ಹಾಸನ

'ರೈತರು ಸ್ವಾವಲಂಬಿ ಜೀವನ ನಡೆಸಲಿ'

Published On :

ಅರಕಲಗೂಡು: ಆಧುನಿಕತೆಗೆ ಅವಲಂಬಿತರಾಗಿರುವ ಕೃಷಿಕರು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಗಿರುವ ಅದ್ಭುತ ಗುಣಗಳನ್ನು ಹಾಳುಮಾಡುವ ಜೊತೆಗೆ ಪರಾವಲಂಬಿಗಳಾಗುತ್ತಿದ್ದೇವೆ ಎಂದು ಇಲ್ಲಿನ ದೊಡ್ಡಮಠದ ಮಲ್ಲಿಕಾರ್ಜುನಶ್ರೀ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಉತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಇಂದು ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಸಂಘಟಿತರಾಗುತ್ತಿದ್ದು, ಆರ್ಥಿಕವಾಗಿಯೂ ಸಬಲರಾಗುತ್ತಿದ್ದಾರೆ.
 ಇದು ಒಳ್ಳೆಯದೇ ಆದರೂ ಮಹಿಳೆಯರು ಕೃಷಿಯತ್ತಲೂ ಜಾಗೃತರಾಗುವ ಅವಶ್ಯಕತೆ ಇದೆ ಎಂದರು. ಕೃಷಿಕ ವರ್ಗ ಇತ್ತೀಚಿನ ವರ್ಷಗಳಲ್ಲಿ ಸೋಮಾರಿತನದತ್ತ ಮುಖ ಮಾಡುತ್ತಿದೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ ಮಾತೆಯರು ಕುಟುಂಬವನ್ನು ಸರಿಯಾದ ದಾರಿಯಲ್ಲಿ ಮತ್ತು ಸಂಸ್ಕಾರಯುತವಾಗಿ ಕರೆದೊಯ್ಯುವ ಕಾರ್ಯ ಮಾಡಬೇಕಿದೆ ಎಂದರು.
ಕೃಷಿ ಚಟುವಟಿಕೆ ಬಗ್ಗೆ ಅರಿವಿನಕೊರತೆ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ರೈತರಲ್ಲಿ ಪ್ರೇರಣೆ ಉಂಟು ಮಾಡುವ ಸಲುವಾಗಿ ಕೃಷಿ ಉತ್ಸವವನ್ನು ಯೋಜನೆಯಡಿ ಅಲ್ಲಲ್ಲಿ ಆಯೋಜಿಸುತ್ತಿದ್ದು, ಪ್ರಮುಖವಾಗಿ ಕೃಷಿಕರು ಕೃಷಿ ಚಟುವಟಿಕೆ ಬಗೆಗೆ ಅರಿವಿನ ಕೊರತೆ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಕರಾವಳಿ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಇಲ್ಲ. ಇಲ್ಲಿಯೂ ಈ ಸಮಸ್ಯೆಯಿಂದ ರೈತರು ಹೊರಬರಬೇಕಾದರೆ ಸಂಘಟನೆಯಿಂದ ಸಾಧ್ಯ. ಪರಸ್ಪರ ಸಹಕಾರದಿಂದ ಕೂಲಿ ಕಾರ್ಮಿಕ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ. ಸತೀಶ್ ಮಾತನಾಡಿ, ರೈತರು ಆರ್ಥಿಕವಾಗಿ ಸಬಲರಾಗಬೇಕೆಂದು ನುಡಿದರು. ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸಮಿತಿ ನಿರ್ದೇಶಕ ವಿ.ಎ. ನಂಜುಂಡಸ್ವಾಮಿ ಅವರು ಮಾತನಾಡಿ, ರೈತರು ದಿನ ನಿತ್ಯ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಯುವ ರೈತರು ವಲಸೆ ಹೋಗಲು ಆರಂಭಿಸಿದ್ದಾರೆ. ಇದನ್ನು ತಪ್ಪಿಸಲು ಯುವ ರೈತರನ್ನು ಸದೃಢಗೊಳಿಸಲು ಅಗತ್ಯ ಮಾರ್ಗದರ್ಶನ ಮತ್ತು ಸಹಕಾರದ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬಗೆ ಹರಿಯದ ಸಮಸ್ಯೆಗಳು: ಹಾಸನ ಹಾಲು ಒಕ್ಕೂಟದ ಸಹಾಯಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈತಪರವಾಗಿ ವ್ಯಾಪಕವಾಗಿ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ರೈತನ ಸಮಸ್ಯೆಗಳು ಮಾತ್ರ ಇಂದಿಗೂ ಬಗೆಹರಿದಿಲ್ಲ. ಇದಕ್ಕೂ ರೈತರು ಸಂಘಟಿತರಾಗದಿರುವುದೇ ಮೂಲ ಕಾರಣ. ಆದ್ದರಿಂದ ಸಂಘಟಿತರಾಗಿ ರೈತರು ತಾವೇ ಪರಿಹಾರ ಕಂಡುಕೊಳ್ಳುವಂತಾಗಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವರಾಜ್ ಮಾತನಾಡಿ, ರೈತರು ಕಷ್ಟಪಟ್ಟು ದುಡಿದ ಹಣವನ್ನು ಹೇಗೆ ಬಳಸಬೇಕೆಂಬ ಬಗೆಗೆ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಉತ್ತಮ ಮಾರುಕಟ್ಟೆ ಮತ್ತು ಕೃಷಿ ಇಲಾಖೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ನುಡಿದ ಅವರು, ಕೃಷಿಕರು ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿ, ಮುನ್ನಡೆಸದಿದ್ದರೆ ರೈತನಿಗೆ ಸಂಕಷ್ಟ ಕಟ್ಟಿಟ್ಟದ್ದು ಎಂದು ನುಡಿದರು. ಮಹಿಳೆಯರನ್ನು ಸಂಘಟಿಸುವಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಥಮ ಸ್ಥಾನ ಹೊಂದಿದೆ ಎಂದರು.
ಕುಟುಂಬದಲ್ಲಿ ನೆಮ್ಮದಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ. ಮಂಜು ಮಾತನಾಡಿ, ಪ್ರಸಕ್ತ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವಿಷಯದಲ್ಲಿ ಜಾಗೃತಿ ಉಂಟಾಗುತ್ತಿದ್ದು, ಸ್ತ್ರೀಯರು ಕುಟುಂಬ ನಿರ್ವಹಣೆಯಲ್ಲಿ ಮುಂದೆ ಬಂದಿರುವುದರಿಂದ ಕುಟುಂಬದಲ್ಲಿ ನೆಮ್ಮದಿ ಕಾಣುವಂತಾಗಿದೆ.
 ಸರ್ಕಾರ ಪ್ರಸಕ್ತ 3 ಲಕ್ಷ ವರೆಗಿನ ಸಾಲವನ್ನು ಬಡ್ಡಿ ರಹಿತವಾಗಿ ಸಣ್ಣ ಹಿಡುವಳಿದಾರರಿಗೆ ನೀಡಲು ಮುಂದಾಗಿರುವುದು ರೈತರಿಗೆ ಬಹು ಸಹಕಾರಿಯಾಗಲಿದೆ ಎಂದ ಅವರು, ಸರ್ಕಾರ ದಲ್ಲಾಳಿಗಳ ಹಿಡಿತವನ್ನು ಮಾರುಕಟ್ಟೆಯಲ್ಲಿ ಕಡೆಗಾಣಿಸಲು ಕೃಷಿ ಮಾರುಕಟ್ಟೆ ಮಾಡಿದ್ದು, ರೈತ ಬೆಳೆದ ಬೆಳೆಗೆ ನೈಜ ಬೆಲೆ ದೊರಕಲಿದೆ ಎಂದರು.
ಕಬ್ಬಳಿಗೆರೆ ಬೈರೇಗೌಡ, ಗೋವಿಂದೇಗೌಡ, ಅಜಿತ್ ಹ್ಗೆಡೆ, ವಾರಿಜಾ ವಿ.ಶೆಟ್ಟಿ ಇತರರು ಉಪಸ್ಥಿತರಿದ್ದರು.
ಪ್ರಾತ್ಯಕ್ಷಿಕೆ, ರಾಸುಗಳ ಪ್ರದರ್ಶನ, ಶ್ವಾನ ಪ್ರದರ್ಶನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.