ಸುಪಾರಿ ಶೂಟೌಟ್ ಮಾಡಿಸಿ ಕುಳಿತರು!
ಹಾಸನ: ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹೋಬಳಿ ಕೇಂದ್ರ. 22 ಗ್ರಾಮಗಳ ಜನರ ವಾಣಿಜ್ಯ ಸೆಂಟರ್ ಅಷ್ಟೇ. ಅಂಥಾ ದೊಡ್ಡ ಹೋಬಳಿಯೇನೂ ಅಲ್ಲ. ಅಂತಹ ಹೋಬಳಿ ಕೇಂದ್ರವಾದ ನುಗ್ಗೇಹಳ್ಳಿಯ ಬಾಗೂರು ರಸ್ತೆಯಲ್ಲಿ ಪರಮೇಶ್ ಎಂಬಾತ ಶ್ರೀ ಕಾಳಿಕಾಂಭ ಜ್ಯೂಯೆಲರಿ ವರ್ಕ್ ಎಂಬ ಅಂಗಡಿ ಇಟ್ಟುಕೊಂಡಿದ್ದ.
ಆತ ಸುಮ್ಮನೆ ಬರೀ ಚಿನ್ನದ ವ್ಯಾಪಾರ ಮತ್ತು ಆಭರಣ ತಯಾರಿಸುವ ಕಾಯಕ ಮಾಡಿಕೊಂಡಿದ್ದರೇ ಏನೇನು ಆಗುತ್ತಿರಲಿಲ್ಲ. ತನ್ನ ಅಂಗಡಿಯ ಎದುರಿಗಿದ್ದ ಬಾಂಬೆ ಟೈಲರ್ಸ್ ಮಾಲೀಕ ನಟೇಶ್ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದ. ಈ ಒಡನಾಟ ಬರ ಬರುತ್ತಾ ನಟೇಶ್ನ ಪತ್ನಿಯ ಜೊತೆಯೂ ಏರ್ಪಟ್ಟಿತ್ತು. ಇದನ್ನು ಟೈಲರ್ ನಟೇಶ್ ತೀವ್ರವಾಗಿ ವಿರೋಧಿಸಿದ್ದ. ಈ ಬಗ್ಗೆ ನ್ಯಾಯ ಪಂಚಾಯ್ತಿಯೂ ಆಗಿತ್ತು. ಆಗಲೇ ಇವೆಲ್ಲಾ ಸರಿಯಿಲ್ಲ.. ನನಗೂ ಚಿನ್ನದಂತಹ ಪತ್ನಿ, ಮಗು ಇದ್ದಾರೆ. ನನ್ನ ಪತ್ನಿ ಮತ್ತೆ ಗರ್ಭವತಿ ಎಂಬ ವಿವೇಕತನವನ್ನು ಹೊಂದಿ ಅಕ್ರಮ ಸಂಬಂಧಕ್ಕೆ ತಿಲಾಂಜಲಿ ಹೇಳಿದ್ದರೆ ಪರಮೇಶ್ ಪ್ರಾಣಕ್ಕೆ ಸಂಚಕಾರ ಬರುತ್ತಿರಲಿಲ್ಲ.
ಸಂಚು ರೂಪುಗೊಂಡಿದ್ದು ಹೀಗೆ: ನಟೇಶ್ ಪತ್ನಿಯ ಸಂಗ ಬಿಡಲಿಲ್ಲ ಪರಮೇಶ್. ಇದರಿಂದ ಕುಪಿತನಾದ ನಟೇಶ್ ನಗೆ ಎದುರಾಗಿರುವ ಕೌಟುಂಬಿಕ ಸಮಸ್ಯೆಯನ್ನು ತನ್ನ ಆಪ್ತ ಮಿತ್ರ ಚನ್ನರಾಯಪಟ್ಟಣ ಟೌನ್ನಲ್ಲಿ ಟೈಲರ್ ಅಂಗಡಿ ಇಟ್ಟುಕೊಂಡಿರುವ ಟೈಲರ್ ಮಿತ್ರ ಪ್ರಕಾಶ್ ಎಂಬಾತನ ಜೊತೆ ನಿವೇದನೆ ಮಾಡಿಕೊಂಡಾಗ ಆತ ನೀಡಿದ ಐಡಿಯಾ... ಪರಮೇಶ್ನನ್ನು ಮುಗಿಸೋದು!
ಸ್ಕೆಚ್ ರೂಪಿಸಿದರು: ಹೀಗೆ 'ಕೆಲಸ' ಪಡೆದ ರೌಡಿ, ಉತ್ತರ ಪ್ರದೇಶದ ಮೂವರಿಗೆ ಸೇರಿದಂತೆ 6 ಮಂದಿಗೆ ಹಣ ನೀಡಿ ಪರಮೇಶ್ನನ್ನು ಗುಂಡಿಟ್ಟು ಕೊಲ್ಲಲು ರು. 1 ಲಕ್ಷ ಸುಪಾರಿ ನೀಡಿದ. ಇದಾದ ನಂತರ 15 ದಿನಗಳ ಹಿಂದೆಯೇ ಬಂದ ಕಿಲ್ಲರ್ಗಳು, ಪರಮೇಶ್ ಪ್ರತಿದಿನ ಹಾಸನದಿಂದ ಬೆಳಗ್ಗೆ ಬಂದು, ಸಂಜೆ ಹೋಗುತ್ತಿದ್ದದ್ದನ್ನು ಕಂಡು ಯೋಜನೆ ರೂಪಿಸಿದರು. ಅಲ್ಲದೇ ಒಂದು ದಿನ ಅಂಗಡಿಗೆ ಹೋಗಿ ಪರಮೇಶನನ್ನು ಮಾತನಾಡಿಸಿಕೊಂಡು ಬಂದಿದ್ದರು.
ಮುಹೂರ್ತ ಫಿಕ್ಸ್: ಮಾ. 10ರಂದು ಪರಮೇಶ್ ಎಂದಿನಂತೆ ಸಂಜೆ 7.16ರ ಹೊತ್ತಿಗೆ ಅಂಗಡಿಯನ್ನು ಮುಚ್ಚಿಕೊಂಡು ಸಮೀಪದಲ್ಲೇ ಇದ್ದ ಬಸ್ಸ್ಟ್ಯಾಂಡ್ಗೆ ಅಂದು ವ್ಯಾಪಾರವಾಗಿದ್ದ ಹಣ ಮತ್ತು ಚಿನ್ನ ಇದ್ದ ಸಣ್ಣ ಬ್ಯಾಗ್ ಅನ್ನು ಹಿಡಿದುಕೊಂಡು ಹೋಗುತ್ತಿದ್ದರು. ಆಗ ವಿದ್ಯುತ್ ಬೇರೆ ಇರಲಿಲ್ಲ. ಆಗ ಬಂದ ಬೈಕ್ಗಳಲ್ಲಿ ಬಂದ ಸುಪಾರಿ ಕಿಲ್ಲರ್ಗಳು, ಪರಮೇಶನ ಎದೆಗೆ ಗುಂಡುಹಾರಿಸಿ, ಪರಮೇಶ್ ಕೈಯ್ಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾದರು. ದರೋಡೆಗಾಗಿ ಕೊಲೆ ನಡೆದಿರುವುದಾಗಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಅವರು ಬ್ಯಾಗ್ ಒಯ್ದಿದ್ದರು.
ಅಂಗಡಿ ಮುಂದೆ ಕುಳಿತಿದ್ದರು: ಇತ್ತ, ಶೂಟೌಟ್ ಮಾಡಿಸಿದ ಕ್ಷಣದಲ್ಲೇ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕೊಲೆಯಾದವನ ಪರಮೇಶ್ ಅಂಗಡಿ ಬಳಿ ನಟೇಶ್, ಸುಪಾರಿ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಪ್ರಕಾಶ್ ಕುಳಿತಿದ್ದರು.
ಪತ್ತೆಯಾಗಿದ್ದು ಹೀಗೆ...
ಪರಮೇಶ್ ತನ್ನ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿರುವ ವಿಚಾರದಲ್ಲಿ ನಟೇಶನ ಆಗಾಗ ಗಲಾಟೆ ಮಾಡುತ್ತಿದ್ದ ವಿಚಾರ ತಿಳಿದಿದ್ದ ಪೊಲೀಸರು, ಅಂಗಡಿ ಬಳಿ ಕುಳಿತಿದ್ದ ಇಬ್ಬರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ನಿಜಾಂಶ ಹೊರಬಿತ್ತು. ಕೊಲೆಯಾದ ಪರಮೇಶನ ಮೊಬೈಲ್ ಕಾಲ್ ಲಿಸ್ಟ್ನಲ್ಲಿತ್ತು ನಟೇಶ್ ಪತ್ನಿ ಮೀನಾಕ್ಷಿಯ ನಂಬರ್. ಮೊಬೈಲ್ ಕಾಲ್ ಲಿಸ್ಟ್ ನೋಡಿದಾಗ, ಹಣ, ಆಭರಣಕ್ಕೆ ಕೊಲೆಯಾಗಿದ್ದಲ್ಲ. ಅದು ಸುಪಾರಿ ಕೊಲೆ ಎಂದು ಗೊತ್ತಾಯಿತು. ಅಂತೂ ಈ ಪ್ರಕರಣ ಅರ್ಧಗಂಟೆಯಲ್ಲಿ ಪತ್ತೆಯಾಗಿದ್ದು ವಿಶೇಷ.
ರು. 2 ಲಕ್ಷ ಮುಂಗಡ...
ಪರಮೇಶ್ಗೆ ನುಗ್ಗೇಹಳ್ಳಿಯಿಂದ 1 ಕಿ.ಮೀ ದೂರದಲ್ಲಿ ಇರುವ ಜಮೀನಿನನ್ನು ರು. 5 ಲಕ್ಷ ಮಾರಾಟ ಒಪ್ಪಿ, ಮುಂಗಡವಾಗಿ ರು. 2.30 ಲಕ್ಷ ಹಣ ಪಡೆದಿದ್ದ. ಜಮೀನನ್ನು ಇನ್ನೂ ರಿಜಿಸ್ಟ್ರಾರ್ ಮಾಡಿ ಕೊಟ್ಟಿರಲಿಲ್ಲ. ಪರಮೇಶ್ ಕೊಟ್ಟಿದ್ದ ಹಣವನ್ನೇ ಸುಪಾರಿ ಕಿಲ್ಲರ್ಸ್ಗೆ ಅಡ್ವಾನ್ಸ್ ಕೊಡಲು ನಟೇಶ್ ಯೋಚಿಸಿದ. ಹಾಗಾಗಿ, ಪರಮೇಶ್ ಕೊಟ್ಟಿದ್ದ ಹಣದಲ್ಲೇ ರು. 2 ಲಕ್ಷ ಕೊಡುವುದಾಗಿ ಹೇಳಿದ. ನಂತರ ಪ್ರಕಾಶ್, ಸಕಲೇಶಪುರ ತಾಲೂಕು ಕಡುವರಹಳ್ಳಿ ಗ್ರಾಮದ ಆಟೋ ಚಾಲಕ ರೌಡಿಯೊಬ್ಬನನ್ನು ಸಂಪರ್ಕಿಸಿ, ವ್ಯವಹಾರ ಕುದುರಿಸಿ, ಹಣ ನೀಡಿದ.
-ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

