ಎತ್ತಿನಹೊಳೆ ಯೋಜನೆಗೆ ವಿರೋಧ ಸರಿಯಲ್ಲ
ಅರಸೀಕೆರೆ: ಎತ್ತಿನಹೊಳೆ ಏತ ನೀರಾವರಿ ಯೋಜನೆಗೆ ಯಾರು ಕೂಡ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಮೂಲಕ ಮಾಡಿಕೊಂಡು ಸಮುದ್ರದ ಪಾಲಾಗುತ್ತಿದ್ದ ಹೆಚ್ಚುವರಿ ನೀರನ್ನು ಮಾತ್ರ ಬಯಲುಸೀಮೆಯ ಸಂಕಷ್ಟದಲ್ಲಿರುವ ಜನರಿಗೆ ಕುಡಿಯಲು ಪೂರೈಕೆ ಮಾಡಲಾಗುತ್ತದೆ. ಮಹತ್ವವಾದ ಈ ನೀರಾವರಿ ಯೋಜನೆಯನ್ನು ಯಾವುದೇ ಪ್ರದೇಶದ ಜನ ವಿರೋಧಿಸುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ಹರ್ಷ: ಕ್ಷೇತ್ರದ 9 ಗ್ರಾಮಗಳಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯಕ್ಕೆ ರು. 5.55 ಕೋಟಿ ಹಾಗೂ 10 ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆಯ ನಿರ್ಮಾಣಕ್ಕೆ ರು. 2 ಕೋಟಿ ಸೇರಿದಂತೆ ಒಟ್ಟು ರು. 7.55 ಕೋಟಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸರ್ಕಾರದ ಮಂಜೂರಾತಿ: ಅರಸೀಕೆರೆ ವಿಧಾನಸಭಾ ಕ್ಷೇತ್ರವು ಕೃಷ್ಣ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತಿದ್ದು, ನೀರಾವರಿ ಯೋಜನೆ ವಂಚಿತ ಪ್ರದೇಶವಾದ ಕಾರಣ ಸಣ್ಣ ನೀರಾವರಿ ಯೋಜನೆ ಇಲಾಖೆಯ ಎ.ಬಿ.ಐ.ಬಿ.ಪಿ. ವಿಶೇಷ ಅನುದಾನದ ಅಡಿಯಲ್ಲಿ ತಾಲೂಕಿನ ಬೆಳಗುಂಬ ಗ್ರಾಮಕ್ಕೆ ರು. 55 ಲಕ್ಷ, ಹರಪನಹಳ್ಳಿ ಗ್ರಾಮಕ್ಕೆ ರು. 88 ಲಕ್ಷ, ಸೋಮಶೆಟ್ಟಿ ಹಳ್ಳಿ ರು. 55 ಲಕ್ಷ , ಚಿಕ್ಕಮೇಟಿಕುರ್ಕೆ ಗ್ರಾಮಕ್ಕೆ ರು. 65 ಲಕ್ಷ, ವಾಲೇಹಳ್ಳಿ ಗ್ರಾಮಕ್ಕೆ ರು. 52 ಲಕ್ಷ, ಬೇವಿನಮರದ ಹಟ್ಟಿ ಗ್ರಾಮಕ್ಕೆ ರು. 54 ಲಕ್ಷ, ಶಾಂತನಹಳ್ಳಿ ಗ್ರಾಮಕ್ಕೆ ರು. 70 ಲಕ್ಷ, ಮುರುಂಡಿ ಹಟ್ಟಿಗೆ ರು. 56 ಲಕ್ಷ, ಕ್ಯಾತನಹಳ್ಳಿ ಬಣಜಾರ್ ತಾಂಡ್ಯದ ಹತ್ತಿರ ಚೆಕ್ ಡ್ಯಾಂಗಳು ಸೇರಿದಂತೆ ಒಟ್ಟು 9 ಗ್ರಾಮಗಳಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಒಟ್ಟು 5.55 ಕೋಟಿ ರೂಗಳ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ ಎಂದರು.
ರು. 2 ಕೋಟಿಯ ಯೋಜನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿ ಯೋಜನೆಯಲ್ಲಿ ಕ್ಷೇತ್ರದ ಕಸಬಾ ಹೋಬಳಿಯ ಗುತ್ತಿನಕೆರೆ, ಕೆರೆಕೋಡಿಹಳ್ಳಿ ಸೇರಿದಂತೆ ಒಟ್ಟು 10 ಗ್ರಾಮಗಳಿಗೆ ತಲಾ 20 ಲಕ್ಷ ರುಗಳಂತೆ ಗ್ರಾಮದ ಒಳಭಾಗದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟು ರು. 2 ಕೋಟಿ ಕ್ರಿಯಾಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಪಂ ಸದಸ್ಯ ಹುಚ್ಚೇಗೌಡ, ಜಿಲ್ಲಾ ಹಿರಿಯ ಉಪಾಧ್ಯಕ್ಷರ ಹಿರಿಯೂರು ಶಂಕರಲಿಂಗಪ್ಪ, ಜಿಲ್ಲಾ ಅಲ್ಪಸಂಖ್ಯಾತರ ವಿಭಾಗಕ್ಕೆ ಕಾರ್ಯದರ್ಶಿ ಮೊಹಮದ್ ಅಕ್ಬರ್, ತಾಲೂಕು ಅಧ್ಯಕ್ಷ ಎನ್.ಎಸ್. ಸಿದ್ದರಾಮಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಬಾಬು, ಯುವ ಜನತಾ ದಳ ಘಟಕದ ತಾಲೂಕು ಅಧ್ಯಕ್ಷ ಬಿ.ಎಸ್. ಅಶೋಕ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಇದ್ದರು.
ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಶಂಕರಲಿಂಗಪ್ಪ ನೇಮಕ
ಸುಮಾರು 20 ವರ್ಷಗಳಿಂದ ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯೂರು ಶಂಕರಲಿಂಗಪ್ಪ ಅವರಿಗೆ ಜಿಲ್ಲಾ ಹಿರಿಯ ಉಪಾಧ್ಯಕ್ಷರ ಸ್ಥಾನಕ್ಕೆ ಮತ್ತು ಮೊಹಮದ್ ಅಕ್ಬರ್ ಅವರನ್ನು ಜಿಲ್ಲಾ ಅಲ್ಪಸಂಖ್ಯಾತರ ವಿಭಾಗಕ್ಕೆ ಕಾರ್ಯದರ್ಶಿಯ ಸ್ಥಾನಕ್ಕೆ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೆಗೌಡರು ನೇಮಕ ಮಾಡಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದರು.
ತೆರವಾಗಿದ್ದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮಾಜಿ ಪುರಸಭಾಧ್ಯಕ್ಷ ಎನ್.ಎಸ್. ಸಿದ್ದರಾಮಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಬಾಬು, ಯುವ ಜನತಾ ದಳ ಘಟಕದ ತಾಲೂಕು ಅಧ್ಯಕ್ಷರಾಗಿ ಬಿ.ಎಸ್.ಅಶೋಕ್, ಉಪಾಧ್ಯಕ್ಷರಾಗಿ ಮಾಡಾಳು ಚಂದ್ರು, ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಇವರುಗಳನ್ನು ನೇಮಕ ಮಾಡಲಾಗಿದೆ. ಕಾರ್ಯಕಾರಿ ಸಮಿತಿಯೂ ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ ಎಂದು ಶಾಸಕರು ತಿಳಿಸಿದರು.
ಸಿಎಂಗೆ ಅಭಿನಂದನೆ
ತಮ್ಮ ಜನಪರ ಹೋರಾಟಕ್ಕೆ ಸ್ಪಂದಿಸಿ ಸಹಕಾರ ನೀಡಿರುವ ಮುಖ್ಯಮಂತ್ರಿಗಳು ಮತ್ತು ಇಲಾಖೆಯ ಸಚಿವರಿಗೆ ತಾವು ಕ್ಷೇತ್ರದ ಜನತೆ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

