35 ವರ್ಷಗಳ ಪಕ್ಷ ನಿಷ್ಠೆಗೆ ಸಿಗದ ಮನ್ನಣೆ
ಹಾಸನ: ನನ್ನ 35 ವರ್ಷಗಳ ಪಕ್ಷ ನಿಷ್ಠೆಗೆ ಮನ್ನಣೆ ಸಿಗಲಿಲ್ಲ. ಪಕ್ಷಕ್ಕೆ ಸೇರುವ ಮುನ್ನವೇ ನೀಲೆಕಣಿ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಅಂತಿಮವಾಗಿ ನನಗೆ ಟಿಕೆಟಟ್ನೀಡಲಿಲ್ಲ. ತೀವ್ರ ಬೇಸರವಾಗಿದೆ.ನನ್ನ ಕರ್ಮ ಇದು. ಗ್ರಹಚಾರ, ಹಣೆಬರಹ....
ಅಂತಿಮ ಕ್ಷಣದಲ್ಲಿ ಹಾಸನ ಲೋಕಸಭೆ ಟಿಕೆಟ್ನಿಂದ ವಂಚಿತರಾದ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್ ಅವರ ಬೇಸರದ ನುಡಿಗಳಿವು.
ಪಕ್ಷಕ್ಕೆ ಬರುವ ಮುನ್ನವೇ ನಂದನ್ ನಿಲೇಕಣಿ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಅವರು ವಿಷಾದಿಸಿದರು.
ಗದ್ಗದಿತರಾದ ಆನಂದ್: 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ನನಗೆ ಟಿಕೆಟ್ ನೀಡಲು ಮುಂದೆ ಬಂದಿದ್ದರು. ನಾನು ಒಪ್ಪದೇ ಪಕ್ಷ ನಿಷ್ಠೆ ಮೆರೆದೆ. ಒಂದಲ್ಲ, ಎರಡಲ್ಲ ಹಲವಾರು ಬಾರಿ ನನಗೆ ಟಿಕೆಟ್ ನೀಡುವುದನ್ನು ಅಂತಿಮ ಕ್ಷಣದಲ್ಲಿ ನಿರಾಕರಿಸಲಾಗುತ್ತದೆ. ಇದಕ್ಕೆ ಯಾರನ್ನು ದೂರುವುದು ಗೊತ್ತಾಗುತ್ತಿಲ್ಲ. ಏನು ಮಾಡುವುದು, ಏನು ಹೇಳುವುದು ಒಂದು ತಿಳಿಯುತ್ತಿಲ್ಲ ಎಂದು ಆನಂದ್, 'ಕನ್ನಡಪ್ರಭ'ದೊಂದಿಗೆ ಮಾತನಾಡುತ್ತಾ ಗದ್ಗದಿತರಾದರು.
ಅರ್ಧ ಗಂಟೆಯಲ್ಲಿ ಬದಲು: ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅವರನ್ನು ನಾನು ಮರೆಯುವಂತೆಯೇ ಇಲ್ಲ. ನನಗೆ ಟಿಕೆಟ್ ಬೇಡ. ಅವರು ನನ್ನ ಪರವಾಗಿ ವರಿಷ್ಠರಲ್ಲಿ ಮಾತನಾಡಿದ್ದರು. ನನ್ನ ಬಗ್ಗೆ ಮುಖಂಡರ ಬಳಿ ಶಿಫಾರಸ್ಸು ಮಾಡಿದರು. ದೆಹಲಿಯಲ್ಲಿ ಉಸ್ತುವಾರಿ ಕಾರ್ಯದರ್ಶಿ ದಿಗ್ಗಿಜಯ್ ಸಿಂಗ್, ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಶನಿವಾರ ರಾತ್ರಿ 7 ಗಂಟೆಗೆ ನೀವು ಹಾಸನಕ್ಕೆ ಹೋಗಿ ಪ್ರಚಾರ ಕಾರ್ಯ ಶುರು ಮಾಡಿ ಎಂದೂ ಹೇಳಿದರು.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಕೂಡ ನನಗೆ ಅಭಿನಂದನೆ ತಿಳಿಸಿ, ಸಮಯ ವ್ಯರ್ಥ ಮಾಡದೇ ಪ್ರಚಾರ ಶುರು ಮಾಡಿ ಎಂದಿದ್ದರು. ಆದರೆ ಶನಿವಾರ 8 ರಲ್ಲಿ ನನ್ನ ಸ್ನೇಹಿತರೊಬ್ಬರು ಮೊಬೈಲ್ನಲ್ಲಿ ಶಾಸಕ ಮಂಜು ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು. ನನಗೆ ಶಾಕ್ ಆಯಿತು.
ಎಲ್ಲರಿಗೂ ಅಚ್ಚರಿ ತಂದಿದೆ: ನನಗೆ ಟಿಕೆಟ್ ತಪ್ಪಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ಆಶ್ಚರ್ಯವನ್ನುಂಟು ಮಾಡಿತು. ಸಿಎಂ ಸಿದ್ದರಾಮಯ್ಯನವರು, ರಾಜಕೀಯದಲ್ಲಿ ಇದೆಲ್ಲಾ ಕಾಮನ್ ಹೋಗಯ್ಯ ಎಂದರು. ರಾಜಕೀಯದಲ್ಲಿ ಹೇಗೆ ಇರಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ. ಮಂಜು ಅವರು ಟಿಕೆಟ್ ಪಡೆಯಲು ಅರ್ಹರು ಇರಬಹುದು. ಈಗಾಗಲೇ ಶಾಸಕರಾಗಿರುವ ಅವರಿಗೆ ಟಿಕೆಟ್ ನೀಡಬೇಕಿತ್ತಾ ಎಂಬ ಪ್ರಶ್ನೆಗೆ ಹೈಕಮಾಂಡ್ ಉತ್ತರಿಸಬೇಕಷ್ಟೇ. ನನಗೆ 62 ವರ್ಷ ವಯಸ್ಸಾಯಿತು. ಇನ್ನೇನು ಮಾಡಬೇಕು ಎಂದು ತಿಳಿಯದಾಗಿದೆ ಎಂದು ಅಳಲನ್ನು ತೋಡಿಕೊಂಡರು ಆನಂದ್.
ಹಿಂದೆ ಐದು ಬಾರಿ ಟಿಕೆಟ್ ಸಿಕ್ಕಿರಲಿಲ್ಲ
ಆನಂದ್ ಅವರಿಗೆ ಟಿಕೆಟ್ ಅಂತಿಮ ಕ್ಷಣದಲ್ಲಿ ಸಿಗದೇ ಇರುವುದು ಇದೇ ಮೊದಲಲ್ಲ. 1989ರಲ್ಲಿ ಹಾಸನ ವಿಧಾನಸಭೆಗೆ ಕಾಂಗ್ರೆಸ್ ಟಿಕೆಟ್ ನೀಡಿ, ನಾಮಪತ್ರ ಸಲ್ಲಿಸಿ, ಕೆಲ ದಿನಗಳು ಪ್ರಚಾರ ಮಾಡಿದ್ದರು. ಬೇರೆಯವರಿಗೆ ಟಿಕೆಟ್ ನೀಡಿದ್ದರಿಂದ ನಾಮಪತ್ರ ವಾಪಸ್ಸು ಪಡೆದಿದ್ದರು. 1994ರಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರೇ ಆನಂದ್ ನಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಹಾಗಾಗಿ ಆನಂದ್ ನಾಮಪತ್ರ ಸಲ್ಲಿಸಿದ್ದರು. ನಂತರ ಮತ್ತೆ ಬದಲಾವಣೆ ಆದ ಕಾರಣ ನಾಮಪತ್ರ ವಾಪಸ್ ಪಡೆದರು.
1999ರಲ್ಲಿ ಹಾಸನ ಲೋಕಸಭೆ ಮತ್ತು ವಿಧಾನಸಭೆಗೆ ಎರಡಕ್ಕೂ ಅರ್ಜಿ ಹಾಕಿದ್ದ ಆನಂದ್ ಅವರಿಗೆ ಅಂತಿಮವಾಗಿ ಎರಡೂ ಟಿಕೆಟ್ಗಳು ಸಿಗದೆ ವಂಚಿತರಾದರು. 2008ರ ವಿಧಾನಸಭೆ ಚುನಾವಣೆಯಲ್ಲೂ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆಯಲು ಮುಂದಾಗಿದ್ದರು. ಟಿಕೆಟ್ ಸಿಗಲಿಲ್ಲ. 2009ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟಟ್ನಿಂದ ವಂಚಿತರಾದರು.
'ದೇವೇಗೌಡರತ್ತ ವೀರಶೈವರ ಒಲವು'
ಹಾಸನ: ಜನಪರ ಕಾಳಜಿಯುಳ್ಳು, ಜಿಲ್ಲೆಯ ಹೆಮ್ಮೆಯ ಸಂಕೇತವಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರತ್ತ ವೀರಶೈವ ಸಮುದಾಯ ಒಲವು ತೋರಿಸುತ್ತಿದ್ದು, ಜನರೇ ಗೌಡರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸುತ್ತಾರೆ ಎಂಬ ಅದಮ್ಯ ವಿಶ್ವಾಸವನ್ನು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾವಗಲ್ ರಾಜಶೇಖರ್ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ ಈಗಾಗಲೇ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಭ್ಯರ್ಥಿ ಎಂದು ಪಕ್ಷದಿಂದ ತೀರ್ಮಾನಿಸಲಾಗಿದೆ. ವೀರಶೈವ ಸಮುದಾಯದ ಮತದಾರರು ಹಿಂದೆ ಬಿಜೆಪಿ ಪಕ್ಷದ ಯಡಿಯೂರಪ್ಪಗೆ ಬೆಂಬಲ ನೀಡಿ ಉತ್ತಮ ಆಡಳಿತದ ನಿರೀಕ್ಷೆ ಹೊಂದಿದ್ದರು. ನಂತರದ ದಿನಗಳಲ್ಲಿ ಹಗರಣಗಳ ಸರ್ಕಾರವಾಯ್ತು. ಡಜನ್ಗಟ್ಟಲೇ ಆಡಳಿತ ಪಕ್ಷದ ಸದಸ್ಯರು ಜೈಲಿಗೆ ಹೋಗಿ ಇತಿಹಾಸ ಸೃಷ್ಟಿಸಿದರು. ಇದರ ಪರಿಣಾಮವಾಗಿ ಬಿಜೆಪಿ ಬಗ್ಗೆ ವಿಶ್ವಾಸ ಕಡಿಮೆ ಆಗಿ ವೀರಶೈವ ಜನಾಂಗದವರು ಬೇಸತ್ತಿದ್ದಾರೆ. ಈಗ ಜೆಡಿಎಸ್ಗೆ ಒಲವು ತೋರುತ್ತಿದ್ದಾರೆ ಎಂದು ಹೇಳಿದರು.
ಗೌಡರ ಪರ ಅಲೆ: ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ದೇವೇಗೌಡರು ಈ ಬಾರಿಯೂ ಅತಿ ಹೆಚ್ಚು ಮತ ಗಳಿಸಿ ಗೆಲುವು ಸಾಧಿಸಲಿದ್ದಾರೆ ಎಂದರು.
ಗೆಲ್ಲುವ ವಿಶ್ವಾಸವಿದೆ: ತೃತೀಯ ರಂಗದ ಚುನಾವಣೆ ನಂತರ ಮಹತ್ವ ಪಡೆದು ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದು ಕಾದು ನೋಡಬೇಕಾಗಿದೆ. ಗೌಡರು ಮತ್ತೊಮ್ಮೆ ರಾಷ್ಟ್ರದ ನಾಯಕರಾಗಿ ಮಿಂಚಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 10ರಿಂದ 15 ಸ್ಥಾನಗಳನ್ನು ಜೆಡಿಎಸ್ ಗೆಲ್ಲುವ ವಿಶ್ವಾಸವಿದೆ.
ಬಿಜಾಪುರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಭಿಮಾನಿಗಳು ಪ್ರತಿಮೆ ಅನಾವರಣ ಮಾಡಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಲಿದೆ ಎಂದು ವಿಶ್ಲೇಷಣೆ ಮಾಡಿದರು.
ಇಂದು ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟು ಜನತೆ ತೃತೀಯ ರಂಗದತ್ತ ಒಲವು ತೋರುತ್ತಿದ್ದಾರೆ. ಇದು ದೇವೇಗೌಡರ ಕೊನೆಯ ಚುನಾವಣೆ ಆಗಿದ್ದು, ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಹೆಚ್ಚು ಮತ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.
ಕಾರ್ಯಕರ್ತರ ಸಭೆ: ಮಂಗಳವಾರ ಸಕಲೇಶಪುರ ಮತ್ತು ಆಲೂರು ಕ್ಷೇತ್ರಗಳಲ್ಲಿ , ಬುಧವಾರ ಹೊಳೆನರಸೀಪುರ ಮತ್ತು ಅರಕಲಗೂಡು ಭಾಗಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು. ಗುರುವಾರ ಹಾಸನದ ಚನ್ನವೀರಪ್ಪ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ದೊಡ್ಡೇಗೌಡ, ಕೆ.ಎಂ. ರಾಜೇಗೌಡ, ಬಿ.ವಿ. ಕರೀಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

