ದೇವಾಲಯ, ಸ್ಮಾರಕಗಳ ಸಂರಕ್ಷಣೆ ಅಗತ್ಯ
ಬೇಲೂರು: ರಾಜ್ಯದಲ್ಲಿರುವ ಸಾವಿರಾರು ದೇಗುಲಗಳು, ಸ್ಮಾರಕಗಳು ತಮ್ಮ ಮೂಲ ಸ್ವರೂಪ ಕಳೆದುಕೊಳ್ಳುತ್ತಿದ್ದು, ಇದರಲ್ಲಿ ಪ್ರಮುಖ ಸ್ಮಾರಕ ದೇವಾಲಯಗಳನ್ನು ಸೂಕ್ತ ವ್ಯವಸ್ಥೆಯೊಂದಿಗೆ ಸಂರಕ್ಷಿಸುವ ಅಗತ್ಯವಿದೆ ಎಂದು ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜು ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀಚನ್ನಕೇಶವ ದೇವಾಲಯಕ್ಕೆ ಮತ್ತು ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮಕ್ಕೆಇತ್ತೀಚೆಗೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸಕ್ಕೆ ಹತ್ತಿರವಾದ, ರಾಜಮಹಾರಾಜರ ಕಾಲದ ಅನೇಕ ದೇವಾಲಯವಿದೆ. ಪ್ರತಿ ಗ್ರಾಮದಲ್ಲಿ ಇಂತಹ ದೇವಾಲಯಗಳನ್ನು ಕಾಣುತ್ತೇವೆ. ಅವುಗಳ ರಕ್ಷಣೆ ಹಿನ್ನೆಲೆಯಲ್ಲಿ ಅವುಗಳ ಮೇಲುಸ್ತುವಾರಿ ಕೇಂದ್ರ ಪುರಾತತ್ವ ಇಲಾಖೆ ವಹಿಸಿಕೊಂಡಿದ್ದರೂ ಎಲ್ಲಾ ದೇಗುಲಗಳ ರಕ್ಷಣೆ ಕಷ್ಟಸಾಧ್ಯ ಎಂದರು.
ವಿಶ್ವದಲ್ಲಿ ಹೆಸರು ಮಾಡಿರುವ ಬೇಲೂರು ಚನ್ನಕೇಶವ ದೇವಾಲಯ ಸೇರಿದಂತೆ ಅನೇಕ ಸ್ಮಾರಕ, ದೇವಾಲಯಗಳ ಶಿಲ್ಪಗಳಿಗೆ ಧಕ್ಕೆಯಾಗದಂತೆ ರಕ್ಷಿಸುವ ಅಗತ್ಯವಿದೆ. ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮವು ಪ್ರವಾಸಿ ಕೇಂದ್ರವಾಗಿ ಮಾರ್ಪಾಡಬೇಕಿದೆ ಎಂದು ತಿಳಿಸಿದರು.
ಸಂವಾದದ ಭರವಸೆ: ವಿಶ್ಲೇಷಣಾಕಾರ ಶಾಮ್ ಸುಂದರ್ ಮಾತನಾಡಿ, ದೇವಾಲಯಗಳಲ್ಲಿನ ಕುಸುರಿ ಕೆತ್ತನೆಯ ಶಿಲ್ಪಗಳು ಬಿಸಿಲು, ಮಳೆ, ಗಾಳಿಯ ಹೊಡೆತಕ್ಕೆ ಸಿಲುಕಿ ಅಂದ ಕಳೆದುಕೊಳ್ಳುತ್ತಿವೆ. ಇವುಗಳನ್ನ ಆಧುನಿಕ ತಂತ್ರಜ್ಞಾನದಡಿ ರಕ್ಷಿಸುವ ಅಗತ್ಯವಿದ್ದು ಈ ಸಂಬಂಧ ಪುರಾತತ್ವ ಇಲಾಖೆ, ಮುಜರಾಯಿ ಹಾಗೂ ಹಲವು ಶಿಲ್ಪಕಲಾ ಪರಿಣಿತರನ್ನು ಒಳಗೊಂಡ ತಂಡವನ್ನು ಸುದ್ದಿವಾಹಿನಿಯ ಸ್ಟುಡಿಯೋಗೆ ಆಹ್ವಾನಿಸಿ ಸಂವಾದ ನಡೆಸಲಾಗುವುದು ಎಂದು ಭರವಸೆ ನೀಡಿದರು. ಹಲ್ಮಿಡಿಯಲ್ಲಿ ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ದಿನದಿಂದ ನಂತರ ಇಲ್ಲಿಯವರೆಗಿನ ಆಗುಹೋಗುಗಳ ಕುರಿತು ಅಧ್ಯಯನ ಮಾಡಿ ದಾಖಲು ಮಾಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಮೇಲ್ಛಾವಣಿಗೆ ಅನುಮತಿ: ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ಧನ್ ಮಾತನಾಡಿ, ಹಲ್ಮಿಡಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ವೈ.ಎನ್. ರುದ್ರೇಶಗೌಡರ ಸಹಕಾರದಿಂದ ಅನುದಾನ ಬಿಡುಗಡೆಯಾಗಿದೆ. ಕನ್ನಡ ಭವನಕ್ಕೆ ಶಿಲಾನ್ಯಾಸವಾಗಿದೆ. ಶಾಸನ ನೆನಪಿನ ಮಂಟಪ ರಕ್ಷಣೆಗಾಗಿ ಮೇಲ್ಛಾವಣಿ ನಿರ್ಮಿಸಲು ಅನುಮತಿ ದೊರೆತಿದೆ ಎಂದು ಹೇಳಿದರು.
ಹಾಸನ ತಾಲೂಕು ಕಸಾಪ ಅಧ್ಯಕ್ಷ ಮಮತೇಶ್, ಬೇಲೂರು ತಾ.ಕಸಾಪ ಅಧ್ಯಕ್ಷ ಬಿ.ಎನ್. ಆನಂದಕುಮಾರ್, ಮಾಜಿ ಕಸಾಪ ತಾಲೂಕು ಅಧ್ಯಕ್ಷ ಅನಂತರಾಜೇಅರಸು, ಕಾರ್ಯದರ್ಶಿ ಆರ್.ಎಸ್. ಮಹೇಶ್, ಪ್ರಕಾಶ್, ಜಿಲ್ಲಾ ಕಸಾಪ ಪ್ರಮುಖರಾದ ಜಯಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

