ಹಾಸನ

ರಾಜಕಾರಣಿಗಳಿಂದ ಕಲಾವಿದರ ದುರ್ಬಳಕೆ

Published On :

ಅರಕಲಗೂಡು: ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ನೇತೃತ್ವದಲ್ಲಿ ಹಾಸನ- ಪಿರಿಯಾ ಪಟ್ಟಣ ರಸ್ತೆ ದುರಸ್ತಿಗೆ ಆಗ್ರಹಿಸಿ ನಡೆದ ಸಂಗೀತ ಪ್ರತಿಭಟನೆ ಕಾರ್ಯಕ್ರಮವನ್ನು ಕೆಲವು ರಾಜಕಾರಣಿಗಳು ರಾಜಕೀಯ  ಬಳಸಿಕೊಳ್ಳುವ ಮೂಲಕ ಕಲಾವಿದರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕಬ್ಬಳಿಗೆರೆ ಭೈರೇಗೌಡ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಇದೇ ತಾಲೂಕಿನವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ಅವರ ಸಾಧನೆ ಮತ್ತು ಅವರು ತಾಲೂಕಿನ ಬಗೆಗೆ ಹೊಂದಿರುವ ಕಾಳಜಿ ಬಗೆಗೆ ಅಪಾರ ಗೌರವವಿದೆ. ಪ್ರತಿಭಟನೆಯ ವೇಳೆ ಅವರೆ ತಮ್ಮ ಹೋರಾಟ ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ನಡೆಯುತ್ತಿಲ್ಲ. ಇದು ಕೇವಲ ಅಭಿವೃದ್ಧಿ ಪರ ಆಯೋಜನೆಗೊಂಡಿರುವ ಧರಣಿ ಎಂದು ಕಾರ್ಯಕ್ರಮದ ಆರಂಭದ ಮೊದಲಿಗೆ ತಿಳಿಸಿದ್ದರು.
ಕಲಾವಿದರಿಗೆ ಅಗೌರವ: ಆದರೆ ಇದೇ ಬೇಡಿಕೆಯನ್ನು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾರವುಶ್, ಬಿಜೆಪಿ ಬಿಜೆಪಿಯ ಎನ್. ರವಿಕುಮಾರ್ ವೇದಿಕೆಯಲ್ಲಿ ಶಾಸಕರನ್ನು ಕುರಿತು ಟೀಕಿಸುವ ಮೂಲಕ ವೇದಿಕೆಯನ್ನು ರಾಜಕೀಯ ಪ್ರೇರಿತಗೊಳಿಸಲು ಯತ್ನಿಸಿದ್ದಾರೆಂದು ಆರೋಪಿಸಿದ ಅವರು, ವಿಶ್ವ ವಿಖ್ಯಾತರನ್ನು ತಮ್ಮ ರಾಜಕೀಯ ದುರುದ್ದೇಶಗಳಿಗೆ ಬಳಸಿಕೊಳ್ಳುವ ಮೂಲಕ ಕಲಾವಿದರಿಗೆ ಅಗೌರವ ತಂದಿದ್ದಾರೆಂದು ದೂರಿದರು.
ತಪ್ಪು ನಿರ್ಧಾರದಿಂದ ಸೋಲು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ನಂತರ ವೇದಿಕೆಯಲ್ಲಿ ಮತದಾರರ ತಪ್ಪು ನಿರ್ಧಾರದಿಂದ ನಾನು ಸೋಲಬೇಕಾಯಿತು ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದೇ ಮತದಾರರನ್ನೇ ಟೀಕಿಸುವ ಮೂಲಕ ಮತದಾರರನ್ನು ಅಪಮಾನಗೊಳಿಸಿದ್ದಾರೆ ಎಂದೂ ಆರೋಪಿಸಿದರು. ಚುನಾವಣೆ ಮುಗಿದು ಏಳುತಿಂಗಳ ನಂತರ ವೇಳೆ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಯೋಗಾರವುಶ್ ಮತದಾರರಿಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಮುಂದೆ ಲೋಕಸಭಾ ಚುನಾವಣೆ ಬರುತ್ತಿರುವ ಸಂದರ್ಭದಲ್ಲಿ ಮತ್ತೆ ಜನತೆ ಬಳಿ ತನ್ನ ನಿಲುವು ವ್ಯಕ್ತಪಡಿಸುವ ಸಲುವಾಗಿ ಈ ಕಾರ್ಯಕ್ರಮ ಕೈಗೊಂಡಿದ್ದಾರೆ ಎಂದರು.
ಈಗಾಗಲೇ 47 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ಅನುಮೋದನೆ ದೊರೆತಿದ್ದು, ಆ ಪೈಕಿ 20 ಕೋಟಿ  ಹಣ ಬಿಡುಗಡೆಯಾಗಿದೆ. ಅರಕಲಗೂಡು- ರಾಮನಾಥಪುರ ಗಡಿ ತನಕ ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡು ಸದ್ಯದಲ್ಲಿಯೇ ಕೆಲಸ ಆರಂಭಗೊಳ್ಳಲಿದೆ. ಈ ವಿಚಾರವನ್ನು ಮನಗಂಡು ತಾನು ಹೋರಾಟ ಮಾಡಿದ ಪರಿಣಾಮ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಗೊಂಡಿದೆ ಎಂದು ಹೇಳಿ ಕ್ಷುಲ್ಲಕ ಪ್ರಚಾರ ಪಡೆಯುವ ಪ್ರಯತ್ನ ಮಾಡಿದ್ದಾರೆಂದು ಆರೋಪಿಸಿದರು.
ಕುಟುಂಬದ ಬಗೆಗೆ ಹಗುರ ಮಾತು: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಡಾ. ಮಂಥರ್ ಗೌಡ ಮಾತನಾಡಿ, ಶಾಸಕ ಎ. ಮಂಜು ಮತ್ತು ತಮ್ಮ ಕುಟುಂಬದ ಬಗೆಗೆ ಹಗುರವಾಗಿ ಮಾತನಾಡಿದ್ದಾರೆ. ಇಂತಹ ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾರವುಶ್ ಅವರ ಘನತೆ ಎಷ್ಟೆಂಬುದನ್ನು ತೋರಿಸಿದೆ. ಕಳೆದ ಹತ್ತು ವರ್ಷಗಳ ಹಿಂದೆ ಅವರು ಹೇಗಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿ ಭ್ರಷ್ಟಾಚಾರ ಎಸಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರು ದಾಳಿ ಮಾಡಿದ್ದ ವಿಚಾರ ಗೌಪ್ಯವಾಗೇನೂ ಉಳಿದಿಲ್ಲ. ಅಪಾರ ಪ್ರಮಾಣದ ಹಣ, ಆಸ್ತಿ ಅವರಿಗೆ ಎಲ್ಲಿಂದ ಬಂದಿದೆ ಎಂದು ಸಾರ್ವಜನಿಕವಾಗಿ ಪ್ರಕಟಿಸಲಿ ಎಂದು ಸವಾಲು ಹಾಕಿದರು.
ಪಪಂಮಾಜಿ ಸದಸ್ಯ ರವಿಕುಮಾರ್, ಶಾಸಕರ ಅಧ್ಯಕ್ಷತೆಯಲ್ಲಿ ಸಿದ್ದಗೊಳ್ಳುತ್ತಿರುವ ವಸತಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಪ್ರತಿ ಅರ್ಹ ಫಲಾನಾಭವಿಗಳಿಂದ 5ಸಾವಿರ ಸ್ವೀಕರಿಸಲಾಗುತ್ತಿದೆ. ಆಧಾರ್ ರಹಿತವಾದ ಸುಳ್ಳು ಆರೋಪಗಳನ್ನು ಮಾಡುತ್ತಾ ರಾಜಕೀಯ ಪ್ರಚಾರ ತೆಗೆದುಕೊಳ್ಳುವ ಕೆಲಸ ಬೇಡ ಎಂದು ಪಪಂ ಸದಸ್ಯ ನಿರಂಜನ್ ನಿಂದಕುಮಾರ್ ತಿಳಿಸಿದರು.
ಪಕ್ಷ ಭೇದ ಮರೆಯುತ್ತಿದ್ದೆವು: ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೀರ್ತಿರಾಜ್ ಮಾತನಾಡಿ, ಇತ್ತೀಚೆಗೆ ಪಟ್ಟಣದಲ್ಲಿ ಆರ್.ಕೆ. ಪದ್ಮನಾಭ ನೇತೃತ್ವದಲ್ಲಿ ಯಾವ ರಾಜಕಾರಣಿಗಳನ್ನು ಬಳಸಿಕೊಳ್ಳದೆ ಸಂಗೀತ ಗಾಯನ ಕಾರ್ಯಕ್ರಮ ಜರುಗಿದ್ದರೆ ನಾವು ಸಹ ಪಕ್ಷ ಭೇದ ಮರೆತು ಪಾಲ್ಗೊಳ್ಳುತ್ತಿದ್ದವು. ಆದರೆ ಮೆರವಣಿಗೆಯಿಂದ ಹಿಡಿದು ವೇದಿಕೆಯ ಮೇಲೆ ಮತ್ತು ಕೆಳ ಭಾಗದಲ್ಲಿ ಪೊಟ್ಯಾಟೋ ಕ್ಲಬ್ ಮುಖಂಡರು, ವಿವಿಧ ಪಕ್ಷಗಳ ಪ್ರಮುಖರು ಪಾಲ್ಗೊಂಡು ಶಾಸಕರು ಮತ್ತು ಕ್ಷೇತ್ರದ ಅಭಿವೃದ್ಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಅವರಲ್ಲಿ ರಾಜಕೀಯ  ಪ್ರಭುದ್ಧತೆ ಹಾಗೂ ಇಚ್ಛಾಶಕ್ತಿ ಇಲ್ಲದಿರುವುದನ್ನು ಸಾಬೀತುಗೊಳಿಸಿದೆ. ಇಂತಹ ಕೀಳುಮಟ್ಟದ ರಾಜಕಾರಣಕ್ಕೆ ಖ್ಯಾತ ಸಂಗೀತ ವಿದ್ವಾಂಸರನ್ನು ಬಳಸಿಕೊಳ್ಳಬಾರದಿತ್ತು ಎಂದು ವಿಷಾಧಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಪಂ ಸದಸ್ಯ ಕೃಷ್ಣಮೂರ್ತಿ, ತಾಲೂಕು ಯುವ ಕಾಂಗ್ರೆಸ್ ಬಾಣದಹಳ್ಳಿ ಗಣೇಶ್, ಯುವ ಕಾಂಗ್ರೆಸ್ ಮುಖಂಡರುಗಳಾದ ಎ.ಸಿ. ಮಧು, ರಘು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.