ಹಾಸನ

ಮಹಿಳಾ ಸಬಲೀಕರಣ ಇಲ್ಲದೆ ದೇಶದ ಏಳ್ಗೆ ಅಸಾಧ್ಯ

Published On :

ಹೊಳೆನರಸೀಪುರ: ದೇಶದಲ್ಲಿ ಮಹಿಳೆಯ ಸಬಲೀಕರಣ ಆಗದ ಹೊರತು, ದೇಶದ ಏಳ್ಗೆ ಸಾಧ್ಯವಿಲ್ಲ, ಆದ್ದರಿಂದಲೇ ಸ್ತ್ರೀ ಶಕ್ತಿ ಸಂಘಟನೆಗಳು ಹೆಚ್ಚು ಬಲವರ್ಧಿತವಾದಲ್ಲಿ ಗ್ರಾಮೀಣ ಮಹಿಳೆಯರ ಬದುಕು ಹಸನಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನುಡಿದರು.
ಅವರು ಪಟ್ಟಣದ ಚೆನ್ನಾಂಬಿಕ ಕನ್ವೆಷನಲ್ ಹಾಲ್‌ನಲ್ಲಿ ಇತ್ತೀಚೆಗೆ ತಾಲೂಕಿನ ಸ್ತ್ರೀಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಸುಮಾರು 1600 ಸ್ತ್ರೀಶಕ್ತಿ ಸಂಘಗಳು ಇದ್ದು, ಅವುಗಳಲ್ಲಿ ಶೇಕಡ ಐವತ್ತರಷ್ಟು ಸಂಘಗಳು ನೊಂದಣಿ ಆಗಿದ್ದು ಅವುಗಳಿಗೆ ಶೇ. 3.5 ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ಬಲವರ್ಧನೆಗೆ ಸಹಕಾರಿ: ಸರ್ಕಾರವು ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗಾಗಿ ನೀಡುವ ಆರ್ಥಿಕ ಸಹಾಯಧನದ ಚೆಕ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಸ್ತ್ರೀಶಕ್ತಿ ಸಂಘಗಳ ಆರ್ಥಿಕ ಬಲವರ್ಧನೆಗೆ ಸಹಕಾರಿ ಆಗಲಿದೆ ಎಂದರು.
ಸ್ತ್ರೀಶಕ್ತಿ ಸಂಘಗಳಿಗೆ ನೀಡುವ ಸಾಲಕ್ಕೆ ಬ್ಯಾಂಕುಗಳು ಶೇ. 12ರಷ್ಟು ಬಡ್ದಿ ವಿಧಿಸುತ್ತಿದ್ದು, ಈ ಬಡ್ಡಿಗೆ ಕೇಂದ್ರ ಸರ್ಕಾರ ಶೇ. 8.5ರಷ್ಟು ಸಹಾಯಧನ ನೀಡುತ್ತಿದೆ. ಉಳಿದ 3.5ರಷ್ಟು ಹಣವನ್ನು ಮಾತ್ರವೇ ಸ್ತ್ರೀಶಕ್ತಿ ಸಂಘಗಳು ಭರಿಸಬೇಕಿದೆ ಎಂದು ಹೇಳಿದರು.
ನಿಧಿ ವಿತರಣೆ: ಕೇಂದ್ರ ಸರ್ಕಾರದ ಈ ಯೋಜನೆಯನ್ನು ಪ್ರತಿ ಮಹಿಳಾ ಸಂಘಗಳು ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ತಾಲೂಕಿನ 29 ಸ್ತ್ರೀಶಕ್ತಿ ಸಂಘಗಳಿಗೆ ತಲಾ ಹದಿನೈದು ಸಾವಿರದಂತೆ ಸುತ್ತು ನಿಧಿಯನ್ನು ಮಾಜಿ ಪ್ರಧಾನಿ ವಿತರಿಸಿದರು.
ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಈ ಯೋಜನೆ ಸಫಲತೆ ಕಾಣಬೇಕಾದರೆ ಸ್ತ್ರೀಶಕ್ತಿ ಸಂಘಗಳು ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಕುಸುಮಸಣ್ಣಸ್ವಾಮಿ, ಮಾಜಿ ಅಧ್ಯಕ್ಷೆ ಪುಷ್ಪಾಗೌಡೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಎನ್. ದೇವೇಗೌಡ (ಪಾಪಣ್ಣಿ), ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಪುರಸಭೆ ಮಾಜಿ ಅಧ್ಯಕ್ಷ ಟಿ. ಮಲ್ಲೇಶ್ ಮತ್ತಿತರರು ಇದ್ದರು.
ಸಮಾರಂಭಕ್ಕೆ ತಾಲೂಕಿನ ನಾನಾ ಸ್ತ್ರೀಶಕ್ತಿ ಸಂಘಗಳ ಸುಮಾರು ಎರಡು ಸಾವಿರಕ್ಕೂ ಹೆಚು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ತಾಲೂಕು ಪಂಚಾಯ್ತಿ ಇಓ  ತಮ್ಮಣ್ಣಗೌಡ ಸ್ವಾಗತಿಸಿದರು ಮತ್ತು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.