ಹಾಸನ

ಮಂಕುಬೂದಿ ಎರಚುವ ಕಾಲ ಹೋಯ್ತು

Published On :

ಹೊಳೆನರಸೀಪುರ: ಜಿಲ್ಲೆಯಲ್ಲಿನ ಮತದಾರರಿಗೆ ಮಂಕುಬೂದಿ ಎರಚಿ ರಾಜಕಾರಣ ಮಾಡುವುದು ಇನ್ನು ಮುಂದೆ ಕೊನೆಯಾಗಲಿದ್ದು, ಮುಕ್ತ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಬದುಕಿಗಾಗಿ ಜಿಲ್ಲೆಯ ಮತದಾರರು ಕಾಂಗ್ರೆಸನ್ನು ಬೆಂಬಲಿಸಲಿದ್ದಾರೆ ಎಂದು ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಎ. ಮಂಜು ಅದಮ್ಯ ವಿಶ್ವಾಸ ವ್ಯಕ್ತಪಡಿಸಿದರು.
ಎಐಸಿಸಿ ನಿರ್ದೇಶನದಂತೆ ತಾಲೂಕು ಕೇಂದ್ರದಲ್ಲಿ ಶುಕ್ರವಾರ ನಡೆದ ಭಾರತ ನಿರ್ಮಾಣ ಯಾತ್ರೆಯ  ಜಾಥಾದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರೊಂದಿಗೆ ಒಗ್ಗಟ್ಟಿನಿಂದ ಪಾಲ್ಗೊಂಡ ನಂತರ ಪಟ್ಟಣದಲ್ಲಿ ಕಾಂಗ್ರೆಸ್ ನಾಯಕಿ ಅನುಪಮ ಅವರ ಜಯಲಕ್ಷ್ಮೀ ರೈಸ್ ಮಿಲ್ ಆವರಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಬರಲಿರುವ ಲೋಕಸಭಾ ಚುನಾವಣೆಯು ಎಲ್ಲಾ ನಿಷ್ಠಾವಂತ ಜನರ ಆಶಯವನ್ನು ಹೊತ್ತುಹೊರಹೊಮ್ಮಲಿದೆ ಎಂದು ನುಡಿದರು.
ಆಶೀರ್ವಾದ ಸಿಗುತ್ತೆ: ದುಷ್ಟ ರಾಜಕಾರಣವನ್ನು ಮಟ್ಟಹಾಕಬೇಕಾದ ಅನಿವಾರ್ಯತೆ ಈ ಚುನಾವಣೆಯಲ್ಲಿ ಬಂದಿದ್ದು, ದೇವೇಗೌಡರಂತಹ ವ್ಯಕ್ತಿಯನ್ನು ರಾಜಕಾರಣದಲ್ಲಿ ಉನತಿಗೇರಿಸಿ ಬೆಳೆಸಿದ ಮತದಾರರೇ, ಈ ಬಾರಿ ತಮ್ಮನ್ನು ಆಶೀರ್ವದಿಸಲಿದ್ದಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಮರುಳು ಮಾಡೋ ಹಾಗಿಲ್ಲ: ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಬಿ. ಶಿವರಾಂ ಮಾತನಾಡಿ, ಈ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸುವುದೇ ಕಾಂಗ್ರೆಸ್‌ನ ಮೊದಲ ಹಾಗೂ ಕೊನೆಯ ಗುರಿಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರವೇ ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ಎದುರು ನೋಡುತ್ತಿದ್ದು, ಮತದಾರರನ್ನು ಮರುಳು ಮಾಡಿ ಮತ ಕೇಳುವ ಕಾಲ ಹೋಗಿದೆ ಎಂದರು.
ಜೇಬು ತುಂಬಿಸಿದ್ದೇ ಸಾಧನೆ: ಕಾಂಗ್ರೆಸ್ ನಾಯಕಿ ಅನುಪಮ ಮಾತನಾಡಿ, ಮಾಜಿ ಪ್ರಧಾನಿ ಹಾಗೂ ಅವರ ಪುತ್ರ ಸೇರಿ ಜಿಲ್ಲೆಯನ್ನು ಅಭಿವೃದ್ಧಿಯ ಹೆಸರಿನಲ್ಲಿ ನಡೆಸಿರುವ ದಬ್ಬಾಳಿಕೆಗಳು ಹಾಗೂ ಕುತಂತ್ರವನ್ನು ಜನರ ಅರಿತಿದ್ದಾರೆ. ಕೇವಲ ಗುತ್ತಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಇಲ್ಲದ ಕಾಮಗಾರಿಗಳನ್ನು ಸೃಷ್ಟಿಸಿ ಬಡ ಜನರನ್ನು ಮರೆತು, ಕೇವಲ ಗುತ್ತಿಗೆದಾರರ ಜೇಬು ತುಂಬಿಸಿದ್ದೇ ಜೆಡಿಎಸ್‌ನ ಸಾಧನೆ ಎಂದರು.
ಲೇವಡಿ: ಕಾಂಗ್ರೆಸ್ ಮುಖಂಡ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ, ನಂತರ ದೇಶದ ಪ್ರಧಾನಿಯಾಗಿದ್ದಾಗ ಬಡಜನರಿಗೆ ಅಕ್ಕಿ ಕೊಡದ ದೇವೇಗೌಡರು, ಕಾಂಗ್ರೆಸ್ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಂಗ್ರೆಸ್‌ನವರಿಗಿಂತಲೂ ಮೊದಲೇ ಹಂಚಲು ಮುಂದಾಗಿ ಪ್ರಚಾರಕ್ಕೆ ತೊಡಗಿದ್ದಾರೆ ಎಂದು ಲೇವಡಿ ಮಾಡಿದರು.
ತಕ್ಕ ಉತ್ತರ ಸಿಗುತ್ತದೆ: ಮತ್ತೊಬ್ಬ ನಾಯಕ ಎಚ್.ಕೆ. ಜವರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಹಾಸನ ಜಿಲ್ಲೆಯ ಫಲಿತಾಂಶದೆಡೆಗೆ ರಾಜ್ಯ ಹಾಗೂ ರಾಷ್ಟ್ರವೇ ಎದುರು ನೋಡುತ್ತಿದ್ದು, ಅದಕ್ಕೆ ಜಿಲ್ಲೆಯ ಜನರು ತಕ್ಕ ಉತ್ತರ ನೀಡಲು ಕಾತರರಾಗಿದ್ದಾರೆ ಎಂದರು.
ರ್ಯಾಲಿಯಲ್ಲಿ ಜಿಲ್ಲೆಯ ನಾನಾ ತಾಲೂಕುಗಳ ಕಾಂಗ್ರೆಸ್ ಮುಖಂಡರು, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೇಯಸ್ ಪಟೇಲ್, ತಾಪಂ ಮಾಜಿ ಅಧ್ಯಕ್ಷ ಎ.ಡಿ. ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ ಹಾಜರಿದ್ದರು.
ಮಂಜು ಉವಾಚ...
* ಬರಲಿರುವ ಲೋಕಸಭಾ ಚುನಾವಣೆ, ಎಲ್ಲಾ ನಿಷ್ಠಾವಂತ ಜನರ ಆಶಯವುಳ್ಳ ಮತದಾನದ ಚುನಾವಣೆಯಾಗಲಿದೆ.
* ದುಷ್ಟ ರಾಜಕಾರಣವನ್ನು ಮಟ್ಟಹಾಕಬೇಕಾದ ಅನಿವಾರ್ಯತೆಯ ಕಾಲ ಈ ಚುನಾವಣೆಯಲ್ಲಿ ಬಂದಿದೆ.
* ದೇವೇಗೌಡರನ್ನು  ಉನ್ನತಿಗೆ ಏರಿಸಿದ ಮತದಾರರೇ, ಈ ಬಾರಿ ನನ್ನನ್ನು ಆಶೀರ್ವದಿಸಿ,ಆಯ್ಕೆ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.