ಹುಣಸಿನ ಕೆರೆ ಅಭಿವೃದ್ಧಿಗೆ ಕ್ರಮ
ಹಾಸನ: ಹುಣಸಿನಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್. ತಂಗಡಗಿ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು ವಿಧಾನಪರಿಷತ್ತಿನಲ್ಲಿ ಈ ಬಗ್ಗೆ ಪ್ರಶ್ನಿಸಿ, ಹಾಸನದಲ್ಲಿ ಉಳಿದಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ, ಪರಿಸರ ಸಮತೋಲನ ಕಾಪಾಡುವುದು ಅಗತ್ಯವಾಗಿದೆ. ಹಾಸನದ ಇತಿಹಾಸ ಪ್ರಸಿದ್ಧ ಹುಣಸಿನ ಕೆರೆಯಲ್ಲಿ ಸುಮಾರು 60 ಕ್ಕೂ ಹೆಚ್ಚು ಪಕ್ಷಿ ಪ್ರಬೇದಗಳು ವಿದೇಶಿ ಹಕ್ಕಿಗಳ ಪ್ರತಿ ವರ್ಷ ಆಗಮಿಸುತ್ತಿದ್ದು, ಇದು ಪಕ್ಷಿಧಾಮದ ರೂಪವನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.
ಇಂತಹ ಕೆರೆಯು ನಗರಕ್ಕೆ ಹೊಂದಿಕೊಂಡಿದ್ದು ಬಹು ದೊಡ್ಡದಾಗಿದ್ದು ಇದನ್ನು ಸ್ವಚ್ಛಗೊಳಿಸಿ ಈ ಕೆರೆಯ ಸುತ್ತ ಪಾರ್ಕ್ ಮಾಡಿ ಬೋಟಿಂಗ್ ವ್ಯವಸ್ಥೆ ಮಾಡಿ, ಪ್ರವಾಸಿ, ಪಕ್ಷಿ ತಾಣವನ್ನಾಗಿ ಮಾಡಬೇಕು. ನಗರದ ಹಾಗೂ ಸದರಿ ಕೆರೆಯು ರಿಂಗ್ ರಸ್ತೆಗೆ ಮತ್ತು ಬೇಲೂರು ರಸ್ತೆಗೆ ಹತ್ತಿರವಾಗಿರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು. ಇದರ ಹತ್ತಿರ ಉದ್ದೇಶಿತ ಪ್ಲಾನಿಟೋರಿಯಂಗೆ (ತಾರಾ ವೀಕ್ಷಣಾಲಯ) ಅನುದಾನ ಕಲ್ಪಿಸಬೇಕೆಂದು ಸಚಿವರನ್ನು ಒತ್ತಾಯಿಸಿದರು.
ಸಚಿವರ ಭರವಸೆ: ನಂತರ ಉತ್ತರಿಸಿದ ಸಚಿವರು, ಹಾಸನ ಜಿಲ್ಲೆ ಹಾಸನ ತಾಲೂಕು ಹುಣಸಿನಕೆರೆಯು ಹಾಸನ ನಗರಕ್ಕೆ ಹೊಂದಿಕೊಂಡಂತಿದ್ದು, ಕೆರೆಯ ಮೂಲ ಅಚ್ಚುಕಟ್ಟು ಒಟ್ಟು 85.60 ಹೆಕ್ಟೇರ್. ಪ್ರಸ್ತುತ ಕೆರೆಯ ಅಚ್ಚುಕಟ್ಟಿನಲ್ಲಿ ವಸತಿ ಸಮುಚ್ಛಯವಿದ್ದು, ಈಗ 25. ಹೆಕ್ಟೇರ್ನಷ್ಟು ಅಚ್ಚುಕಟ್ಟು ಪ್ರದೇಶವಿದೆ. ಇತ್ತೀಚಿನ ದಿನಗಳಲ್ಲಿ ಉಳಿಕೆ ಪ್ರದೇಶದಲ್ಲೂ ಸಹಾ ಬೆಳೆ ಬೆಳೆಯುತ್ತಿಲ್ಲ. ಕಳೆದ 5 ಸಾಲುಗಳಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ಬೆಳೆಯನ್ನು ಬೆಳೆದಿಲ್ಲ. ಹುಣಸಿನಕೆರೆಯ ಕೋಡಿ ಹಳ್ಳದ ಸೇತುವೆ ಹಾಗೂ ಏರಿ ಅಭಿವೃದ್ಧಿ ಕಾಮಗಾರಿಯನ್ನು ರು. 30 ಲಕ್ಷ ಅಂದಾಜಿನೊಂದಿಗೆ 4702 ಕೆರೆಗಳ ಆಧುನೀಕರಣ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾಮಗಾರಿ ವಿವರಣೆ: ಈ ಕಾಮಗಾರಿಯಲ್ಲಿ ಜಂಗಲ್ ಕತ್ತರಿಸುವುದು ಹಾಗೂ ಏರಿ ಅಭಿವೃದ್ಧಿಗೆ ರು. 3.50 ಲಕ್ಷ, ಕೋಡಿ ಹಾಗೂ ಟೋಲ್ ನಿರ್ಮಾಣಕ್ಕೆ ರು. 4.50 ಲಕ್ಷ, ಹೊಸ ಸೇತುವೆ ನಿರ್ಮಾಣಕ್ಕೆ ರು. 17.75 ಲಕ್ಷ, ಏಪ್ರಾನ್ ನಿರ್ಮಾಣಕ್ಕೆ ರು. 4 ಲಕ್ಷ, ಸಂರಕ್ಷಣಾ ಗೋಡೆ ನಿರ್ಮಾಣಕ್ಕೆ ರು. 6 ಲಕ್ಷ ಮತ್ತು ಇತರೇ ಖರ್ಚುಗಳು ರು. 1.40 ಲಕ್ಷ ಕಾಮಗಾರಿ ನಿರ್ವಹಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಕಾಮಗಾರಿಯು ಪೂರ್ಣಗೊಂಡಿದ್ದು, ಮಾ. 2013ರ ಅಂತ್ಯಕ್ಕೆ ರು. 37.15 ಲಕ್ಷ ವೆಚ್ಚವಾಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಅನುದಾನದಿಂದ ಹಾಸನ ನಗರದ ಹುಣಸಿನ ಕೆರೆ ಅಭಿವೃದ್ಧಿಗಾಗಿ ಕೆ.ಟಿ.ಟಿ.ಪಿ ಕಾಯ್ದೆಯನುಸಾರ ಟೆಂಡರ್ ಕರೆದು ಕೆರೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿವರವಾದ ವರದಿ ತಯಾರಿಸಲು (ಡಿ.ಪಿ.ಆರ್) ಕನ್ಸಲ್ಟೆನ್ಸಿಯನ್ನು 2012ರ ಜು. 28ರಂದು ಹಾಸನದ ಎಸ್.ಎಸ್. ಬಿಲ್ಡರ್ಸ್ ಸಂಸ್ಥೆಯನ್ನು ನೇಮಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಹೇಳಿದರು.
ಅದರಂತೆ, ಎಸ್.ಎಸ್. ಬಿಲ್ಡರ್ಸ್ ಸಂಸ್ಥೆ ಕೆರೆಯನ್ನು ಸರ್ವೇ ಮಾಡಿ, ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದಾರೆ. ಇವರಿಗೆ 2013ರ ಮಾ.11 ಹಾಗೂ ಮೇ. 14ರಂದು ಎರಡು ಸೂಚನಾ ಪತ್ರಗಳನ್ನು ನೀಡಲಾಗಿದೆ. ಒಂದು ತಿಂಗಳೊಳಗೆ ಡಿ.ಪಿ.ಆರ್ ತಯಾರಿಸಿ ಸಲ್ಲಿಸುವಂತೆ ಸೂಚಿಲಾಗಿತ್ತು. ಅವರು ಡಿ.ಪಿ.ಆರ್. ಸಲ್ಲಿಸಲು ವಿಫಲವಾದಲ್ಲಿ ಟೆಂಡರ್ ಅನ್ನು ರದ್ದುಪಡಿಸಿ, ಮರು ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

