ಹಾಸನ

ಸಂಸ್ಕೃತಿ ಉಳಿವಿಗೆ ಗ್ರಾಮೀಣತೆ ಉಳಿಯಬೇಕು

Published On :

ಕ.ಪ್ರ. ವಾರ್ತೆ , ಹಾಸನ , ಮಾ. 14
ನಗರೀಕರಣ ಹಳ್ಳಿಗಳನ್ನು ಬರಡು ಮಾಡುತ್ತಿದೆ. ಆದರೆ ನಗರಗಳಲ್ಲಿ ಸಂಸ್ಕತಿ ಸಾಯುತ್ತಿದ್ದು, ಅದು ಚಿಗುರಬೇಕಾದರೆ ಗ್ರಾಮೀಣತೆ ಉಳಿಯಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜೇಗೌಡ ಹೊಸಹಳ್ಳಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು, ಹಾಸನ ಜಿಲ್ಲಾ ಘಟಕದ ಸಹಯೋಗದಲ್ಲಿ ಹಾಸನ ತಾಲೂಕು ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜನಸಾಮಾನ್ಯರೊಂದಿಗೆ ನಾಡೋಜ ಎಚ್.ಎಲ್. ನಾಗೇಗೌಡರ ಶತಮಾನೋತ್ಸವ ಸ್ಮರಣೆ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಹಳ್ಳಿಗಾಡಿನಲ್ಲಿ ಹುಟ್ಟಿ ನಗರದಲ್ಲಿ ನಿಂತು ಮತ್ತೇ ಹಳ್ಳಿಗೆ ಚಲಿಸಿದವರು ನಾಗೇಗೌಡರು. ಸಂಸ್ಕೃತಿಯನ್ನು, ಜಾನಪದವನ್ನು ಅವರು ಕಂಡ ರೀತಿಯೇ ವಿಶಿಷ್ಟವಾದುದು. ಇಂದಿನ ಯುವಪೀಳಿಗೆ ಈ ಕಾರ್ಯವನ್ನು ಮುಂದುವರೆಸಬೇಕಿದೆ ಎಂದು ಕರೆ ನೀಡಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ. ಮೋಹನ್ ಮಾತನಾಡಿ,  ನೇರ, ಸರಳ, ಸಜ್ಜನ ವ್ಯಕ್ತಿತ್ವ ನಾಗೇಗೌಡರದು. ದಕ್ಷ ಅಧಿಕಾರಿಯಾಗುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಗೊಂಡು, ಜೀವಪರ ಕಾಳಜಿ ಹೊಂದಿದ್ದ ನಾಗೇಗೌಡರು ಅಪರೂಪದ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು.
ಸಾರ್ಥಕ ಕೆಲಸ: ನಾಗೇಗೌಡರು ನಡೆದು ಬಂದ ದಾರಿ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ  ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಉನ್ನತ ಹುದ್ದೆಯಲ್ಲಿ ಅಧಿಕಾರಿಯಾಗಿದ್ದರೂ ನಾಗೇಗೌಡರ ಇಡೀ ಬದುಕು ಅರಳಿದ್ದು ಜನಸಾಮಾನ್ಯರೊಂದಿಗೆ. ಅವರ ಆಸಕಿಯ ಕ್ಷೇತ್ರ ಜಾನಪದ. ಒಂದು ವಿವಿ ಮಾಡಬಹುದಾದ ಕೆಲಸವನ್ನು ಒಬ್ಬ ವ್ಯಕ್ತಿಯಾಗಿ ಮಾಡಿರುವುದು ಒಂದು ಪವಾಡ ಎಂದು  ಹೇಳಿದರು.
ಅನ್ವೇಷಣೆಗೆ ಪ್ರೇರಣೆ: ನಾಗೇಗೌಡರ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಮೇಟಿಕೆರೆ ಹಿರಿಯಣ್ಣ ಮಾತನಾಡಿ, ನಾಗೇಗೌಡರ ಕೃತಿಗಳ ಪರಿಭಾಷೆ ವೈವಿಧ್ಯಮಯ. ಅವರ ಪ್ರವಾಸಿ ಕೃತಿಗಳು ಭಾರತದ ಭೌಗೋಳಿಕ ಅನ್ವೇಷಣೆಗೆ ಪ್ರೇರಣೆ ನೀಡಬಲ್ಲ ಶಕ್ತಿಯನ್ನು ಪಡೆದುಕೊಂಡಿವೆ ಎಂದರು.
ಸಾಹಿತ್ಯ ತಲುಪಲಿ: ಉಪನ್ಯಾಸನ ನೀಡಿದ ಹಾಸನದ ಎ.ವಿ.ಕೆ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಸೀ.ಚ.ಯತೀಶ್ವರ ಮಾತನಾಡಿದರು.
ಚಿಂತನೆ ಜಾನಪದವಾಗಲಿ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ ಮಾತನಾಡಿ, ಒಬ್ಬ ವ್ಯಕ್ತಿಯಾಗಿ ನಾಗೇಗೌಡರು ಮಾಡಿರುವ ಕೆಲಸ ಅರ್ಥವಾಗಬೇಕಾದರೆ ನಮ್ಮ ಮನಸ್ಸುಗಳು, ಚಿಂತನೆ ಜಾನಪದವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕನ್ನಡ ವಿಭಾಗದ ಕಾಂತರಾಜಜ್ಸ್ವಾಗತಿಸಿದರು, ಇತಿಹಾಸ ವಿಭಾಗದ ಎಂ.ಪಿ. ಗೋಪಾಲ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ವೇತ, ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಜರಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.