ವೈಭವದ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ
ಹೊಳೆನರಸೀಪುರ: ಭಕ್ತಿವರ್ಧನ ಕ್ಷೇತ್ರವೆಂದು ಹೆಸರುಗಳಿಸಿರುವ ವಶಿಷ್ಟ ಮುನಿಗಳಿಗೆ ದರ್ಶನಭಾಗ್ಯವನ್ನಿತ್ತ ಐತಿಹ್ಯ ಹೊಂದಿರುವ ಪಟ್ಟಣ ಪುರದೈವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಬಣ್ಣಗಳ ಹಬ್ಬ ಹೋಳಿ ಹುಣ್ಣಿಮೆಯ ದಿನವಾದ ಭಾನುವಾರ ಅಸಂಖ್ಯ ಭಕ್ತ ಸಮೂಹದ ನಡುವೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟ ಭಕ್ತ ಜನರ ನಡುವೆ ಹೋಳಿ ಹುಣ್ಣಿಮೆ ಪ್ರಯುಕ್ತ ಬಣ್ಣಗಳನ್ನು ಸುರಿದುಕೊಂಡು ಸಂಭ್ರಮಿಸುತ್ತಿದ್ದ ಮಕ್ಕಳು ಹಾಗೂ ಯುವಕರ ಗುಂಪು, ನರಸಿಂಹನ ದರ್ಶನ ಮಾಡಿ ರಥವನ್ನು ಎಳೆಯಲು ಕಾದು ನಿಂತ ಭಕ್ತರು, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಮನದಲ್ಲಿ ಹರಸಿಕೊಂಡು ರಥಕ್ಕೆ ಹಣ್ಣು ಜವನವನ್ನು ಎಸೆದು ಕೃತಾರ್ಥರಾದರು.
ಈ ನಡುವೆ ಜಾತ್ರೆಯಲ್ಲಿ ಮಾರುತ್ತಿದ್ದ ಪೀಪಿಗಳಿಂದ ವಿಚಿತ್ರ ಸದ್ದು ಮಾಡುತ್ತಾ ಆನಂದ ಪಡುವವರ ಜತೆಗೆ, ರಥೋತ್ಸವಕ್ಕೆ ಬಂದ ಜನರಿಗಾಗಿಯೇ ಕಟ್ಟಿದ್ದ ಜಾತ್ರೆಯ ಸಿಹಿ ತಿನಿಸಿನ ಅಂಗಡಿಗಳು, ಜಾತ್ರಾ ಆಟಿಕೆಗಳನ್ನು ಮಾರುವವರ ದಂಡು ಇವೆಲ್ಲವೂ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದ ಮನಮೋಹಕ ದೃಶ್ಯಗಳು.
ರಥ ಎಳೆದು ಕೃತಾರ್ಥರಾದ ಭಕ್ತರು: ಬಣ್ಣ ಬಣ್ಣದ ಹೂವು ಮತ್ತು ಬಟ್ಟೆಗಳಿಂದ ಅಲಂಕರಿಸಲಾಗಿದ್ದ ಬ್ರಹ್ಮರಥದಲ್ಲಿ ಪ್ರಸನ್ನ ಕಮಲಾಕಾಂತೋ ಧರ್ಮಶೃಂಗಕೃತಾಲಯ, ಭಕ್ತೇಷ್ಟಾರ್ಥ ಪ್ರದೋನಿತ್ಯಂ ಶ್ರೀ ನೃಸಿಂಹೋ ವಿರಾಜತೇ ಎಂಬಂತೆ ಭಕ್ತರ ಇಷ್ಟಾರ್ಥ್ಥಗಳನ್ನು ನೆರವೇರಿಸುವ ಶ್ರೀ ನರಸಿಂಹ ದೇವರನ್ನು ಸಕಲ ಪೂಜಾ ವಿಧಿ ವಿಧಾನಗಳಿಂದ ವೈಖಾನಸ ಆಗಮೋಕ್ತವಾಗಿ ನೆರವೇರಿಸಿ ಕುಳ್ಳಿರಿಸಿದ ಬಳಿಕ ರಥದಲ್ಲಿ ಕುಳಿತ ಯುವಕರ ಗುಂಪು ನಗಾರಿ ಬಾರಿಸತೊಡಗಿದ ಕೂಡಲೇ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ಕೃತಾರ್ಥರಾದರು.
ರಥೋತ್ಸವ ಆರಂಭಗೊಳ್ಳುವುದಕ್ಕೂ ಮೊದಲು ಉತ್ಸವ ಮೂರ್ತಿಯನ್ನು ರಥಕ್ಕೆ ಕುಳ್ಳಿರಿಸುವ ಮುನ್ನ ಮಕ್ಕಳ ಭಾಗ್ಯ ಇಲ್ಲದೆ ಹರಕೆಯನ್ನು ಹೊತ್ತ ಹೆಣ್ಣುಮಕ್ಕಳಿಗಾಗಿ ವಿಶೇಷ ಪೂಜೆ ನೆರವೇರಿದ ಬಳಿಕ ಸ್ವಾಮಿ ಪ್ರಸಾದವನ್ನು ಹೆಣ್ಣುಮಕ್ಕಳಿಗೆ ನೀಡಲಾಗುತ್ತದೆ. ನಂತರ ಆಗಮಿಕರು ಪೂಜಾ ವಿಧಿಗಳನ್ನು ನೆರವೇರಿಸಿದ ಬಳಿಕ ಉತ್ಸವ ಮೂರ್ತಿಯನ್ನು ರಥಕ್ಕೆ ಕುಳ್ಳಿರಿಸಿ ಮಹಾಮಂಗಳಾರತಿ ನೆರವೇರಿದ ಬಳಿಕ ರಥವು ದೇವಾಲಯದ ಎದುರಿನ ಕೋಟೆಯ ನಾಲ್ಕು ರಾಜಬೀದಿಗಳಲ್ಲಿ ಸಾಗಿ ನಡೆಯಿತು.
ಶಾಸಕರಿಂದ ಪೂಜೆ: ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ರೇವಣ್ಣ ಕುಟುಂಬದವರು ದೇವರಿಗೆ ಹಾಗೂ ಬ್ರಹ್ಮರಥಕ್ಕೆ ಪೂಜೆ ಸಲ್ಲಿಸಿದರು. ವರ್ಷಕ್ಕೊಮ್ಮೆ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ನಡೆಯುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ವೈಭವವನ್ನು ನೋಡಿ ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನರಸಿಂಹನ ದರ್ಶನ ಪಡೆದರು.
ಈ ವೇಳೆ ಯಾವುದೇ ಅಹಿತಕರ ಘಟನೆನಡೆಯದಂತೆ ಇಲ್ಲಿನ ಪೊಲೀಸ್ ಇಲಾಖೆ ಗೃಹರಕ್ಷಕ ದಳದವರನ್ನೂ ಒಳಗೊಂಡಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿತ್ತು.
ಪಾನಕ ವಿತರಣೆ
ರಥೋತ್ಸವ ಸಾಗಿ ಬರುವ ಬರುವ ಕೋಟೆಯ ನಾಲ್ಕು ರಾಜಬೀದಿಗಳಲ್ಲಿ ಜಾತ್ರೆಗಾಗಿ ಬಂದಿದ್ದ ಭಕ್ತಾದಿಗಳಿಗಾಗಿ ಪಾನಕ ಹಾಗೂ ಪ್ರಸಾದ ವಿತರಿಸಲಾಯಿತು. ಭಕ್ತರು ಬಿಸಿಲು ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಜಾತ್ರೆ ಪ್ರಯುಕ್ತ ಪಟ್ಟಣದ ಬಯಲು ರಂಗ ಮಂದಿರದ ಮೈದಾನದಲ್ಲಿ ಮನರಂಜನಾ ಮೇಳವೂ ಕೂಡ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

