ಗೌಡರು ಸ್ವಸಾಮರ್ಥ್ಯದಿಂದ ಪ್ರಧಾನ ಮಂತ್ರಿ ಆಗಿರಲಿಲ್ಲ
ಹಾಸನ: ದೇವೇಗೌಡರು ಸ್ವಶಕ್ತಿಯಿಂದ ಪ್ರಧಾನಿ ಆದವರಲ್ಲ. ಅವರು ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ ಎಂಬುದನ್ನು ಜನ ಅರಿಯಬೇಕು ಎಂದು ಹಾಸನ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೆ. ಮಂಜು ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾಧ್ಯಕ್ಷ ಬಿ. ಶಿವರಾಂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ತಮ್ಮ ಮಾತು ಮುಂದುವರಿಸಿದ ಅವರು, ಅಭ್ಯರ್ಥಿ ಚುನಾವಣೆಯನ್ನು ಎದುರಿಸುವುದಲ್ಲ. ಅದು ಮತದಾರರು ಎದುರಿಸುವಂಥದ್ದು. ಆದ್ದರಿಂದ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಚಿಂತನೆ ಮಾಡುವಂತಹ ಮತದಾರರು ಇದ್ದು, ಅದನ್ನು ಅರಿತು ಪಕ್ಷ ಸಂಘಟನೆ ಮಾಡಬೇಕು ಎಂದರು.
ಪೊಳ್ಳು ಭರವಸೆಗಳು: ಎಲ್ಲಾ ಅಧಿಕಾರಗಳನ್ನು ಅನುಭವಿಸಿದ ಅಪ್ಪ-ಮಕ್ಕಳಿಗೆ ಜಿಲ್ಲೆಯ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ.
ಆಲೂಗಡ್ಡೆಗೆ ಆಂಗಮಾರಿ ರೋಗ ನಿಯಂತ್ರಣವಾಗಿಸಲು ಸಾಧ್ಯವಾಗಿಲ್ಲ. ಆಲೂಗಡ್ಡೆ ಸಂಶೋಧನಾ ಕೇಂದ್ರ ತರಲು ಆಗಿಲ್ಲ. ಈಗ ಐಐಟಿಯನ್ನು ತರುತ್ತೇವೆ ಎಂದು ಶಪಥ ಮಾಡಿದ್ದಾರೆ. ಆದರೆ, ಅದು ಕೈತಪ್ಪಿ ಹೋಗಿದ್ದು, ಪೊಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.
ಸೋತರೆ ಸುಳಿಯಲ್ಲ: ದೇವೇಗೌಡರು ಸಂಸತ್ನಲ್ಲಿ 2 ನಿಮಿಷ ಮಾತನಾಡಲು ಅವಕಾಶ ನೀಡೋದಿಲ್ಲ ಅಂತ ಅವರೇ ಹೇಳಿದ್ದಾರೆ. ಆದರೆ ಅವರು ಪ್ರಶ್ನೆಯನ್ನೇ ಹಾಕಿಲ್ಲ. ಅದಕ್ಕೆ ಅವರಿಗೆ ಅವಕಾಶ ಸಿಕ್ಕಿಲ್ಲ ಎಂದ ಮಂಜು, ಜಿಲ್ಲೆಯ ಜನರು ಅವರನ್ನು ಸೋಲಿಸಿ ಕೆಂಪುಗೂಟದ ಕಾರನ್ನು ಕಿತ್ತುಕೊಂಡರೆ ಅವರು ಈ ಜಿಲ್ಲೆಯತ್ತ ಸುಳಿಯೋದೂ ಇಲ್ಲ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನು ಗೆಲ್ಲಿಸುವಂತೆ ಮನವಿ ಮಾಡಿದರು.
ಶಾಪ ನಿವಾರಿಸಿ: ಮುಖಂಡ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಕರೆದು ಡೈರಿಗೆ ನೀಡಬೇಕೇ ಅಥವಾ ಬೇಡವಾ, ಕಬ್ಬನ್ನು ಕಾರ್ಖಾನೆಗೆ ನೀಡಬೇಕಾ ಅಥವಾ ಬೇಡವಾ ಅಂತ ರೇವಣ್ಣರನ್ನೇ ಕೇಳಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಶಾಪವನ್ನು ಜನ ಹೊಗಲಾಡಿಸಬೇಕು ಎಂದು ಕರೆ ನೀಡಿದರು. ಪ್ರಚಾರಕ್ಕೆ ಚಾಲನೆ: ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಬುಧವಾರ ನಡೆಸುವ ಮೂಲಕ ಹಾಸನ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಕೆ. ಮಹೇಶ್, ಕಬ್ಬಳಿ ರಂಗೇಗೌಡ, ಮುನಿಸ್ವಾಮಿ, ಹೆಮ್ಮಿಗೆ ಮೋಹನ್, ಲಲಿತಮ್ಮ, ಪಟೇಲ್ ಶಿವಪ್ಪ, ಕಡೂರಿನ ಎನ್.ಬಶೀರ್ ಸಾಬ್, ಎಚ್.ಎಂ. ವಿಶ್ವನಾಥ್, ನಾರಾಯಣಗೌಡ ಹಾಗೂ ಇತರರು ಇದ್ದರು.
ಕುಮಾರಣ್ಣ, ರೇವಣ್ಣ ಶೀಘ್ರ ಬಿಜೆಪಿಗೆ!
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ. ಶಿವರಾಂ, ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದರೆ ಅವರ ಮಕ್ಕಳಾದ ರೇವಣ್ಣ ಕಾಂಗ್ರೆಸ್ ಮತ್ತು ಕುಮಾರಸ್ವಾಮಿ ಅವರು ಬಿಜೆಪಿ ಸೇರುವುದು ಖಚಿತ ಎಂದರು. ಇದೇ ವೇಳೆ, ದೇವೇಗೌಡರು ತಂತ್ರಗಾರಿಕೆಯನ್ನು ಹೊಂದಿದ್ದಾರೆ. ಆದ್ದರಿಂದ ಕಾರ್ಯಕರ್ತರು ಸಕ್ರಿಯಗೊಳ್ಳಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

