ಹಾಸನ

'ಎನ್‌ಎಸ್‌ಎಸ್ ಶಿಬಿರ ಅದ್ಭುತ ಅನುಭವ'

Published On :

ಆಲೂರು: ಸೇವಾ ಮನೋಭಾವನೆಯನ್ನು ಪ್ರತಿಯೊಬ್ಬರಲ್ಲೂ ಬೆಳೆಸುವ ಎನ್.ಎಸ್.ಎಸ್. ಶಿಬಿರವು ವಿದ್ಯಾರ್ಥಿಗಳ ಬದುಕಿಗೆ ಅದ್ಭುತ ಅನುಭವ ನೀಡುತ್ತದೆ ಎಂದು ಪ್ರಾಂಶುಪಾಲ ಪ್ರೊ. ಸಿ.ಬಿ. ಚಂದ್ರಪ್ಪ ತಿಳಿಸಿದರು.
ತಾಲೂಕಿನ ಹೊನ್ನೇನಹಳ್ಳಿ ಕೂಡಿಗೆಯಲ್ಲಿ ಇತ್ತೀಚೆಗೆ ನಡೆದ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮುಂದಿನ ಜೀವನಕ್ಕೆ ಅವಶ್ಯಕವಿರುವ ಆತ್ಮಬಲ, ಮನೋಸ್ಥೈರ್ಯ ಬೆಳೆಸುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದರು.
ವ್ಯಕ್ತಿತ್ವ ವಿಕಸನಗೊಳಿಸಿ: ಮಕ್ಕಳಲ್ಲಿ ಧನಾತ್ಮಕ ಅಂಶ ಬೆಳೆಸಿ, ಗ್ರಾಮಗಳ ನೈಜದರ್ಶನ ಮೂಡಿಸುವುದರ ಜತೆಗೆ ಶ್ರಮಾದಾನದಿಂದ ಉತ್ತಮ ಬದುಕು ರೂಪಿಸಿಕೊಳ್ಳುವಂತಹ ವ್ಯಕ್ತಿತ್ವ ವಿಕಸನಗೊಳಿಸಿ ಸಮಾಜಕ್ಕೆ ಆದರ್ಶ ವಿದ್ಯಾರ್ಥಿಗಳನ್ನು ನೀಡಬೇಕೆಂದು ತಿಳಿಸಿ ದರು.
ಕೊಡುಗೆ ನೀಡಬೇಕು: ತಾಲೂಕು ಪಂಚಾಯ್ತಿ ಸದಸ್ಯ ಎಸ್.ಸಿ. ಕಾಂತರಾಜು ಮಾತನಾಡಿ,  ಎನ್.ಎಸ್.ಎಸ್. ಶಿಬಿರಗಳಿಂದ ವಿದ್ಯಾರ್ಥಿಗಳು ನಿಸ್ವಾರ್ಥ ಸೇವಾ ಮನೋಭಾವನೆ ಬೆಳೆಸಿಕೊಳ್ಳುತ್ತಾರೆ. ಇದರಿಂದ ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸ್ಥಾನಕ್ಕೆ ಏರಿದರೂ, ಅಲ್ಲಿಯೂ ಸಹ ಸಮಾಜ ಸೇವಾ ಭಾವವನ್ನು ಬಿಡದೇ ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡಬೇಕೆಂದರು.
ಕಿತಬೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಜ್ಜೇಗೌಡ, ದಲಿತ ಮುಖಂಡ ಚಂದ್ರ ಪ್ರಸಾದ ಮೇರ್ವೆ, ಪ್ರೊ. ಎನ್.ಪುಟ್ಟರಾಜು, ಕೆ. ಚಂದ್ರಯ್ಯ, ಕೆ.ಕೆ. ಸಿದ್ದೇಗೌಡ ಇತರರು ಇದ್ದರು.
ಅಕ್ರಮ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ: ಒಬ್ಬನ ಬಂಧನ
ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿ ಸಾಣೇನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 60,000 ಲೀಟರ್ ಬೆಲ್ಲದ ಕೊಳೆ ಮತ್ತು 300 ಲೀಟರ್ ಭಟ್ಟಿ ಸರಾಯಿ ಹಾಗೂ ಕಳ್ಳಭಟ್ಟಿ ತಯಾರಿಸುವ ಸಲಕರಣೆಗಳೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ 9.15ರಲ್ಲಿ ಹಾಸನದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಿ, ಸಾಣೇನಹಳ್ಳಿ ಗ್ರಾಮದ ಎಸ್.ಎಂ. ಹರೀಶ ಎಂಬುವರ ಮನೆಗೆ ಹೊಂದಿಕೊಂಡಿರುವ ಬಚ್ಚಲು ಮನೆಯಲ್ಲಿ 60,000 ಲೀಟರ್ಬೆಲ್ಲದ ಕೊಳೆ ಮತ್ತು 300 ಲೀಟರ್ ಭಟ್ಟಿ ಸರಾಯಿ ಹಾಗೂ ಕಳ್ಳಭಟ್ಟಿ ತಯಾರಿಸುವ ಸಲಕರಣೆಗಳನ್ನು ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಿರುದ್ದ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
 ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಸುನೀಲ್, ಅಬಕಾರಿ ನಿರೀಕ್ಷಕ ಸಂತೋಷ್, ಬೇಲೂರು ವಲಯದ ನಿರೀಕ್ಷಕ ಎ.ಎಚ್. ಕೃಷ್ಣಮೂರ್ತಿ, ಅಬಕಾರಿ ಉಪ ನಿರೀಕ್ಷಕ ನೂರ್‌ಜಹಾರ ಇದ್ದರು.
ಉಚಿತ ಕಣ್ಣಿನ ತಪಾಸಣೆ
ಹಾಸನ: ಪಿಕ್ಚರ್ ಪ್ಯಾಲೇಸ್ ಹಾಗೂ ವಾಸನ್ ಐಕೇರ್ ಆಶ್ರಯದಲ್ಲಿ ನಗರದ ಕಟ್ಟಿನಕೆರೆ ಮಾರ್ಕೇಟ್ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಎರಡು ದಿನದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಪಿಕ್ಚರ್ ಪ್ಯಾಲೇಸ್‌ನ ಎ.ಪಿ. ವಿಜಯಲಕ್ಷ್ಮಿ ಟೇಪ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು. ಬೆಳಗ್ಗೆ 10ರಿಂದ ಪ್ರಾರಂಭವಾದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಸಾವಿರಾರು ಜನರು ಇದರ ಸದುಪಯೋಗ ಪಡೆದುಕೊಂಡರು. ಕಣ್ಣು ಪರೀಕ್ಷಿಸಿಕೊಂಡರು. ನಂತರ ವಾಸನ್ ಐಕೇರ್‌ನಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ವೈದ್ಯರು ತಿಳಿಸಿದ್ದಾರೆ. ಪಿಕ್ಚರ್ ಪ್ಯಾಲೇಸ್ ಮಾಲೀಕ ಶ್ರೀರಾಮ್, ಗುರುಪ್ರಸಾದ್ ಗುರೂಜಿ, ಹಾಸನ್ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್  ಇದ್ದರು.
ದನಗಳ ಜಾತ್ರೆ, ವಸ್ತು ಪ್ರದರ್ಶನ ನೀರಸ ಮುಕ್ತಾಯ
ಸಕಲೇಶಪುರ: 56ನೇ ವರ್ಷದ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನ ನೀರಸವಾಗಿ ಇತ್ತೀಚೆಗೆ ಮುಕ್ತಾಯಗೊಂಡಿದೆ. ಈ ಬಾರಿಯ ಜಾತ್ರೆಯು ಕೇವಲ ಅಹಿತಕರ ಘಟನೆಗಳಿಗೆ ಮಾತ್ರ ಸುದ್ದಿಯಾಗಿತ್ತು. ಸಾರ್ವಜನಿಕರ ಪ್ರತಿಕ್ರಿಯೆ ನೀರಸವಾಗಿತ್ತು.
ಹಿಂದೆಂದೂ ಕಾಣದಂತಹ ಜಾಯಿಂಟ್ ವ್ಹೀಲ್ ದುರಂತದಿಂದ ನಾಲ್ವರು ಗಾಯಗೊಂಡಿದ್ದರು. ಸಾಲದಂತೆ ಪ್ರಭಾವಿಯೊಬ್ಬರು ಜಾತ್ರೆಯ ಗುತ್ತಿಗೆಯ ಕಾಲಾವಧಿ ಮುಗಿದಿದ್ದರಿಂದ ಜಾತ್ರೆ ತೆರವುಗೊಳಿಸಲು ಯತ್ನಿಸಿದ ಪುರಸಭೆಯ ಅಧಿಕಾರಿಗಳಿಗೆ ಧಮಕಿ ಹಾಕಿದ ಸುದ್ದಿ ಪಟ್ಟಣದೆಲ್ಲೆಡೆ ಹರಿದಾಡುತ್ತಿದೆ.
ಜಾತ್ರೆಯನ್ನು ಕೆಲವರು ಸ್ವಪ್ರತಿಷ್ಠೆಗಾಗಿ ತೆಗೆದುಕೊಂಡಿದ್ದು, ಇನ್ನು ಕೆಲವರು ರಾಜಕೀಯವಾಗಿ ಜಾತ್ರೆಯನ್ನು ಮುಗಿಸಲು ಹೊರಟಿದ್ದು ಜಾತ್ರೆಗೆ ಕಪ್ಪುಚುಕ್ಕಿಯಾಯಿತು ಎನ್ನಲಾಗಿದೆ.
ಪ್ರತಿವರ್ಷ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನದ ಮುಕ್ತಾಯ ಸಮಾರಂಭವು ಜಾತ್ರೆಗೆ ಮೆರುಗನ್ನು ತರುತ್ತಿತ್ತು. ಆದರೆ, ಈ ಬಾರಿ ಸಮಾರೋಪ ಸಮಾರಂಭ ನಡೆಯಲೇ ಇಲ್ಲ. ಇಷ್ಟು ಸಾಲದಂತೆ ಕ್ರೀಡಾಕೂಟಗಳು ಸರಿಯಾಗಿ ನಡೆಯಲಿಲ್ಲ. ಈ ನ್ಯೂನತೆಗಳನ್ನು ಸರಿಪಡಿಸಬೇಕಾಗಿದ್ದ ಪುರಸಭೆ ಅಧ್ಯಕ್ಷರು ಹಾಗೂ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ಕೇವಲ ಆರೋಪ ಪ್ರತ್ಯಾರೋಪದಲ್ಲಿ ಮುಳುಗಿದ್ದರಿಂದ 56ನೇ ವರ್ಷದ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನ ನೀರಸವಾಗಿ ಮುಕ್ತಾಯಗೊಂಡಿದೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾಅಧಿಕಾರಿಗಳ ನೇಮಕ: ಡಿಸಿ
ಹಾಸನ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗಾಗಿ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಬೇಲೂರು ಪುರಸಭೆಗೆ ಬೇಲೂರು ತಹಸೀಲ್ದಾರ್, ಅರಕಲಗೂಡು ಪಟ್ಟಣ ಪಂಚಾಯ್ತಿಗೆ ಅರಕಲಗೂಡು ತಹಸೀಲ್ದಾರ್, ಆಲೂರು ಪಟ್ಟನ ಪಂಚಾಯ್ತಿಗೆ ಆಲೂರು ತಹಸೀಲ್ದಾರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಜಿಲ್ಲೆಯ ಹಾಸನ ನಗರಸಭೆ, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ, ಬೇಲೂರು ಪರಸಭೆಗಳು ಹಾಗೂ ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯ್ತಿಗಳಿಗೆ ಈ ಹಿಂದೆ ಚುನಾವಣೆ ನಡೆಸಲಾಗಿತ್ತು. ಆ.24, 2013ರ ಸರ್ಕಾರಿ ಪತ್ರದಂತೆ ಹಾಸನ, ಚನ್ನರಾಯಪಟ್ಟಣ, ಸಕಲೇಶಪುರ, ಹೊಳೆನರಸೀಪುರ ಮತ್ತು ಅರಸಿಕೆರೆ  ನಗರ ಸ್ಥಳಿಯ ಸಂಸ್ಥೆಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗಳನಗಳನ್ನು ಈಗಾಗಲೇ ನಡೆಸಲಾಗಿದೆ.
ಇನ್ನುಳಿದಂತೆ, ಸರ್ಕಾರದ ಅಧಿಸೂಚನೆಯಂತೆ ಫೆ.26, 2014 ರನ್ವಯ ಆಲೂರು, ಅರಕಲಗೂಡು, ಬೇಲೂರು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯನ್ನು ನಡೆಸಬೇಕಿದ್ದು ಅದಕ್ಕಾಗಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ವೇಳಾಪಟ್ಟಿ ಹೊರಡಿಸುವಂತೆ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಭೆಗೆ ಸದಸ್ಯರ ಗೈರು: ಅಧ್ಯಕ್ಷರಿಗೆ ಮುಖಭಂಗ
ಸಕಲೇಶಪುರ: ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅನ್ನೋ ಗಾದೆ ಬುಧವಾರ ಪಟ್ಟಣ ಪುರಸಭೆ ಬಜೆಟ್ ಸಭೆಯಲ್ಲಿ ಅಕ್ಷರಶಃ ನಿಜವಾಯಿತು.
ಪುರಸಭೆ ಅಧ್ಯಕ್ಷ ಸತೀಶ್ ಅವರು ಬಜೆಟ್ ಮಂಡಿಸಲು ತಯಾರಿ ನಡೆಸಿದ್ದರು. ಆದರೆ, ಅಡಳಿತಾರೂಢ ಜೆಡಿಎಸ್ ಪಕ್ಷದ ಬಹುತೇಕ ಮತ್ತು ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ವಿರುದ್ಧ ಮುನಿಸಿಕೊಂಡು ಸಭೆಗೆ ಗೈರು ಹಾಜರಾಗಿ  ಮುಖಭಂಗ ಅನುಭವಿಸಬೇಕಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಬಜೆಟ್ ಮಂಡನೆ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಕೆಲ ದಿನಗಳಿಂದ ಅಧ್ಯಕ್ಷರು ಪದವಿಯಿಂದ ಇಳಿಯಬೇಕು ಎಂದು ಒತ್ತಾಯಿಸಿ, ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದರು. ಆದರೆ, ಮುಖಂಡರು ಲೋಕಸಭಾ ಚುನಾವಣೆ ನಂತರ ಈ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದರು. ಪಕ್ಷದ ವರಿಷ್ಠರ ಬಗ್ಗೆ ಅಸಮಾಧಾನಗೊಂಡ ಪಕ್ಷದ ಸದಸ್ಯರು ಸಭೆಗೆ ಗೈರು ಹಾಜರಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ನಿರ್ಧರಿಸಿದ್ದರು. ಚುನಾವಣೆ ನೀತಿ ಸಂಹಿತೆ ಇದಕ್ಕೆ ತಣ್ಣೀರು ಎರಚಿತು. ಕೆಜೆಪಿ ಪಕ್ಷದ ಸದಸ್ಯರಾದ ರುದ್ರಕುಮಾರ್ ಮತ್ತು ರೇಖಾ ದಂಪತಿಗಳು ಸಭೆಗೆ ಹಾಜರಾಗಿದ್ದರು.
ಕುಸ್ತಿಗೆ ಜೋಡಿ ಕಟ್ಟುವಿಕೆ
ಮೈಸೂರು: ತಾಲೂಕು ಕೆ. ಹೆಮ್ಮನಹಳ್ಳಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾ.23ರ ಮಧ್ಯಾಹ್ನ 2.30ರಿಂದ ನಡೆಯುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಮಾ.9ರ ಬೆಳಗ್ಗೆ 11ಕ್ಕೆ ಕುಸ್ತಿ ಜತೆ ಕಟ್ಟುವ ಕಾರ್ಯಕ್ರಮವನ್ನು ನಗರದ ದೊಡ್ಡಕೆರೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಅನಂತವರ್ಧನ ತಿಳಿಸಿದ್ದಾರೆ. ಮೊ. 91414 51323 ಸಂಪರ್ಕಿಸಬಹುದು.
ಬಹುಮಾಧ್ಯಮ ಕಾರ್ಯಾಗಾರ
ಮೈಸೂರು ವಿಶ್ವವಿದ್ಯಾನಿಲಯದ ಬಹುಮಾಧ್ಯಮ ಕಲಿಕ ಸಂಪನ್ಮೂಲ ಕೇಂದ್ರವು ಆಯೋಜಿಸಿರುವ ಬಹುಮಾಧ್ಯಮ ಬೋಧನಾ ಕಲಿಕಾ ಸಂಪನ್ಮೂಲ ಸೃಷ್ಟಿ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭ ಮಾ.7ರ ಸಂಜೆ 4ಕ್ಕೆ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದೆ. ಕುಲಸಚಿವ ಪ್ರೊ.ಡಿ. ಶ್ರೀಜಯದೇವರಾಜ ಅರಸ್ ಅಧ್ಯಕ್ಷತೆ ವಹಿಸುವರು.
ಶನೈಶ್ಚರಸ್ವಾಮಿ ಉತ್ಸವ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮದ ಸಮೀಪವಿರುವ ರಾಮೇನಹಳ್ಳಿಯಲ್ಲಿ ಮಾ. 8ರಂದು ಶ್ರೀ ಶನೈಶ್ಚರ ಸ್ವಾಮಿಯ ಶಿವರಾತ್ರಿ ಉತ್ಸವವು ನಡೆಯಲಿದೆ. ಆ ದಿನ ಬೆಳಗ್ಗೆ 7ರಿಂದ 10ರವರೆಗೆ ಹೋಮ, ಮಧ್ಯಾಹ್ನ 3ಕ್ಕೆ ಶ್ರೀ ಶನೈಶ್ಚರಸ್ವಾಮಿಯವರ ಕಳಸವನ್ನು ಅಲಂಕೃತ ಮಂಟಪದಲ್ಲಿ ಗಂಗಾಸ್ಥಾನದಿಂದ ಬಸವ ಮತ್ತು ವಾದ್ಯಗೋಷ್ಠಿಗಳ ಸಮೇತ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸೇರುವುದು. ಶಾಸಕ ಚಿಕ್ಕಮಾದು ಉತ್ಸವವನ್ನು ಉದ್ಘಾಟಿಸುವರು. ಹುಣಸೂರು ತಾಲೂಕಿನ ಮಾದಹಳ್ಳಿಯ ಉಕ್ಕಿನಾಕಾಂತ ಮಠದ ಶಿವಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಭಕ್ತಾದಿಗಳು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸುವಂತೆ ಕೋರಿದ್ದಾರೆ.
ಗುಣಮಟ್ಟದ ಶಿಕ್ಷಣ ನೀಡಿ: ಶಿವಣ್ಣ ಆಗ್ರಹ
ಕೆ.ಆರ್. ನಗರ: ಎಸ್‌ಡಿಎಂಸಿ ಮತ್ತು ಪೋಷಕರ ಸಹಕಾರದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರತ್ತ ಶಿಕ್ಷಕರು ಗಮನ ನೀಡಬೇಕು ಎಂದು ಹಂಪಾಪುರ ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ  ಹೇಳಿದರು. ತಾಲೂಕಿನ ಮಂಚನಹಳ್ಳಿ ಸಹಿಪ್ರಾ ಶಾಲೆಯಲ್ಲಿ ಮಂಗಳವಾರ ದಾನಿ ಶ್ರೀನಿವಾಸ್ ನೀಡಿದ ತಟ್ಟೆ ಮತ್ತು ಲೋಟ ವಿತರಿಸಿ ಮಾತನಾಡಿದರು. ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಅವರ ತಾಯಿ ಪಾರ್ವತಮ್ಮ ಮಾತನಾಡಿದರು. ಎಸ್‌ಡಿಎಂ ಸದಸ್ಯ ಮಾಯಿಗೇಗೌಡ, ಮುಖ್ಯ ಶಿಕ್ಷಕ ದೇವರಾಜೇಗೌಡ, ಶಿಕ್ಷಕರಾದ ಸ್ವಾಮಿ, ಸೀತಾ, ಧರ್ಮೇದ್ರಬಾಬು, ಉಮಾದೇವಿ, ವಿದ್ಯಾರ್ಥಿಗಳು ಇದ್ದರು.
ವಿಜ್ಞಾನ ವಸ್ತು ಪ್ರದರ್ಶನ
ನಂಜನಗೂಡು: ಪಟ್ಟಣದ ಗುರುಭವನ ಆವರಣದಲ್ಲಿ ತಾಲೂಕಿನ 153 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು 12 ಖಾಸಗಿ ಶಾಲೆಯ ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪುರುಷೋತ್ತಮ್ ಉದ್ಘಾಟಿಸಿದರು.
ಗ್ರಾಮಾಂತರ ಪ್ರದೇಶದ ಮಕ್ಕಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಾವೇನು ಕಡಿಮೆ ಇಲ್ಲ, ಎಂಬದನ್ನು ಸಾಬೀತು ಪಡಿಸಿದ್ದಾರೆ. ನೂತನ ಆವಿಷ್ಕಾರಗಳಾದ ಸೌರಶಕ್ತಿ, ಅಂತರ್ಜಾಲ, ಸೇರಿದಂತೆ 200ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆ ಪ್ರದರ್ಶಿಸಿರುವುದು ಶ್ಲಾಘನೀಯ. ಎಲ್ಲರಲ್ಲೂ ಪ್ರತಿಭೆ ಇದೆ. ಅದು ಹೊರಹೊಮ್ಮಲು ಶಿಕ್ಷಕರು, ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.
ಬಿಆರ್‌ಸಿ ಅಪರ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಮುದ್ದುಮಾದೇಗೌಡ, ಉಪಾಧ್ಯಕ್ಷ ಧರ್ಮಾರತ್ನಾಕರ, ಅಕ್ಷರ ದಾಸೋಹ ಮಹೇಶ್, ರಂಗನಾಥ್, ಕಾರ್ಯದರ್ಶಿ ಶಿವಸ್ವಾಮಿ, ಮಹದೇವಸ್ವಾಮಿ, ಮಲ್ಲೇಶ್, ಕುಮಾರಸ್ವಾಮಿ, ಚೆಲುವಮೂರ್ತಿ ಶಿಕ್ಷಕರು ಇದ್ದರು.
10ನೇ ವಾರ್ಡ್‌ನಲ್ಲಿ ನೂತನ ಉದ್ಯಾನವನಕ್ಕೆ ಚಾಲನೆ
ಹಾಸನ: ನಗರದ 10ನೇ ವಾರ್ಡ್‌ನ ಉದ್ಯಾನವನವನ್ನು ನಗರಸಭೆಯ ಅಧ್ಯಕ್ಷರಾದ ಶ್ರೀವಿದ್ಯಾ ಆನಂದ್ ಟೇಪ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆಟೋಟ ವಸ್ತುಗಳನ್ನು ನಗರಸಭೆ ನೀಡಿದೆ. ಸ್ವಚ್ಛತೆಯಲ್ಲಿ ಹಾಸನ ನಗರ ಮಾದರಿಯಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು. ನನ್ನ ಅವಧಿಯಲ್ಲಿ ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು.
ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, 10ನೇ ವಾರ್ಡ್‌ನಲ್ಲಿ ಜನರ ಸಮಸ್ಯೆ ಆಲಿಸಲು ವಾರ್ಡ್ ಕೇರಿ ತೆರೆಯಲಾಗಿದೆ. ಉದ್ಯಾನವನವನ್ನು ಉತ್ತಮವಾಗಿ ನಿರ್ಮಿಸಲಾಗಿದ್ದು, ಇದರ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸುವುದಾಗಿ ಹೇಳಿದರು. ವಾರ್ಡ್ ಸದಸ್ಯ ಯಶವಂತ್ ಜನರ ಸಮಸ್ಯೆಗೆ ಸ್ಪಂದಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಗರಸಭೆ ಸದಸ್ಯ ಯಶವಂತ್ ಪ್ರಾಸ್ತಾವಿಕ ನುಡಿಯಲ್ಲಿ ಕೆಲ ಮನವಿಯನ್ನು ಮಾಡಿದರು. ಕಸಾಪ ಮಾಜಿ ಅಧ್ಯಕ್ಷ ಹನುಮಂತೇಗೌಡ, ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್ ಹಾಗೂ ಇತರರು ಇದ್ದರು. ಎಂ.ಸಿ.ಎಫ್. ಅಧಿಕಾರಿ ಆರ್. ಕೃಷ್ಣ ಸ್ವಾಗತಿಸಿದರು. ನೇತ್ರ ಪಾರ್ಥಿಸಿದರು.
'ಪ್ರೇಮಿಗಳ ದೇವಿ'ಯ ಅದ್ಧೂರಿ ಜಾತ್ರೆ
ಕೆ.ಆರ್. ನಗರ: ಪಟ್ಟಣದ ಹೊರವಲಯದ ತೋಪಮ್ಮನವರ ವಾರ್ಷಿಕ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಜಾತ್ರೆ ಅಂಗವಾಗಿ ಬೆಳಗ್ಗೆಯಿಂದಲೆ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಯಿತು.
ಭಕ್ತರು ದೇವರ ದರ್ಶನ ಪಡೆದು ಹರಕೆ ತೀರಿಸಿ ಪೂಜೆ ಸಲ್ಲಿಸಿದರು. ಸಾಮಿಲ್ ಮತ್ತು ಮರದ ವ್ಯಾಪಾರಿಗಳ ಸಂಘದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಿದ್ದರೆ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಪಾನಕ, ಮಜ್ಜಿಗೆ ವಿತರಿಸಿ ಭಕ್ತರ ದಾಹ ತಣಿಸಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಾವಿರಾರು ಮಂದಿ ಬೆಳಗ್ಗೆಯಿಂದ ರಾತ್ರಿವರೆಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಪ್ರೇಮಿಗಳ ದೇವತೆ ಎಂದು ಹೆಸರಾದ ತೋಪಮ್ಮನ ದರ್ಶನ ಪಡೆಯಲು ನೂರಾರು ಯುವ ಜೋಡಿಗಳು ಆಗಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.