ ಉಂಟಾಗುತ್ತಿದೆ. ಇದು ತಪ್ಪಬೇಕು.
ಸ್ವಚ್ಛ ನಗರ ಪರಿಕಲ್ಪನೆ
ನಿತ್ಯವೂ ಪಟ್ಟಣದ ವಾರ್ಡ್ಗಳ ಸ್ವಚ್ಛತೆಗಾಗಿ ಪುರಸಭೆ ಅವಶ್ಯಕ ಕ್ರಮವನ್ನು ಕೈಗೊಂಡಿದೆಯಾದರೂ ಕಸ ಮಾತ್ರ ಕಸದ ರಾಶಿಯಾಗುತ್ತಿದೆಯೇ ಹೊರತು, ಸ್ವಚ್ಛ ನಗರದ ಪರಿಕಲ್ಪನೆ ಮಾತ್ರ ಇನ್ನೂ ಈಡೇರಿಲ್ಲ. ಪ್ರತಿ ನಿತ್ಯವೂ ನಗರವನ್ನು ಸ್ವಚ್ಛಗೊಳಿಸಲು ಇಲ್ಲಿನ ಪುರಸಭೆಯು 28 ಖಾಯಂ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆಯ ಆಧಾರದಲ್ಲಿ 37 ಜನರನ್ನು ನೇಮಿಸಿದ್ದು, ಇದಕ್ಕಾಗಿ ಪುರಸಭೆಯು ಮಾಡುತ್ತಿರುವ ವಾರ್ಷಿಕ ವೆಚ್ಚ ಸರಿಸುಮಾರು 72 ಲಕ್ಷಗಳನ್ನು ಮುಟ್ಟುತ್ತದೆ. ಅಲ್ಲದೇ ಪ್ರತಿ ನಿತ್ಯವೂ ಸಂಗ್ರಹಿಸಿದ ಕಸವನ್ನು ಹೊರಸಾಗಿಸಲು ಇರುವ ಪುರಸಭೆಯ ಟ್ರ್ಯಾಕ್ಟರ್ ಹಾಗೂ ಆಟೋಗಳಿಗೆ ಬಳಸುವ ಡೀಸೆಲ್ ವೆಚ್ಚವಾಗಿ 12 ಲಕ್ಷರು.ಗಳು, ಈ ವಾಹನಗಳ ದುರಸ್ತಿ ವೆಚ್ಚವಾಗಿ 3 ಲಕ್ಷ, ಕೆಮಿಕಲ್ಸ್ಗಳ ಖರೀದಿಗಾಗಿ ಹೆಚ್ಚೂ ಕಡಿಮೆ 4 ಲಕ್ಷ ರು.ಗಳನ್ನು ವಾರ್ಷಿಕವಾಗಿ ಪುರಸಭೆ ಖರ್ಚು ಮಾಡುತ್ತಿದೆ.
ಎಚ್.ಡಿ.ಗುರುಪ್ರಸಾದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

