ಹಾಸನ

'ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರ ಅಡ'

Published On :

ಅರಸೀಕೆರೆ: ಎಪಿಎಂಸಿ ವ್ಯಾಪಾರ ವಹಿವಾಟನ್ನು ಎನ್‌ಸಿಡಿಎಕ್ಸ್ ಖಾಸಗಿ ಕಂಪನಿಗಳಿಗೆ ನೀಡುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ವರ್ತಕರು ಮತ್ತು ರೈತರನ್ನು ಅಡವಿಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಗಂಜಿಗೆರೆ ಬಸವರಾಜು ಆರೋಪಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯ ಗಣಪತಿ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್‌ಸಿಡಿಎಕ್ಸ್ ಂಪನಿ ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಕೋಟ್ಯಾಂತರ ರು. ವಂಚನೆ ಮಾಡಿರುವ ಆರೋಪ ಎದುರಿಸುತ್ತಿದೆ. ಕಂಪನಿಗೆ ಯಾವುದೇ ಬಂಡವಾಳವಿಲ್ಲದೆ, ಶ್ರಮವಿಲ್ಲದೆ ಹಣ ಮಾಡಲು ಅವಕಾಶ ಕಲ್ಪಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ ಎಂದರು.
ಆಗ್ರಹ: ಸರ್ಕಾರ ಹಾಗೂ ಉನ್ನತಾಧಿಕಾರಿಗಳು ಖಾಸಗಿ ಕಂಪನಿಯೊಂದಿಗೆ ಶಾಮೀಲಾಗಿ ಕೊಬ್ಬರಿ ದಲ್ಲಾಳಿಗಳಿಗೆ, ರೈತರಿಗೆ ದ್ರೋಹವೆಸಗಲು ಮುಂದಾಗಿರುವ ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.
ಟೋಪಿ ಹಾಕಿರುವ ಕಂಪನಿ: ಮತ್ತೊಬ್ಬ ವರ್ತಕ ಜಗದೀಶ್ ಮಾತನಾಡಿ, ರಾಷ್ಟ್ರೀಯ ಸರಕು ವಹಿವಾಟು ಜನ್ಯ ಎನ್‌ಸಿಡಿಎಕ್ಸ್ ಸಂಸ್ಥೆ ಈಗಾಗಲೇ ಹೊರರಾಜ್ಯಗಳಲ್ಲಿ ಸಾಕಷ್ಟು ರೈತರಿಗೆ, ವರ್ತಕರಿಗೆ ಟೋಪಿ ಹಾಕುವ ಕೆಲಸ ಮಾಡಿದೆ.
ಅಂತಹ ದಿವಾಳಿ ಸಂಸ್ಥೆಯೊಂದಕ್ಕೆ ಸರ್ಕಾರ ಮಣೆ ಹಾಕಿರುವುದು ಅವಿವೇಕದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ ಅವರು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸರ್ಕಾರಕ್ಕೆ ಸೂಕ್ತ ಮಾಹಿತಿ ರವಾನಿಸಬೇಕೆಂದು ಆಗ್ರಹಿಸಿದರು.
ಕಳೆದ ಮಾ. 4ರಿಂದ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿರುವುದನ್ನು ಗಮನಿಸಬಹುದಾಗಿದೆ.
ಮನವಿಗೆ ಸ್ಪಂದನೆಯಿಲ್ಲ: ಗೌರವಾಧ್ಯಕ್ಷ ಜಿ.ವಿ. ಬಸವರಾಜ್ ಮಾತನಾಡಿ, ಈ ಸಂಬಂಧ ವರ್ತಕರು ಬೆಂಗಳೂರಿಗೆ ನಿಯೋಗ ಹೋಗಿ ಕಾನೂನು ಸಚಿರಿಗೆ ಇದರಿಂದ ರೈತರಿಗೆ, ವರ್ತಕರಿಗೆ ಆಗಬಹುದಾದ ಅನಾನುಕೂಲಗಳ ಬಗ್ಗೆ ಮನವರಿಕೆ ಮಾಡಲಾಗಿದೆಯಲ್ಲದೆ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ನೀಡಲಾಗಿದೆ. ಆದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವೈಜ್ಞಾನಿಕ ನಿರ್ಧಾರ: ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ ವ್ಯಾಪಾರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ ಅವರು, ಮೊದಲ ಪರಿಸ್ಥಿತಿ ಜಾರಿಯಾಗುವವರೆಗೂ ಯಾವುದೇ ಕಾರಣಕ್ಕೂ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಘೋಷಿಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಎನ್.ಆರ್. ರಾಜು, ಖಜಾಂಚಿ ಗೋವಿಂದರಾಜು, ನಿರ್ದೇಶಕರುಗಳಾದ ಅಶೋಕ್ ಬೊಹ್ರಾ, ಪ್ರಮೋತೇಶ್, ಸುನಿಲ್, ವಿರೂಪಾಕ್ಷಪ್ಪ, ಕಾಂತರಾಜು, ನಾಗರಾಜು ಸೇರಿದಂತೆ ಹಲವು ವರ್ತಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.