ಆರೋಗ್ಯ ಮೇಳ, ಉಳಿತಾಯ ಉತ್ಸವ ಇಂದು
ಹಾಸನ: ಕೆನರಾ ಬ್ಯಾಂಕ್ ವತಿಯಿಂದ ಆರ್ಥಿಕ ಯೋಜನೆ, ಆರೋಗ್ಯ ಮೇಳ ಮತ್ತು ಉಳಿತಾಯ ಉತ್ಸವ ಕಾರ್ಯಕ್ರಮವನ್ನು ನಗರದ ಸಂತೆಪೇಟೆಯ ಬಿ.ಎಂ.ರಸ್ತೆಯಲ್ಲಿ ಇರುವ ಶಾಖಾ ಕಚೇರಿಯಲ್ಲಿ ಮಾ. 12ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಮೈಸೂರು ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮೇಳವು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದ್ದು ಉಚಿತ ನೇತ್ರ ತಪಾಸಣೆ ಸಹ ಆಯೋಜಿಸಲಾಗಿದೆ.
ಇದರಲ್ಲಿ ಜೀವ ವಿಮೆ, ಆರೋಗ್ಯ ವಿಮೆ, ಆಜೀವ ವಿಮೆ, ಮ್ಯೂಟ್ಯುವಲ್ ಫಂಡ್ ಹೂಡಿಕೆಗಳು, ನೇರ ಷೇರು ವ್ಯವಹಾರ, ಆನ್ಲೈನ್ ಉಳಿತಾಯ ಖಾತೆ ತೆರೆಯುವ ಮಾಹಿತಿ, ಸ್ವಾವಲಂಬನಾ ಪಿಂಚಣಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ನೇರ ತೆರಿಗೆ ಸಂಗ್ರಹ, ಪರೋಕ್ಷ ತೆರಿಗೆ ಸಂಗ್ರಹ, ಪಿಂಚಣಿ ಖಾತೆಗಳು ಇ- ಛಾಪಾ ಕಾಗದಗಳ ಮಾಹಿತಿ ಕೇಂದ್ರಗಳು ಲಭ್ಯವಿದೆ.
ಪ್ರಶಿಕ್ಷಾರ್ಥಿಗಳ ಪಥ ಸಂಚಲನ
ಹಾಸನ: ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ 1 ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಮಾ. 13ರಂದು ಬೆಳಗ್ಗೆ 9ಕ್ಕೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿನ ಪೊಲೀಸ್ ಮಹಾ ನಿರ್ದೇಶಕ ಸುಶಾಂತ್ ಮಹಾಪಾತ್ರ ಗೌರವ ವಂದನೆ ಸ್ವೀಕಾರ ಮಾಡುವರು. ಮೈಸೂರು ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ. ರಾಮಚಂದ್ರರಾವ್ ಭಾಗವಹಿಸುವರು.
ನಾಳೆ ಉಸ್ತುವಾರಿ ಕಾರ್ಯದರ್ಶಿ ಸಭೆ
ಹಾಸನ: ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕುಮಾರ ನಾಯಕ್ ಅವರು ಮಾ. 13ರಂದು ಬೆಳಿಗ್ಗೆ 10.30ಕ್ಕೆ ಹಾಸನಕ್ಕೆ ಆಗಮಿಸುವರು. ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಕೆಪಿಟಿಸಿಎಲ್ ಕಾಮಗಾರಿಗಳ ಪರಿಶೀಲನೆ ನಡೆಸಿ ಸಂಜೆ 6 ಗಂಟೆಗೆ ಬೆಂಗಳೂರಿಗೆ ತೆರಳುವರು.
ಮಹಿಳೆಯರು ಮಾಧ್ಯಮ ಕ್ಷೇತ್ರಕ್ಕೆ ಹೆಚ್ಚಾಗಿ ಬರುವ ಅಗತ್ಯವಿದೆ
ಹಾಸನ: ಮಹಿಳೆಯರು ಮಾಧ್ಯಮ ಕ್ಷೇತ್ರಕ್ಕೆ ಹೆಚ್ಚು ಬರಬೇಕಾದ ಅಗತ್ಯತೆ ಇದೆ ಎಂದು ಮೈಸೂರು ಮಾನಸ ಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಎನ್. ಉಷಾರಾಣಿ ಕರೆ ನೀಡಿದ್ದಾರೆ. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಮಂಗಳವಾರ ನಡೆದ ಅಂತರ ಕಾಲೇಜು ಮಟ್ಟದ ಮಾಧ್ಯಮ ಹಬ್ಬ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮುದ್ರಣ ಮತ್ತು ಟಿವಿ ಮಾಧ್ಯಮಗಳು ಜನಾಭಿಪ್ರಾಯವನ್ನು ಬಿಂಬಿಸಬೇಕೆ ಹೊರೆತು ವೈಯಕ್ತಿಕ ಅಭಿಪ್ರಾಯಗಳನ್ನು ಬಿಂಬಿಸಬಾರದು ಹಾಗೂ ಜನರು ಮಾಧ್ಯಮದಲ್ಲಿ ಭಾಗವಹಿಸುವಂತಹ ಪ್ರಕ್ರಿಯೆಯಾಗಬೇಕು. ಮಾಧ್ಯಮಗಳು ಸಾಕಷ್ಟು ಬೆಳೆದಿದ್ದರೂ, ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ನೀಡುವಲ್ಲಿ ವಿಫಲವಾಗಿವೆ ಎಂದು ಅವರು ವಿಷಾದಿಸಿದರು. ಸಂವಹನ ವೇದಿಕೆ ಪತ್ರಿಕೆಯನ್ನು ಪತ್ರಕರ್ತ ಎಚ್.ಬಿ. ಮದನ್ ಗೌಡ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ರೂಪ್ ರಾಜ್ ಚಂದನ್ ಮಾತನಾಡಿ, ಪತ್ರಿಕೋದ್ಯಮ ಕೆಲಸ ಇತರೆ ಎಲ್ಲಾ ಕೆಲಸಗಳಿಗಿಂತ ಅತ್ಯಂತ ಶ್ರೇಷ್ಠವಾದ ಕೆಲಸವಾಗಿದ್ದು, ಸಮಾಜದ ಆಗುಹೊಗುಗಳನ್ನು ಸರಿಪಡಿಸಲು ಇರುವ ಬಹು ಮುಖ್ಯ ಕ್ಷೇತ್ರ. ಪತ್ರಿಕೋದ್ಯಮಿಗಳು ಅತ್ಯಂತ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಯುವ ಪತ್ರಕರ್ತರು ಸಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಪ್ರಾಧ್ಯಾಪಕ ರಾಘವೇಂದ್ರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ದಿಲೀಪ್ ಕುಮಾರ್, ಅಧ್ಯಾಪಕರಾದ ಎಂ.ಕೆ. ಮಹೇಶ್, ಆಶಾ, ಪೂರ್ಣಿಮ, ಡಾ. ಶಶಿಕುಮಾರ್, ಸುಲೋಚನಾ, ಡಾ. ಕೆ.ಜಿ. ಕವಿತಾ, ಮೋಹನ್ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಹಾಗೂ ಇತರರು ಇದ್ದರು.
ಇಂದು ಆರೋಗ್ಯ ಮೇಳ
ಹಾಸನ: ಕೆನರಾ ಬ್ಯಾಂಕ್ ವತಿಯಿಂದ ಆರ್ಥಿಕ ಯೋಜನೆ, ಆರೋಗ್ಯ ಮೇಳ ಮತ್ತು ಉಳಿತಾಯ ಉತ್ಸವ ಕಾರ್ಯಕ್ರಮ ನಗರದ ಸಂತೆಪೇಟೆಯಲ್ಲಿ ಮಾ. 12ರಂದು ಬೆಳಿಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಮೈಸೂರು ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಮೇಳವು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಉಚಿತ ನೇತ್ರ ತಪಾಸಣೆ ಸಹ ಆಯೋಜಿಸಲಾಗಿದೆ. ಇದರಲ್ಲಿ ಜೀವ ವಿಮೆ, ಆರೋಗ್ಯ ವಿಮೆ, ಆಜೀವ ವಿಮೆ, ಮ್ಯೂಚ್ಯುವಲ್ ಫಂಡ್ ಹೂಡಿಕೆಗಳು, ನೇರ ಷೇರು ವ್ಯವಹಾರ, ಆನ್ಲೈನ್ ಉಳಿತಾಯ ಖಾತೆ ತೆರೆಯುವ ಮಾಹಿತಿ, ಸ್ವಾವಲಂಬನ ಪಂಚಣಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ನೇರ ತೆರಿಗೆ ಸಂಗ್ರಹ, ಪರೋಕ್ಷ ತೆರಿಗೆ ಸಂಗ್ರಹ, ಪಿಂಚಣಿ ಖಾತೆಗಳು ಇ- ಛಾಪಾ ಕಾಗದಗಳ ಮಾಹಿತಿ ಕೇಂದ್ರಗಳು ಲಭ್ಯವಿದೆ.
ಸಭೆಗಳಿಗೆ ಅನುಮತಿ
ಹಾಸನ: ಮಾದರಿ ನೀತಿ ಸಂಹಿತೆಯಡಿಯಲ್ಲಿ ಸಾಂಸ್ಕತಿಕ, ಧಾರ್ಮಿಕ, ಸಾಮಾಜಿಕ ಮತ್ತು ಕ್ರೀಡಾತ್ಮಕ ಸ್ವರೂಪದ ಚಟುವಟಿಕೆ ಆಚರಣೆ ಸಭೆಗಳನ್ನು ನಡೆಸಲು ಅನುಮತಿ ನೀಡುವ ಅಧಿಕಾರವನ್ನು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಹಾಯಕ ಚುನಾವಣಾಧಿಕಾರಿಗಳಿಗೆ(ವಿಧಾನಸಭಾ ಕ್ಷೇತ್ರವಾರು) ಪ್ರತ್ಯಾಯೋಜಿಸಲಾಗಿದೆ. ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಆದೇಶಿಸಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಹಾಸನ: ಜಾವಗಲ್ನ ಕೆವಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತುರ್ತು ದುರಸ್ತಿ ಕೆಲಸ ಇದೆ. ಆದ್ದರಿಂದ ಮಾ. 12ರಂದು ಬುಧವಾರ ಬೆಳಿಗ್ಗೆ 10ರಿಂದ 4ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಕೆಪಿಟಿಸಿಎಲ್ ಕಚೇರಿಯ ಎಂಜಿನಿಯರ್ ಮಹೇಶ್ ತಿಳಿಸಿದ್ದಾರೆ.
ಪ್ರಾತಿನಿಧಿಕ ಕವನ ಸಂಕಲನಕ್ಕಾಗಿ ಕವಿತೆಗಳ ಆಹ್ವಾನ
ಹಾಸನ: ಮನೆ ಮನೆ ಕವಿಗೋಷ್ಠಿಯು ಜಿಲ್ಲಾ ಸಾಹಿತ್ಯ ಸಂಘಟನೆ ಹಾಗೂ ಬೆಳವಣಿಗೆಯಲ್ಲಿ ತನ್ನದೇ ಆದ ಮಹತ್ತರ ಪಾತ್ರ ಹೊಂದಿದ್ದು, ಇದೀಗ 200 ಮಾಸಿಕ ಕಾರ್ಯಕ್ರಮಗಳ ಯಶಸ್ವೀ ಮೆಟ್ಟಿಲುಗಳನ್ನು ದಾಟಿರುವ ಸಂದರ್ಭದ ಸವಿನೆನಪಿಗಾಗಿ ಸಹಕಾರತತ್ವದಡಿಯಲ್ಲಿ ಪ್ರಾತಿನಿದಿಕ ಕವನ ಸಂಕಲನವನ್ನು ಹೊರತರುವ ನಿರ್ಣಯವನ್ನು ಸರ್ವಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ.
ಆದ್ದರಿಂದ ಜಿಲ್ಲೆಯ ಕವಿ- ಕವಯತ್ರಿಯರು 18ರಿಂದ 20 ಸಾಲುಗಳಿಗೆ ಮೀರದಂತೆ ತಮ್ಮ ಸ್ವ-ರಚಿತ ಐದು ಕವಿತೆಗಳನ್ನು, ಸ್ವವಿವರವನ್ನು ಹಾಗೂ ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಮಾ. 28ರೊಳಗೆ ಕಳುಹಿಸಲು ಕೋರಿದೆ. ಕವಿತೆಗಳು ಆಯ್ಕೆಯಾದಲ್ಲಿ ಪ್ರಕಟಣೆಯ ವಿವರಗಳನ್ನು ಪತ್ರ ಮುಖೇನ ತಿಳಿಸಲಾಗುವುದು ಎಂದು ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ಕವನಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ, ಕೊಟ್ರೇಶ್ ಎಸ್. ಉಪ್ಪಾರ್, ಸಂಚಾಲಕರು, ಮನೆಮನೆ ಕವಿಗೋಷ್ಠಿ, ಹಲಸಿನ ಮರದಹತ್ತಿರ, ತೇಜೂರು ರಸ್ತೆ, ಶಾಂತಿನಗರ, ಹಾಸನ. ಮೊ. 9483470794, 9739878197 ಅಥವಾ ಚಂದ್ರಕಾಂತ ಪಡೆಸೂರ, ಭಾರತಿ ವಿದ್ಯಾಮಂದಿರ, ಹಾಸನ, ಮೊ. 9035211203.
ಇಂದು ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಮಾ. 12ರಂದು ನಡೆಯಲಿದೆ. ಒಟ್ಟು 15 ಸದಸ್ಯ ಬಲವುಳ್ಳ ಪಪಂ 7 ಕಾಂಗ್ರೆಸ್, 5 ಜೆಡಿಎಸ್ ಮತ್ತು 3 ಪಕ್ಷೇತರ ಸದಸ್ಯರನ್ನು ಹೊಂದಿದ್ದು, ನಿಗದಿಯಾದ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ವರ್ಗಕ್ಕೆ ಮೀಸಲಾಗಿದೆ.
ಜೆಡಿಎಸ್ನಿಂದ ವಿಪ್ ಜಾರಿ: ಅರಕಲಗೂಡು ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿಂದಂತೆ ಜೆಡಿಎಸ್ ಪಕ್ಷದ ಎಲ್ಲಾ 5 ಸದಸ್ಯರಿಗೂ ವಿಪ್ ಜಾರಿಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದು ಜೆಡಿಎಸ್ ಕಾರ್ಯಕರ್ತರ ಸಭೆ
ಹೊಳೆನರಸೀಪುರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಪಟ್ಟಣದ ಚೆನ್ನಾಂಬಿಕ ಕನ್ವೆನ್ಷನ್ ಹಾಲ್ನಲ್ಲಿ ಮಾ. 12ರ ಬೆಳಿಗ್ಗೆ 11ಗಂಟೆಗೆ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಪಿ.ಎನ್. ಮಲ್ಲೇಶಯ್ಯನವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ. ಮುಂಬರಲಿರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಿದ್ದತೆಗಾಗಿ ಹಮ್ಮಿಕೊಂಡಿರುವ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕರಾದ ಎಚ್.ಡಿ. ರೇವಣ್ಣ ಹಾಗೂ ಜಿಲ್ಲೆಯ ಜೆಡಿಎಸ್ ಶಾಸಕರುಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಕಾಂಗ್ರೆಸ್
ಕಾರ್ಯಕರ್ತರ ಸಭೆ
ಹಾಸನ: ಲೋಕಸಭಾ ಚುನಾವಣೆಯ ಪ್ರಯುಕ್ತ ಮಾ. 12ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅಧ್ಯಕ್ಷತೆ ವಹಿಸುವರು. ಸಭೆಗೆ ಶಾಸಕರು ಹಾಗೂ ಲೋಕಸಭೆ ಅಭ್ಯರ್ಥಿ ಎ.ಮಂಜು ಆಗಮಿಸಲಿದ್ದು, ಸಭೆಗೆ ಪಕ್ಷದ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಶಾಸಕರು, ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಬೇಕಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಚ್.ಆರ್. ನಾರಾಯಣಗೌಡ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

